ADVERTISEMENT

ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ ಸುಬ್ಬಾರೆಡ್ಡಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 19:31 IST
Last Updated 19 ಡಿಸೆಂಬರ್ 2021, 19:31 IST
ವಿವೇಕ ಸುಬ್ಬಾರೆಡ್ಡಿ
ವಿವೇಕ ಸುಬ್ಬಾರೆಡ್ಡಿ   

ಬೆಂಗಳೂರು:ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ನ್ಯಾಯವಾದಿ ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಟಿ.ಜಿ.ರವಿ ಮತ್ತು ಖಜಾಂಚಿಯಾಗಿ ಹರೀಶ್ ಎಂ.ಟಿ. ಚುನಾಯಿತರಾಗಿದ್ದಾರೆ.

2021-24ರ ಅವಧಿಗೆ ಬೆಂಗಳೂರು ವಕೀಲರ ಸಂಘಕ್ಕೆ ಭಾನುವಾರ ಮತದಾನ ನಡೆಯಿತು. ಸುಮಾರು 16,500 ವಕೀಲರು ಮತದಾನದ ಹಕ್ಕು ಹೊಂದಿದ್ದರು, ಈ ಪೈಕಿ ಸುಮಾರು 11,500 ಮಂದಿ ಮತ ಚಲಾಯಿಸಿದ್ದರು.

ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಅವರ ಪುತ್ರರಾಗಿರುವ ಮತ್ತು ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ವಿವೇಕ್ 1,900ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ADVERTISEMENT

ಒಟ್ಟು ಚಲಾವಣೆಯಾಗಿರುವ ಮತಗಳ ಪೈಕಿ ವಿವೇಕ್ ರೆಡ್ಡಿ 4,804 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಮತ್ತು ಹಾಲಿ ಅಧ್ಯಕ್ಷರಾಗಿದ್ದ ಎ.ಪಿ.ರಂಗನಾಥ್ 2,894 ಮತಗಳನ್ನು ಪಡೆದಿದ್ದಾರೆ. ಆರ್.ರಾಜಣ್ಣ 2,545 ಹಾಗೂ ಎಚ್.ಸಿ.ಶಿವರಾಮ್ 876 ಮತಗಳನ್ನು ಗಳಿಸಿದ್ದಾರೆ.

ಟಿ.ಜಿ.ರವಿ ಅವರು ತಮ್ಮ ಪ್ರತಿಸ್ಪರ್ಧಿ ಎಚ್.ವಿ. ಪ್ರವೀಣ್ ಗೌಡ ಅವರನ್ನು 496 ಮತಗಳ ಅಂತರದಿಂದ ಸೋಲಿಸಿದರು. ರವಿ ಅವರು 3,030 ಮತಗಳನ್ನು ಪಡೆದರೆ, ಪ್ರವೀಣ್ ಗೌಡ 2,534 ಮತಗಳನ್ನು ಗಳಿಸಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸ್ಥಾನಕ್ಕೆ ಮಾತ್ರವಲ್ಲದೆ, ಹೈಕೋರ್ಟ್‌ನ 7, ಮೇಯೋಹಾಲ್ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್‌ನ ತಲಾ 5 ಹಾಗೂ ಸಿಟಿ ಸಿವಿಲ್ ಕೋರ್ಟ್‌ನ 12 ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೂ ಮತದಾನ ನಡೆದು, ಕಾರ್ಯಕಾರಿ ಸಮಿತಿ ಸದಸ್ಯರು ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.