ಬೆಂಗಳೂರು: ‘ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಈಗಾಗಲೇ ವಿಳಂಬವಾಗಿದೆ. ಆದ್ದರಿಂದ, ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮೈಸೂರು ತಾಲ್ಲೂಕಿನ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಆನ್‌ಲೈನ್ ಮೂಲಕ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪೊಲೀಸ್ ವಸತಿಗೃಹ ನಿರ್ಮಾಣ ಸಂಸ್ಥೆಯ ವತಿಯಿಂದ 5 ಎಕರೆಯಲ್ಲಿ ಸ್ಮಾರಕ ನಿರ್ಮಿಸಲಾಗುತ್ತದೆ ಎಂದರು.
‘ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ವಿಷ್ಣುವರ್ಧನ್ ಪ್ರಮುಖರು. ಶ್ರೇಷ್ಠ ನಾಯಕ ನಟರು ಮಾತ್ರವಲ್ಲದೇ ತಮ್ಮ ವ್ಯಕ್ತಿತ್ವದಲ್ಲೂ ಬಹಳಷ್ಟು ಶ್ರೇಷ್ಠ ಗುಣಗಳನ್ನು ಹೊಂದಿದ್ದ ಅವರು, ಯುವಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಕನ್ನಡ ಚಿತ್ರರಂಗಕ್ಕೆ ರಾಜ್‍ಕುಮಾರ್ ನಂತರದ ಪೀಳಿಗೆಯಲ್ಲಿ ಮಹತ್ವದ ಕೊಡುಗೆ ನೀಡಿದವರಲ್ಲಿ ವಿಷ್ಣುವರ್ಧನ್ ಕೂಡಾ ಸೇರಿದ್ದಾರೆ’ ಎಂದು ಬಣ್ಣಿಸಿದರು.
‘ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಆಗುತ್ತಿರುವುದು ಔಚಿತ್ಯಪೂರ್ಣ. ಸ್ಮಾರಕ ನಿರ್ಮಾಣಕ್ಕೆ ಬಜೆಟ್‌ನಲ್ಲಿ ₹ 11 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸಲು ₹ 5 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.
‘ಸ್ಮಾರಕವು ಸುಸಜ್ಜಿತವಾಗಿ ನಿರ್ಮಾಣಗೊಳ್ಳಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ. ವಿಷ್ಣುವರ್ಧನ್ ಅವರ ಕೀರ್ತಿ ಜನ ಮಾನಸದಲ್ಲಿ ಎಂದೆಂದಿಗೂ ಅಜರಾಮರವಾಗಿರಲಿ. ಅವರ ನಟನಾ ಕೌಶಲ, ಸಾಧನೆಯ ಹಾದಿ ಮುಂದಿನ ಪೀಳಿಗೆಗೆ ಮಾದರಿಯಾಗಲಿ’ ಎಂದೂ ಆಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.