ಬೆಂಗಳೂರು: ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವವರ ಮೇಲಿನ ಹಲ್ಲೆ, ದಾಳಿಯನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ರಜತ ಮಹೋತ್ಸವವನ್ನು ಸೋಮವಾರ ದೆಹಲಿಯಿಂದ ವಿಡಿಯೊ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಸಮರ ಸೇನಾನಿಗಳ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಅವರಿಗೆ ₹ 50 ಲಕ್ಷದ ವಿಮಾ ರಕ್ಷೆ ನೀಡಲಾಗಿದೆ ಎಂದರು.
ವೈದ್ಯಕೀಯ ಸಲಕರಣೆ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆಯ ಹಾದಿಯಲ್ಲಿದೆ. ದೇಶ ಈಗಾಗಲೇ 1 ಕೋಟಿ ಪಿಪಿಇ ಕಿಟ್, 1.25 ಕೋಟಿ ಎನ್ 95 ಮುಖಗವಸು ತಯಾರಿಸಿದೆ. 30 ಸಾವಿರ ಹೆಚ್ಚುವರಿ ಎಂಬಿಬಿಎಸ್ ಹಾಗೂ 15 ಸಾವಿರ ಸ್ನಾತಕೋತ್ತರ ಸೀಟುಗಳನ್ನು ಸರ್ಕಾರ ಹೆಚ್ಚಿಸಿದೆ. 2025ರೊಳಗೆ ದೇಶದಿಂದ ಕ್ಷಯ ರೋಗ ನಿರ್ಮೂಲನೆ ಮಾಡುವ ಸಂಕಲ್ಪ ಮಾಡಲಾಗಿದೆ ಎಂದರು.
ರಾಜ್ಯವು ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ ಅವರು, ವಿಶ್ವವಿದ್ಯಾಲಯದ ಸಾಧನೆಗಳನ್ನು ಸಹ ಕೊಂಡಾಡಿದರು.
ರಜತ ಮಹೋತ್ಸವ ಪ್ರಯುಕ್ತ ನಡೆದ ಹ್ಯಾಕಥಾನ್ ಕೈಪಿಡಿ, ಅಂಚೆ ಲಕೋಟೆಯನ್ನು ರಾಜ್ಯಪಾಲ ವಜೂಭಾಯಿ ವಾಲಾ ಬಿಡುಗಡೆಗೊಳಿಸಿಸರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಜೆ.ಸುಧಾಕರ್, ಕುಲಪತಿ.ಡಾ.ಎಸ್.ಸಚ್ಚಿದಾನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.