ADVERTISEMENT

ಎಐಎಸ್‌ ನಿಯಮಗಳ ಉಲ್ಲಂಘನೆ: ಅನ್ಯ ಹುದ್ದೆಗಳತ್ತ ಐಎಎಸ್ ಆಸಕ್ತಿ!

ಆರ್. ಮಂಜುನಾಥ್
Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ಅನ್ಯ ವೃಂದದ ಅಧಿಕಾರಿಗಳು ನಿಭಾಯಿಸಬಹುದಾದ ಹುದ್ದೆಗಳ ಹೊಣೆಯನ್ನು ಐಎಎಸ್‌ ಅಧಿಕಾರಿಗಳನ್ನೇ ನೀಡುತ್ತಿರುವ ಸರ್ಕಾರ, ಅಖಿಲ ಭಾರತ ಸೇವೆಗಳ (ಎಐಎಸ್‌) ನಿಯಮಗಳನ್ನು ಉಲ್ಲಂಘಿಸುತ್ತಿದೆ. ಇಷ್ಟೇ ಹುದ್ದೆಗಳು ಐಎಎಸ್ ಅಧಿಕಾರಿಗಳಿಗೆ ನೀಡಬೇಕು ಎಂಬ ನಿಯಮವನ್ನೂ ಮುರಿದಿದೆ.

ಇಲಾಖೆಯಲ್ಲಿ ತಳಹಂತದ ಹುದ್ದೆಯಿಂದ ಮೇಲ್ದರ್ಜೆಗೆ ಏರಿದ ಅಧಿಕಾರಿಗಳಿಗೆ ತಾಂತ್ರಿಕ ತಿಳಿವಳಿಕೆ, ಅನುಭವ ಇರುತ್ತದೆ. ನೀರಾವರಿ, ಲೋಕೋಪಯೋಗಿ, ಇಂಧನ ಇಲಾಖೆಯ ಕಾರ್ಯದರ್ಶಿ, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಿಗೆ ಆಯಾ ಇಲಾಖೆಯ ಮುಖ್ಯ ಎಂಜಿನಿಯರ್ ಶ್ರೇಣಿಯವರಿಗೆ ನೀಡುವ ಪರಿಪಾಟವಿತ್ತು. ಇಂತಹ ಹುದ್ದೆಗಳು ಐಎಎಸ್ ಅಧಿಕಾರಿಗಳಿಗೆ ಮೀಸಲು ಎಂಬ ಅಲಿಖಿತ ನಿಯಮವನ್ನು ಸೃಷ್ಟಿಸಲಾಗಿದೆ ಎಂಬ ಆಪಾದನೆಯೂ ಇದೆ.

ರಾಜ್ಯದ ಆಡಳಿತಾತ್ಮಕ ಹುದ್ದೆಗಳ ಪೈಕಿ ಹಿರಿಯ ಶ್ರೇಣಿಯ 163 ಹುದ್ದೆಗಳನ್ನು ಐಎಎಸ್ ಅಧಿಕಾರಿಗಳಿಗೆ ನಿಗದಿಪಡಿಸಲಾಗಿದೆ. ಎಐಎಸ್‌ ನಿಯಮ ಆರ್‌ 8(2), 11 (ಆರ್‌1)) ಐಎಎಸ್‌ ಅಧಿಕಾರಿಗಳು ಯಾವ ಹುದ್ದೆಯಲ್ಲಿ ಇರಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಈ  ಹುದ್ದೆಗಳಿಗೆ ನಿಯುಕ್ತರಾದ ಐಎಎಸ್ ಅಧಿಕಾರಿಗಳ ಪೈಕಿ ಶೇ 25ರಷ್ಟು ಮಂದಿ ಅಂದರೆ, 40 ಹುದ್ದೆಗಳನ್ನು ಮಾತ್ರ ನಿಗದಿತವಲ್ಲದ, ಎಕ್ಸ್ ಕೇಡರ್‌ನಲ್ಲಿ ಕಾರ್ಯನಿರ್ವಹಿಸಬಹುದು. ಆದರೆ, ರಾಜ್ಯದಲ್ಲಿ ಈ ಸಂಖ್ಯೆ 129ರಷ್ಟಿದೆ.

