ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥಶ್ರೀಪಾದರನ್ನು ಕಂಡರೆ, ನೆನೆದರೆ ನೆನಪಾಗುವುದು ಶ್ರೀಗಂಧದ ಕೊರಡು, ತಾನು ಸವೆದು ಜಗವೆಲ್ಲ ಪರಿಮಳ ಬೀರಿ, ಮತ್ತೆ ಭಗವದರ್ಪಿತವಾಗಿ ಜೀವನ ಸಾರ್ಥಕವಾಗುವ ಪರಿ. ಪರಿಶುದ್ಧ ಚಾರಿತ್ರ್ಯ, ಜ್ಞಾನಸಂಪನ್ನತೆ, ಜನಶುಶ್ರೂಷೆ ಅಧ್ಯಾತ್ಮ ಜೀವನದ ಅನಿವಾರ್ಯ ಅಂಗಗಳು. ಇವು ಮೂರಕ್ಕೂ ಜೀವಂತ ಸುಂದರ ಉದಾಹರಣೆ ಪೇಜಾವರ ಶ್ರೀಪಾದರು.
ಶ್ರೀಪಾದರು ತಮ್ಮ ಎಂಟನೆಯ ವಯಸ್ಸಿನಲ್ಲೇ ಸನ್ಯಾಸಾಶ್ರಮಕ್ಕೆ ಅಡಿಯಿಟ್ಟವರು. ಆಶ್ರಮಸ್ವೀಕಾರಕ್ಕೆಂದು ಹಂಪೆಯ ಚಕ್ರತೀರ್ಥಕ್ಕೆ ತೆರಳುವ ಮುನ್ನ ಅವರ ಹಿರಿಯರು, ಸುಬ್ರಹ್ಮಣ್ಯ ಮಠದ ಶ್ರೀ ವಿಶ್ವಜ್ಞತೀರ್ಥ ಶ್ರೀಪಾದರಿಂದ ಆಶೀರ್ವಾದ ಮಂತ್ರಾಕ್ಷತೆ ಕೊಡಿಸಲೆಂದು ಕರೆ ತಂದಿದ್ದರಂತೆ. ಇನ್ನೂ ಎಳೆಯ ಬಾಲಕನನ್ನು ಕಂಡು ವಿಶ್ವಜ್ಞರು ಮನಕರಗಿ, ‘ಏನು ಹುಚ್ಚೇ ನಿಮಗೆ? ಮಗುವಿಗೆ ಆಶ್ರಮ ಕೊಡಿಸುತ್ತೀರಲ್ಲ!’ ಎಂದು ಗದರಿಸಿದ್ದರಂತೆ. ಆದರೆ ಮಗುವಿಗೆ ಸನ್ಯಾಸಾಶ್ರಮವಾಯಿತು. ರಾಮಕುಂಜದ ವೆಂಕಟರಮಣ ವಿಶ್ವೇಶರಾದರು! ಶ್ರೇಷ್ಠ ವಿದ್ವಾಂಸರೂ ತಪಸ್ವಿಗಳೂ ಆಗಿದ್ದ ಭಂಡಾರಕೇರಿ ಮಠದ ಶ್ರೀ ವಿದ್ಯಾಮಾನ್ಯರಿಂದ ವಿದ್ಯಾಭ್ಯಾಸ, ತರಬೇತಿ ಪಡೆದು, ತಮ್ಮ ಚತುರಮತಿ, ಘನ ವಿದ್ವತ್ತೆ, ಸದಾಚಾರ, ನಿತ್ಯಪಾಠ–ಪ್ರವಚನದ ದೀಕ್ಷೆ, ಅದ್ಭುತ ಸಂಘಟನಾ ಚಾತುರ್ಯ, ಸಾಮಾಜಿಕ ಕಳಕಳಿ ಹಾಗೂ ಸತತ ಚಟುವಟಿಕೆಗಳಿಂದ ಇಡಿಯ ಮಾಧ್ವ ಸಮಾಜವಲ್ಲದೆ, ದೇಶದುದ್ದಗಲ ಅಪಾರಕೀರ್ತಿಯೊಂದಿಗೆ ಮೆರೆದಾಗ, ಅದೇ ವಿಶ್ವಜ್ಞರೇ ಅಂದಿದ್ದರಂತೆ, ‘ಮಧ್ವಾನುಜರಾದ ವಿಷ್ಣುತೀರ್ಥರೇ ವಿಶ್ವೇಶರಾಗಿ ಬಂದಂತಿದೆ’ ಎಂದು.
