ADVERTISEMENT

ವಿಟಿಯು ಕುಲಪತಿ ನೇಮಕ: ಮಧ್ಯಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 15:10 IST
Last Updated 12 ಏಪ್ರಿಲ್ 2024, 15:10 IST
<div class="paragraphs"><p>ಸುಪ್ರೀಂ ಕೋರ್ಟ್‌&nbsp;</p></div>

ಸುಪ್ರೀಂ ಕೋರ್ಟ್‌ 

   

ನವದೆಹಲಿ: ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಎಸ್. ವಿದ್ಯಾಶಂಕರ್ ಅವರನ್ನು ಕುಲಪತಿಯನ್ನಾಗಿ ನೇಮಕ ಮಾಡಿರುವ ಪ್ರಕರಣದಲ್ಲಿ ಹೈಕೋರ್ಟ್‌ನ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. 

ವಿದ್ಯಾಶಂಕರ್‌ ನೇಮಕ ಪ್ರಶ್ನಿಸಿ ಮೈಸೂರು ವಿಶ್ವವಿದ್ಯಾಲಯದ ಮಾಜಿ ಹಂಗಾಮಿ ಕುಲಪತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಬಿ. ಶಿವರಾಜ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಶಿವರಾಜ್ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. 

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಕೆ.ವಿ.ವಿಶ್ವನಾಥನ್ ಅವರಿದ್ದ ನ್ಯಾಯಪೀಠ, ತಮ್ಮ ವಿರುದ್ಧ ಮಾಡಿರುವ ಟೀಕೆಗಳನ್ನು ಆದೇಶದಿಂದ ತೆಗೆದು ಹಾಕಲು ಮನವಿ ಮಾಡಿ ಹೈಕೋರ್ಟ್‌ನ ಮೊರೆ ಹೋಗಲು  ಅರ್ಜಿದಾರರಿಗೆ ಅನುಮತಿ ನೀಡಿದೆ. 

ಪ್ರಕರಣವೊಂದರಲ್ಲಿ ಅರ್ಜಿದಾರರು ಶಿಕ್ಷೆ ಅನುಭವಿಸಿದ್ದಾರೆ ಎಂದು ಪ್ರತಿವಾದಿಗಳು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಆ ‍ಪ್ರಕರಣದಲ್ಲಿ ಅವರು ದೋಷಮುಕ್ತರಾಗಿದ್ದರು. ಆದರೆ, ಅರ್ಜಿದಾರರ ಅರ್ಹತೆ, ಪ್ರಾಮಾಣಿಕತೆ ಹಾಗೂ ನಡವಳಿಕೆಗಳ ಬಗ್ಗೆ ಹೈಕೋರ್ಟ್‌ ನ್ಯಾಯಪೀಠವು ಪ್ರತಿಕೂಲ ಟೀಕೆಗಳನ್ನು ಮಾಡಿದೆ. ಅರ್ಜಿದಾರರಿಗೆ ಹೈಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಲು ಯಾವುದೇ ಅವಕಾಶ ಸಿಕ್ಕಿಲ್ಲ’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ನ್ಯಾಯಪೀಠವು, ‘ನ್ಯಾಯಾಲಯವು ಪರಿಗಣಿಸಬೇಕಾದ ಕೆಲವು ವಿವರಣೆಗಳನ್ನು ಅರ್ಜಿದಾರರು ಹೊಂದಿದ್ದಾರೆ ಎಂದು ನಮಗೆ ಅನಿಸುತ್ತಿದೆ. ಹಾಗಾಗಿ, ಹೈಕೋರ್ಟ್‌ ಸಹಾನುಭೂತಿಯಿಂದ ಅವರ ಅಹವಾಲನ್ನು ಆಲಿಸಬೇಕು ಹಾಗೂ ಸೂಕ್ತ ಆದೇಶ ನೀಡಬೇಕು’ ಎಂದು ಸೂಚಿಸಿದೆ. 

‘ವಿದ್ಯಾಶಂಕರ್‌ ಅವರನ್ನು ಯುಜಿಸಿ ನಿಯಮಗಳು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಯ್ದೆ–1994ರ ಕಲಂ 13ಕ್ಕೆ ವಿರುದ್ಧವಾಗಿ ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ. ಹೀಗಾಗಿ, ಅರ್ಹತೆ ಮತ್ತು ಪ್ರಾಮಾಣಿಕತೆ ಹೊಂದಿರುವ ವ್ಯಕ್ತಿಯನ್ನು ವಿಟಿಯುಗೆ ಕುಲಪತಿಯನ್ನಾಗಿ ನೇಮಕ ಮಾಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ನಿರ್ದೇಶಿಸಬೇಕು’ ಎಂದು ಕೋರಿ ಶಿವರಾಜ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.