ADVERTISEMENT

ರೈತರ ಬದುಕು ಹಸನಾಗಿಸಲು ನ್ಯಾನೋ ಯೂರಿಯಾ: ಸಿಎಂ ಬೊಮ್ಮಾಯಿ

12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ’ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 13:46 IST
Last Updated 7 ಮಾರ್ಚ್ 2022, 13:46 IST
ಬೆಂಗಳೂರಿನಲ್ಲಿ ಸೋಮವಾರ ನ್ಯಾನೋವಿಜ್ಞಾನಿ ಪ್ರೊ. ಎಸ್. ಸ್ವಾಮಿನಾಥನ್ ಅವರಿಗೆ ಪ್ರತಿಷ್ಠಿತ ‘ಸಿಎನ್ಆರ್ ರಾವ್ ವಿಜ್ಞಾನ ಪ್ರಶಸ್ತಿ’ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಇದ್ದರು.
ಬೆಂಗಳೂರಿನಲ್ಲಿ ಸೋಮವಾರ ನ್ಯಾನೋವಿಜ್ಞಾನಿ ಪ್ರೊ. ಎಸ್. ಸ್ವಾಮಿನಾಥನ್ ಅವರಿಗೆ ಪ್ರತಿಷ್ಠಿತ ‘ಸಿಎನ್ಆರ್ ರಾವ್ ವಿಜ್ಞಾನ ಪ್ರಶಸ್ತಿ’ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಇದ್ದರು.   

ಬೆಂಗಳೂರು: ‘ನ್ಯಾನೋ ತಂತ್ರಜ್ಞಾನದ ಮೂಲಕ ತಯಾರಿಸಿರುವ ಯೂರಿಯಾ ರಸಗೊಬ್ಬರವು ಪರೀಕ್ಷಾ ಹಂತದಲ್ಲಿ ಯಶಸ್ವಿಯಾಗಿದ್ದು, ಇದು ಮುಂಬರುವ ದಿನಗಳಲ್ಲಿ ರೈತರ ಬದುಕನ್ನು ಹಸನಾಗಿಸಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವರ್ಚುವಲ್ ಮಾದರಿಯಲ್ಲಿ ಆಯೋಜಿಸಿರುವ ಮೂರು ದಿನಗಳ 12ನೇ ವರ್ಷದ ‘ಬೆಂಗಳೂರು-ಇಂಡಿಯಾ ನ್ಯಾನೋ ಸಮ್ಮೇಳನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

`ನ್ಯಾನೋ ಯೂರಿಯಾವನ್ನು ರಾಜ್ಯದ ಎಲ್ಲ ಕೃಷಿ ವಿ.ವಿ.ಗಳಲ್ಲಿ ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ. ಮುಂಬರುವ ದಿನಗಳಲ್ಲಿ ಇದು ಕೃಷಿಕರ ಅವಿಭಾಜ್ಯ ಅಂಗವಾಗಲಿದ್ದು, ನ್ಯಾನೋ ತಂತ್ರಜ್ಞಾನವು ಬದುಕಿನಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ’ ಎಂದು ನುಡಿದರು.

ADVERTISEMENT

‘ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರವು ನ್ಯಾನೋ ತಂತ್ರಜ್ಞಾನದ ತೊಟ್ಟಿಲು ಆಗಬೇಕು. ಇದಕ್ಕೆ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದ್ದು, ಅಗತ್ಯ ನೀತಿಗಳನ್ನು ರೂಪಿಸಲಿದೆ’ ಎಂದು ಭರವಸೆ ನೀಡಿದರು.

‘ಬೆಂಗಳೂರಿನಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ವಿಶ್ವದರ್ಜೆಯ 180 ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿವೆ. ಇವು ನ್ಯಾನೋ ತಂತ್ರಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯಲಿವೆ. ಒಂದು ಅಣುವಿನಲ್ಲಿರುವ ಅಗಾಧ ಶಕ್ತಿಯನ್ನು ಮನುಕುಲದ ಒಳಿತಿಗೆ ಹೇಗೆ ಉಪಯೋಗಿಸಿಕೊಳ್ಳಬಹುದು ಎನ್ನುವುದೇ ನ್ಯಾನೋ ತಂತ್ರಜ್ಞಾನದ ವೈಶಿಷ್ಟ್ಯವಾಗಿದೆ. ಹೀಗಾಗಿ ಇದು `ಸೀಡ್ ತಂತ್ರಜ್ಞಾನ’ವಾಗಿದ್ದು, ಸುಸ್ಥಿರತೆ ಮತ್ತು ಅವಕಾಶ ಎರಡನ್ನೂ ಹೊತ್ತು ತರಲಿದೆ’ ಎಂದು ಬೊಮ್ಮಾಯಿ ಪ್ರತಿಪಾದಿಸಿದರು.