ಶ್ರೀ ವಿದ್ಯಾಮಾನ್ಯರು ಮತ್ತು ಶ್ರೀ ವಿಶ್ವೇಶರ ಗುರುಶಿಷ್ಯ ಸಂಬಂಧ ಅನುಪಮವಾದುದು. ಇಬ್ಬರದೂ ನಿರಂತರ ಶಾಸ್ತ್ರಚಿಂತನೆ. ಪಾಠ–ಪ್ರವಚನ ಪ್ರಣವೋಪಾಸನೆ. ‘ಪುರಂದರ ವಿಠಲ ತಿರುಗೆಂದಪ್ಪಣೆಕೊಟ್ಟ’ ಎಂಬಂತೆ ಅವರಿಬ್ಬರು ಅಪ್ಪಟ ಪರಿವ್ರಾಜಕರಾಗಿದ್ದವರು. ನಿಂತಲ್ಲಿ ನಿಲ್ಲದೆ, ಧರ್ಮಪ್ರಸಾರಕ್ಕೆ, ಸತ್‌ಸಮಾಜ ಸಂಘಟನೆಗೆ ಎಂದು ಊರೂರು ಸಂಚರಿಸುವವರು. ತೊಂಬತ್ತರ ಹರೆಯದಲ್ಲೂ ವಿಶ್ವೇಶಶ್ರೀಪಾದರದು ಯುವಕರೂ ನಾಚುವ ಚಟುವಟಿಕೆಯಿಂದಿದ್ದರು.
‘ಸತ್ಪಾತ್ರದಲ್ಲಿ ಸೇವೆ ಎಂಬುದು ದೇವರ ರಾಜ್ಯದಲ್ಲಿ ಕೊಡಲೇ ಬೇಕಾದ ತೆರಿಗೆ’ ಎಂಬುದು ಆಚಾರ್ಯ ಮಧ್ವರ ನುಡಿ. ಭಗವದುಪಾಸನೆ ಭಗವದನುಗ್ರಹಕ್ಕಾದರೆ, ನಿಸ್ಪೃಹ ಸಮಾಜಸೇವೆ, ಉತ್ತಮ ಸಮಾಜನಿರ್ಮಾಣಕ್ಕೆ ಮತ್ತು ಸಾಧಕನ ಅಂತರಂಗದ ಪರಿಶುದ್ಧಿಗೆ ಎಂಬುದು ಹಿರಿಯರ ಆಶಯ. ಹಾಗೆಯೇ ಬದುಕನ್ನು ರೂಪಿಸಿಕೊಂಡವರು ಶ್ರೀಪಾದರು.
ಗುರುಗಳೆಂದರೆ ಜ್ಞಾನೋಪದೇಶಕರು. ಸ್ವಾಧ್ಯಾಯ ಪ್ರವಚನವನ್ನು ತಪಸ್ಸಿನಂತೆ ಪರಿಗಣಿಸಬೇಕೆಂದು ಉಪನಿಷದ್ ವಚನವಿದೆ. ಪೇಜಾವರರು ಅನುದಿನವು ತಮ್ಮಲ್ಲಿ ಬಂದ ವಿದ್ಯಾರ್ಥಿಗಳಿಗೆ ಶಾಸ್ತ್ರಪಾಠನಿರತರು. ಅವರು ಹಚ್ಚಿದ ಜ್ಞಾನದ ಹಣತೆ ಇಂದು ನೂರು–ಸಾವಿರವಾಗಿ ನಾಡಿನ ತುಂಬ ಬೆಳಗುತಿದೆ. ಅಂತೆಯೇ ಶಿಕ್ಷಾರ್ಥಿಗಳಾಗಿ ಬರುವ ಮಕ್ಕಳನ್ನು ವಿಶೇಷ ಪ್ರೀತಿಯಿಂದ, ವಾತ್ಸಲ್ಯದಿಂದ ಕಾಣುವವರು. ಜ್ಞಾನದ ಹಣತೆಯನ್ನು ನಿರಂತರ ಬೆಳಗಬಲ್ಲ ವಿದ್ಯೆ, ವಿದ್ಯಾರ್ಥಿಗಳು, ವಿದ್ವಾಂಸರೆಂದರೆ ಶ್ರೀಪಾದರಿಗೆ ವಿಶೇಷ ಪಕ್ಷಪಾತವಿತ್ತು. ಯಾವತ್ತೂ ಗುರುಗಳು ಇವರ ಪರವೇ. ಮಠದಲ್ಲಿ, ವಿದ್ಯಾಪೀಠದಲ್ಲಿ ಮಠದವರು ಹಿಂದಿನಿಂದಲೂ ಆಡಿಕೊಳ್ಳುವ ಮಾತೊಂದಿತ್ತು: ‘ಪೇಜಾವರಮಠಕ್ಕೆ ಬರುವುದಾದರೆ ವಿದ್ಯಾರ್ಥಿ
ಗಳಾಗಿ ಬರಬೇಕು, ಮಠದ ಕೆಲಸಗಾರರಾಗಿ ಅಲ್ಲ’ ಎಂದು. ಅವರಾಗಲಿ, ಅವರ ಗುರುಗಳಾಗಲಿ ಎಂದಿಗೂ ವಿದ್ಯಾಪಕ್ಷಪಾತಿ– ವಿದ್ಯಾರ್ಥಿ ಪಕ್ಷಪಾತಿ!
