ಬೆಂಗಳೂರು: ಚಲನಚಿತ್ರ ನಟ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಇದೇ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ.
ಮೈಸೂರಿನ ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಅಲ್ಲಾಳು ಗ್ರಾಮದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. 2020 ರ ಸೆಪ್ಟೆಂಬರ್‌ನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಚಾಮುಂಡಿಪುರಂನ ವಾಸಿಯಾಗಿದ್ದ ವಿಷ್ಣುವರ್ಧನ್ ಅವರು ತಮ್ಮ ಶಾಲಾ ಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ್ದರು. ಮೈಸೂರಿನ ಜತೆ ಉತ್ತಮ ಒಡನಾಟ ಹೊಂದಿದ್ದ ಅವರು ತಮ್ಮ ಹೆಚ್ಚಿನ ಚಲನಚಿತ್ರಗಳ ಚಿತ್ರೀಕರಣವನ್ನು ಮೈಸೂರಿನಲ್ಲೇ ನಡೆಸಲು ಒತ್ತು ನೀಡಿದ್ದರು.
ಸ್ಮಾರಕ ಉದ್ಘಾಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಷ್ಣುವರ್ಧನ್ ಅವರ ಅಳಿಯ ಹಾಗೂ ನಟ ಅನಿರುದ್ಧ್ ಅವರು, ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಬರಲು ಒಪ್ಪಿಕೊಂಡಿದ್ದಾರೆ. ಸ್ಮಾರಕ ಉದ್ಘಾಟನೆಗಾಗಿ ಬಹಳ ವರ್ಷಗಳಿಂದ ಅಭಿಮಾನಿಗಳು ಕಾದಿದ್ದರು. ಆ ದಿನ ಬಂದಿದೆ, ಎಲ್ಲ ಅಭಿಮಾನಿಗಳೂ ಹಾಜರಿರಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.