‘ಅಧ್ಯಾತ್ಮ ಮತ್ತು ವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಒಂದನ್ನೊಂದು ಪ್ರೇರೇಪಿಸುತ್ತವೆ. ಇವುಗಳ ಜತೆಗೆ ಆವಿಷ್ಕಾರದ ಶಕ್ತಿಯು ಸೇರಿಕೊಂಡಾಗ ಅದು ಮನುಷ್ಯನ ಬದುಕನ್ನು ನಿರ್ಣಾಯಕವಾಗಿ ಬದಲಿಸುತ್ತದೆ. ಇದಕ್ಕೆ ನ್ಯಾನೋ ತಂತ್ರಜ್ಞಾನ ಅತ್ಯುತ್ತಮ ಉದಾಹರಣೆಯಾಗಿದೆ’ ಎಂದು ಬಣ್ಣಿಸಿದರು.

ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಮುಖ್ಯಸ್ಥ ಪ್ರೊ.ನವಕಾಂತ ಭಟ್ ಮಾತನಾಡಿ, ‘ಇದು ಕೇವಲ ದೇಶದ ಸ್ವಾತಂತ್ರ್ಯದ 75ನೇ ವರ್ಷವಷ್ಟೇ ಅಲ್ಲ, ನಮ್ಮಲ್ಲಿ ಸೆಮಿಕಂಡಕ್ಟರ್ ಟ್ರಾನ್ಸಿಸ್ಟರ್ ಬಂದ 75ನೇ ವರ್ಷವೂ ಆಗಿದೆ. ನ್ಯಾನೋ ತಂತ್ರಜ್ಞಾನವು ಈಗ ನಮ್ಮ ಬದುಕಿನ ಭಾಗವಾಗುತ್ತಿದೆ’ ಎಂದರು.

ಶೀಘ್ರ ನ್ಯಾನೋ ತಂತ್ರಜ್ಞಾನ ನೀತಿಗೆ ರೂಪ: ‘ಸರ್ಕಾರ ಶೀಘ್ರ ಸಮಗ್ರ ನ್ಯಾನೋ ತಂತ್ರಜ್ಞಾನ ನೀತಿಯನ್ನು ಹೊರತರಲಿದೆ. ಈ ಮೂಲಕ ಸಂಶೋಧನಾ ಮತ್ತು ಔದ್ಯಮಿಕ ವಲಯಗಳೆರಡನ್ನೂ ಪರಸ್ಪರ ಹತ್ತಿರಕ್ಕೆ ತರಲಾಗುವುದು. ಇದರಿಂದಾಗಿ, ನ್ಯಾನೋ ತಂತ್ರಜ್ಞಾನದ ಲಾಭವು ಸಮಾಜಕ್ಕೆ ಸಿಗಲಿದೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

‘ನ್ಯಾನೋ ತಂತ್ರಜ್ಞಾನವು ಎಲ್ಲ ವಲಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಈ ತಂತ್ರಜ್ಞಾನದ ಮೂಲಕ 300 ಶತಕೋಟಿ ಡಾಲರ್‌ (₹2314.25 ಕೋಟಿ) ವಹಿವಾಟು ನಡೆಯಲಿದೆ’ ಎಂದು ಹೇಳಿದರು.

ತಂಜಾವೂರಿನ ಎಸ್‌ಎಎಸ್‌ಟಿಆರ್‌ಎ (ಸಾಸ್ತ್ರ) ಡೀಮ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿ ಪ್ರೊ. ಎಸ್. ಸ್ವಾಮಿನಾಥನ್ ಅವರಿಗೆ ಪ್ರತಿಷ್ಠಿತ ಪ್ರೊ. ಸಿಎನ್ಆರ್ ರಾವ್ ವಿಜ್ಞಾನ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಸಮ್ಮೇಳನವು ಬುಧವಾರದವರೆಗೆ ನಡೆಯಲಿದೆ. ಪ್ರೊ. ಸಿ.ಎನ್.ಆರ್. ರಾವ್ ವರ್ಚುವಲ್ ರೂಪದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.