ಸ್ವಾತಂತ್ರ್ಯ ಚಳವಳಿಯ, ಗಾಂಧೀಜಿಯವರ ಪ್ರಭಾವದಲ್ಲಿ ಬೆಳೆದು ಬಂದ ಗುರುಗಳು ತೊಡುತ್ತಿದ್ದುದು ಖಾದಿವಸ್ತ್ರ; ಮಾತ್ರವಲ್ಲ, ನಡೆನುಡಿ ಎಲ್ಲವೂ ವಿಶಿಷ್ಟವಾದುದು. ಅಪಾರ ಜನಮನ್ನಣೆ, ಪ್ರೀತಿ ಗೌರವ, ವೈಭವ ದೊರೆತಿದ್ದರೂ ಎಂಥವರಲ್ಲೂ – ಅತಿಸಾಮಾನ್ಯರಲ್ಲೂ – ಸಹಜವಾಗಿ ಬೆರೆಯುವ ಸರಳತನ, ಮಗುವಿನ ಮುಗ್ಧತೆ ಮನದಲ್ಲಿ ಹಾಗೂಮುಖದಲ್ಲಿ. ವಿದ್ಯಾರ್ಥಿದೆಸೆಯಲ್ಲಿ ತನ್ನ ವಾಸದ ಕೊಠಡಿಯನ್ನು ತಾನೇ ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದರಂತೆ. ಮಠೀಯರು, ವಿದ್ಯಾರ್ಥಿಗಳು, ಸಂಬಂಧಿಕರು ತಪ್ಪೆಸಗಿದರೆ ಸಹಸ್ರನಾಮವನ್ನು ಪಠಿಸುತ್ತಾ, ಉಪವಾಸ ಸತ್ಯಾಗ್ರಹ ಮಾಡುತ್ತಾ – ಹೀಗೆ ಸಾತ್ವಿಕವಾದ ಕ್ರಮದಿಂದಲೇ ಅವರನ್ನು ತಿದ್ದುವವರು. ಗಾಂಧೀಜಿಯವರ ಹತ್ಯೆಯಾದಾಗ ಮಡಿವಂತ ಪಂಡಿತರರು ಕುಹಕವಾಡಿದರೆ, ಗುರುಗಳು ನೊಂದುಕೊಂಡು ಉಪವಾಸ ಮಾಡಿದ್ದರಂತೆ.
‘ಅತಿಥಿಗಳೆಡೆಯಲಿ ಭೇದವ ಮಾಡುತ – ಗೀತೆಯನೋದಿದರೇನು ಫಲ – ಗತಿಯನು ಬಯಸಿದರೇನು ಫಲ’ ಸಮಾನತೆಯನ್ನು, ಸಮಾಜೋನ್ನತಿಯ ಯುಗಧರ್ಮವನ್ನಾಗಿ ಪರಿಗಣಿಸಿದವರು ಅವರು. ಊಟೋಪಚಾರದಲ್ಲೂ ಭೇದ ಇರಕೂಡದು. ನಿತ್ಯದಲ್ಲಿ, ಸಮಾರಾಧನೆಯ ಸಂದರ್ಭದಲ್ಲು, ತನಗೇನು ತಿನಿಸೋ, ಎಲ್ಲರಿಗೂ ಅದೇ ಇರಬೇಕು; ವ್ಯತ್ಯಾಸವಾಗಕೂಡದು. ಅದನ್ನವರು ಸ್ವತಃ ಬಂದು ವಿಚಾರಿಸಿಕೊಂಡಾರು. ವ್ಯತ್ಯಾಸವಾದಲ್ಲಿ ಮುನಿಸಿಕೊಂಡಾರು, ನೊಂದು ಕೊಂಡಾರು! ಮಡಿವಂತ ಸಮಾಜವನ್ನು ಎದುರು ಹಾಕಿಕೊಂಡು, ಸ್ವತಃ ತಮ್ಮ ಗುರುಗಳು ಮುನಿಸಿಕೊಂಡರೂ, ಹರಿಜನಕೇರಿಗೆ ತೆರಳಿ, ಅವರೊಡನೆ ಬೆರೆತು ಸೋದರತೆಯನ್ನು ಮೆರೆದವರವರು!