ADVERTISEMENT

ಕರ್ನಾಟಕಕ್ಕೆ ಹಂಚಿಕೆಯಾದ ಐಎಎಸ್ ಅಧಿಕಾರಿಗಳ ಪೈಕಿ ಶೇ 40ರಷ್ಟು ಮಂದಿ ನಿಯೋಜನೆ ಮೇರೆಗೆ ಕೇಂದ್ರ ಸೇವೆಗೆ ಹೋಗಬಹುದು. ಅಂದರೆ, 65 ಮಂದಿ ಹೋಗಲು ಅವಕಾಶ ಇದೆ. ಆದರೆ, ಈ ಸಂಖ್ಯೆ 25 ಅನ್ನು ದಾಟಿಲ್ಲ. 

ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖೆಗಳ ಮುಖ್ಯಸ್ಥರು, ನಿಗಮ, ಮಂಡಳಿಗಳ ಪ್ರಮುಖ ಹುದ್ದೆಗಳನ್ನು ಎಕ್ಸ್ ಕೇಡರ್ ಹುದ್ದೆಗಳು ಎಂದು ಗುರುತಿಸಲಾಗಿದೆ. ಈ ಹುದ್ದೆಗಳಲ್ಲಿ, ಹಿರಿಯ ಶ್ರೇಣಿಯ ಅಧಿಕಾರಿಗಳ ಸಂಖ್ಯೆ 40 ಅನ್ನು ಮೀರುವಂತಿಲ್ಲ. ಒಂದು ವೇಳೆ, ಇದ್ದರೂ ಆರು ತಿಂಗಳಿಗಿಂತ ಹೆಚ್ಚು ಅವಧಿ ಮುಂದುವರಿಯುವಂತಿಲ್ಲ. ಮುಂದುವರಿಯುವ ಅನಿವಾರ್ಯವಿದ್ದರೆ,  ಕೇಂದ್ರ ಸರ್ಕಾರದ ಅನುಮತಿ ಅಗತ್ಯ ಎಂದು ನಿಯಮ ಹೇಳಿದೆ.

‘ಐಎಎಸ್‌ ಅಧಿಕಾರಿಗಳು ಕೇಡರ್‌ ಹುದ್ದೆಯ ಜೊತೆಗೆ ಎಕ್ಸ್‌–ಕೇಡರ್‌ ಹುದ್ದೆಗಳಲ್ಲಿ ವರ್ಷಾನುಗಟ್ಟಲೆ ಮುಂದುವರಿದಿದ್ದಾರೆ. ಕೇಂದ್ರ ಸರ್ಕಾರದ ಹುದ್ದೆಗಳಿಗೆ ಹೋಗಲು ಬಯಸದ ಇವರು, ನಿಗಮ–ಮಂಡಳಿ ಸೇರಿದಂತೆ ಹಲವು ಹುದ್ದೆಗಳನ್ನೇ ಹೆಚ್ಚುವರಿಯಾಗಿ ಹೊಂದಿದ್ದಾರೆ. ಕೆಲವರು ಕೇಡರ್‌ ಹುದ್ದೆ ಜೊತೆಗೆ ಎರಡು–ಮೂರು ಎಕ್ಸ್‌ ಕೇಡರ್‌ ಹುದ್ದೆಗಳನ್ನೂ ಹೊಂದಿದ್ದಾರೆ. ಇದರಿಂದ ಐಎಎಸ್‌ಯೇತರ ಅಧಿಕಾರಿಗಳಿಗೆ ಉನ್ನತ ಹುದ್ದೆ ವಹಿಸಿಕೊಳ್ಳುವ, ಬಡ್ತಿ ಹೊಂದುವ ಅವಕಾಶ ತಪ್ಪುತ್ತಿದೆ. ರಾಜ್ಯ ಸರ್ಕಾರದಲ್ಲಿ ಆಡಳಿತದ ನಿಯಮಗಳನ್ನು ಮಾಡುವವರು ಐಎಎಸ್‌ ಅಧಿಕಾರಿಗಳೇ ಆಗಿರುವುದರಿಂದ ಮುಖ್ಯಮಂತ್ರಿ, ಸಚಿವರಿಗೆ ಎಐಎಸ್‌ ನಿಯಮಗಳ ಮಾಹಿತಿ, ಅದರ ಉಲ್ಲಂಘನೆಯ ಅರಿವಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

