ADVERTISEMENT

ಕಳ್ಳ ನೆವದಲ್ಲಿ ವೀಸಾ ಕೋರಿಕೆ: ಇರಾಕ್‌ ಪ್ರಜೆ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ವಿದೇಶಿಯರಿಗೆ ವೈದ್ಯಕೀಯ ವೀಸಾ ಮಂಜೂರು ಮಾಡುವ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕು’ ಎಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗೆ (ಎಫ್‌ಆರ್‌ಆರ್‌ಒ) ನಿರ್ದೇಶಿಸಿರುವ ಹೈಕೋರ್ಟ್‌, ತಮ್ಮ ಹೆಸರಿನಲ್ಲಿರುವ ಒಂದೆರಡು ಅಕ್ಷರಗಳನ್ನು ಬದಲಾಯಿಸಿಕೊಂಡು ಕಳ್ಳನೆವದಲ್ಲಿ ಭಾರತ ಪ್ರವೇಶಿಸಲು ಮುಂದಾಗಿದ್ದ 33 ವರ್ಷದ ಇರಾಕ್‌ ಪ್ರಜೆಯೊಬ್ಬರ ಮನವಿಯನ್ನು ತಿರಸ್ಕರಿಸಿದೆ.

ವೈದ್ಯಕೀಯ ವೀಸಾ ನೀಡುವುದಕ್ಕೆ ನಿರಾಕರಿಸಿದ್ದ ಎಫ್‌ಆರ್‌ಆರ್‌ಒ ನಿರ್ಧಾರ ಪ್ರಶ್ನಿಸಿ ಬಾಗ್ದಾದ್ ನಿವಾಸಿ ಸಗದ್ ಕರೀಂ ಇಸ್ಮಾಯಿಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

‌ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಎಚ್‌.ಶಾಂತಿಭೂಷಣ್‌, ‘ಅರ್ಜಿದಾರರು ಅವಧಿ ಮೀರಿ ನೆಲೆಸಿದ್ದ ಕಾರಣ ನಿರ್ಗಮನ ಪರವಾನಗಿ ನೀಡಿ ಗಡಿಪಾರು ಮಾಡಲಾಗಿತ್ತು. ಮೊದಲು ಫಾರ್ಮಸಿ ಕೋರ್ಸ್ ವಿದ್ಯಾರ್ಥಿ ಎಂದು ನಂತರ ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ವೀಸಾ ಪಡೆದಿದ್ದರು. ಈ ವೇಳೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ನೆಲೆಸಿದ್ದ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಇದೀಗ ಸಜ್ಜದ್ ಕರೀಂ ಇಸ್ಮಾಯಿಲ್ ಎಂಬ ತಮ್ಮ ಮೂಲ ಹೆಸರನ್ನು ಸಗದ್ ಕರೀಂ ಇಸ್ಮಾಯಿಲ್ ಎಂದು ಬದಲಾಯಿಸಿ ಮತ್ತೊಂದು ಅವಧಿಗೆ ವೀಸಾ ಕೋರಿದ್ದಾರೆ. ಈ ಕಾನೂನುಬಾಹಿರ ಕೋರಿಕೆಯನ್ನು ಪರಿಗಣಿಸಬಾರದು’ ಎಂದು ಕೋರಿದ್ದರು.

ADVERTISEMENT

ಕೇಂದ್ರದ ವಾದವನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಅರ್ಜಿದಾರರು ವಿದೇಶದಲ್ಲಿ ಕುಳಿತು ತಮ್ಮ ಪರವಾಗಿ ವಿಶೇಷ ಪವರ್ ಆಫ್ ಅಟಾರ್ನಿ (ಎಸ್‌ಪಿಎ) ಮೂಲಕ ಅರ್ಜಿ ಸಲ್ಲಿಸಿದಲ್ಲಿ ಅದನ್ನು ಕಾರ್ಯಗತಗೊಳಿಸಲು ಅವಕಾಶವಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.