ಹರಿಯುವ ನದಿಗೆ ಅಣೆಕಟ್ಟು ಕಟ್ಟುವುದು ಶಕ್ತಿಯ ಸಂಚಯನಕ್ಕಾಗಿ. ಹರಿಯುವುದೇ ಸ್ವಭಾವವಾ
ಗಿರುವ ನೀರು ಸ್ವಲ್ಪ ಸಮಯ ತಡದೀತು. ಮತ್ತೆ ಅಣೆಕಟ್ಟನ್ನೇ ಮೀರಿ ನಡೆದೀತು. ಅದಕ್ಕೆಂದೇ ಪಕ್ಕದಲ್ಲಿ ಕಾಲುವೆ ನಿರ್ಮಿಸಿ ನೀರನ್ನು ಯೋಗ್ಯವಾದ ಕಡೆಗೆ ಹರಿಯಿಸುತ್ತೇವೆ ಮತ್ತು ಬೆಳಕು ಹಾಗೂ ಸಮೃದ್ಧಿ
ಯನ್ನು ಪಡೆಯುತ್ತೇವೆ. ಸಾಂಸಾರಿಕ ಆಸೆ–ಆಕಾಂಕ್ಷೆಗಳು ಸಹಜವೇ ಆದರೂ ಅವನ್ನು ಉದಾತ್ತೀಕರಿಸಿ, ಭಗವಂತನೆಡೆಗೆ, ಸಮಾಜದೆಡೆಗೆ ಹರಿಸಿ, ಜ್ಞಾನದ ಬೆಳಕು, ಸಮಾಜದ ಸಮೃದ್ಧಿಯನ್ನು ಕಂಡವರು ಗೆದ್ದ
ವರು ನಮ್ಮ ಶ್ರೀಪಾದರು. ನೂರಾರು, ಸಾವಿರಾರು ವಿದ್ಯಾರ್ಥಿಗಳನ್ನು, ಅಧ್ಯಾಪಕರುಗಳನ್ನು ತಮ್ಮ ಮಕ್ಕಳೆಂದು ಪ್ರೀತಿಯಿಂದ ಕಂಡರು. ಹಬ್ಬಹರಿದಿನಗಳನ್ನು ಅವರೊಂದಿಗೇ ಸಂಭ್ರಮಿಸಿದರು. ಅವರೊಂದಿಗೆ ಸುಖ–ದುಃಖಗಳನ್ನು ಹಂಚಿಕೊಂಡರು. ಬದುಕು ಕಾಣಲು ಬಯಸಿ ಬಂದವರಿಗೆ, ಸಂಸ್ಥೆಗಳಲ್ಲಿ, ನಿರ್ವ್ಯಾಜವಾಗಿ ತಮ್ಮ ಪ್ರಭಾವ ಬಳಸಿ, ಯೋಗ್ಯ ಉದ್ಯೋಗ ದೊರಕುವಂತೆ ಮಾಡಿ ಸಾವಿರಾರು ಮನೆಗಳಲ್ಲಿ ಆನಂದದ ದೀಪ ಬೆಳಗುವಂತೆ ಮಾಡಿದವರಿವರು. ಒಂದೇ ಎರಡೇ – ಅತಿವೃಷ್ಟಿಯ ಅನಾಹುತ
ವಿರಲಿ, ಬರಗಾಲವೇ ಬರಲಿ, ಜನರ ಕಣ್ಣೀರೊರಸಲು ಸದಾಸಿದ್ಧರಾಗುತ್ತಿದ್ದರು ಪೇಜಾವರರು.
ಅವರು ಕ್ಷಮಾಶೀಲರು, ಸನ್ಮಾರ್ಗಬೋಧಕರು, ‘ಆತ್ಮನಃ ಮೋಕ್ಷಾರ್ಥಂ ಜಗದ್ಧಿತಾಯ ಸಚ’ ಎಂಬ ಆರ್ಯವಾಣಿಯನ್ನು ಅಕ್ಷರಶಃ ಬದುಕಿದವರು ನನ್ನ ಗುರುಗಳಾದ ಶ್ರೀ ಪೇಜಾವರರು.
(ವಿದ್ಯಾಭೂಷಣ: ದಾಸರಪದಗಳನ್ನು ಜನಪ್ರಿಯಗೊಳಿಸಿದಸಂಗೀತ ವಿದ್ವಾಂಸರು)
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.