‘ರಾಜ್ಯ ಸರ್ಕಾರ ತನ್ನ ಅಧೀನದ ಇಲಾಖೆ, ನಿಗಮ–ಮಂಡಳಿ, ಪ್ರಾಧಿಕಾರಗಳಿಗೆ ಎಕ್ಸ್–ಕೇಡರ್‌ ಮೂಲಕ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳನ್ನೇ ನಿಯೋಜಿಸುತ್ತಿದೆ. ಎಲ್ಲ ಹುದ್ದೆಗಳಲ್ಲೂ ಇವರ ಅಗತ್ಯವಿಲ್ಲ. ಇವರನ್ನು ಯಾವ ಆಧಾರದ ಮೇಲೆ ನಿಯೋಜಿಸಲಾಗುತ್ತಿದೆ ಎಂಬ ಮಾರ್ಗಸೂಚಿಯೂ ಇಲ್ಲ. ಈ ಮಾರ್ಗಸೂಚಿ ಇದ್ದರೆ, ಪ್ರಕಟಿಸಿ ಎಂಬ ಮನವಿಯನ್ನೂ ಐಎಎಸ್‌ ಅಧಿಕಾರಿಗಳು ಮುಚ್ಚಿಹಾಕುತ್ತಿದ್ದಾರೆ’ ಎಂದು ದೂರಿದರು.

‘ಎಲ್ಲ ಹುದ್ದೆಗಳಲ್ಲೂ ಆಕ್ರಮಣ ಸರಿಯಲ್ಲ’

‘ಐಎಎಸ್‌, ಐಪಿಎಸ್‌ ಹಾಗೂ ಐಎಫ್‌ಎಸ್‌ ಅಧಿಕಾರಿಗಳಿಗೆ ಅವರದ್ದೇ ಆದ ಹುದ್ದೆಗಳಿವೆ. ಆ ಸ್ಥಾನಗಳಿಗೆ ಬೇರೆಯವರು ಹೋಗುವಂತಿಲ್ಲ. ಅದರಂತೆಯೇ ಅವರು ಅಗತ್ಯವಿಲ್ಲದ ಹುದ್ದೆಗಳನ್ನೂ ಆಕ್ರಮಿಸಿಕೊಳ್ಳುವುದು ಸರಿಯಲ್ಲ. ಪರಿಸರ ಕ್ಷೇತ್ರ ಇಲಾಖೆ, ನಿಗಮ, ಪ್ರಾಧಿಕಾರಗಳಿಗೆ ಐಎಎಸ್‌ ಅಧಿಕಾರಿಗಳನ್ನು ಕೂರಿಸುವುದು ನಿಯಮಬಾಹಿರ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಸದಸ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ವಿಷಯದಲ್ಲಿ  ಹೈಕೋರ್ಟ್‌ನಲ್ಲಿ ನಾನು ದಾಖಲಿಸಿರುವ ಮೊಕದ್ದಮೆಯ ಆದೇಶದಲ್ಲಿ ಇದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ’ ಎಂದು ಆಂಜನೇಯ ರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.