ಬೆಂಗಳೂರು: ಜನ್ಮದಿನ ಆಚರಣೆಯ ನೆಪದಲ್ಲಿ ಪ್ರಸಕ್ತ ವರ್ಷ 500 ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಲು ವಿಶ್ವಧರ್ಮ ಚೇತನ ಮಂಚ್ ನಿರ್ಧರಿಸಿರುವುದು ಶ್ಲಾಘನೀಯ ಎಂದು ತಿರುಪತಿಯ ಸಿದ್ಧಗುರು ಶ್ರೀ ಸಿದ್ದೇಶ್ವರ ಬ್ರಹ್ಮರಿಷಿ ಗುರುದೇವ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಗುರುದೇವ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಆನಂದ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರತಿಯೊಬ್ಬರ ಜೀವನವೂ ಸಮಾಜದ ಇತರ ಜನರಿಗೆ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಿರಬೇಕು. ಒಳ್ಳೆಯ ಮನಸ್ಸಿನಿಂದ ಸಮಾಜಸೇವಾ ಕಾರ್ಯವನ್ನು ಆರಂಭಿಸಿದರೆ ಉಳಿದ ಕೆಲಸವನ್ನು ದೇವರು ಪೂರ್ಣಗೊಳಿಸುವನು. ಅಂತಹ ಮಹೋನ್ನತ ಸೇವಾ ಕಾರ್ಯವನ್ನು ವಿಶ್ವಧರ್ಮ ಚೇತನ ಮಂಚ್ ಹಮ್ಮಿಕೊಂಡಿದೆ. ಡಯಾಲಿಸ್ ಕೇಂದ್ರಗಳ ಜತೆಗೆ, 500 ಕೃತಕ ಅಂಗಗಳು, ಒಂದು ಸಾವಿರ ಯೂನಿಟ್ ರಕ್ತದಾನ ಮಾಡಲು ಮಂಚ್‌ನ ಸದಸ್ಯರು ಸಂಕಲ್ಪ ಮಾಡಿದ್ದಾರೆ. ಇಂತಹ ಕಾರ್ಯಗಳು ಹೆಚ್ಚಾಗಬೇಕು’ ಎಂದು ಹೇಳಿದರು.
ಮೊದಲ ಹಂತದಲ್ಲಿ 84 ಕೃತಕ ಅಂಗಗಳನ್ನು ಕರ್ನಾಟಕ ಮಾರ್ವಾಡಿ ಯುವ ಒಕ್ಕೂಟಕ್ಕೆ ಹಸ್ತಾಂತರಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಸಿದ್ಧಗುರುಗಳು ಪ್ರಬುದ್ಧ ಗುರುಗಳು. ಜನರ ಕಷ್ಟದುಃಖಗಳಲ್ಲಿ ಸದಾ ಭಾಗಿಯಾಗುತ್ತಾರೆ. ಸಮಾಜ ಸೇವಾ ಕಾರ್ಯಗಳ ಮೂಲಕ ಬಡವರು, ದುರ್ಬಲರ ಪರ ಕೆಲಸ ಮಾಡುತ್ತಾರೆ. ಒಳ್ಳೆಯ ಬದುಕಿಗೆ ಮಾರ್ಗದರ್ಶನ ನೀಡುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಆಶ್ರಮದ ಅಭಿವೃದ್ಧಿಗೆ ಸರ್ಕಾರದಿಂದ ನೆರವಿನ ಭರವಸೆ ನೀಡಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿಶ್ವಧರ್ಮ ಚೇತನ ಮಂಚ್‌ನ ರಾಷ್ಟ್ರೀಯ ಮುಖ್ಯಸ್ಥ ರಮೇಶ್ ಸಂಖಲ, ಪ್ರಖರ್ ಗುಲೇಚಾ, ಹ್ಯಾಪಿನೆಸ್ ಆ್ಯಂಡ್ ಜಾಯ್ ಆಶ್ರಮದ ರಾಜ್‌ಕುಮಾರ್ ಸಿಪಾನಿ, ರಮೇಶ್, ಸಂಕ್ಲಾ ನಾಯೋನಲ್ ಅಧ್ಯಕ್ಷ ತೇಜರಾಜ್ ಗುಲೇಚಾ, ಸಲಹಾ ಮಂಡಳಿ ಸದಸ್ಯ ನವೀನ್ ಗಿರಿಯಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.