ಬೆಂಗಳೂರು: ‘ದೃಷ್ಟಿದೋಷ ಇರುವವರೂ ಸೇರಿದಂತೆ ಅಂಗವಿಕಲರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) 928 ಬಸ್‌ಗಳಲ್ಲಿ ಧ್ವನಿ ಪ್ರಕಟಣೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ’ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ತಿಳಿಸಿದೆ.
‘ಅಂಗವಿಕಲರ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮೆಟ್ರೊಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೋರೇಷನ್‌ಗೆ (ಬಿಎಂಟಿಸಿ) ನಿರ್ದೇಶಿಸಬೇಕು‘ ಎಂದು ಕೋರಿ ಬೆಂಗಳೂರಿನ ‘ಶ್ರೇಯಸ್ ಗ್ಲೋಬಲ್ ಟ್ರಸ್ಟ್ ಫಾರ್ ಸೋಷಿಯಲ್ ಕಾಸ್‘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಿಎಂಟಿಸಿ ಪರ ಹಾಜರಿದ್ದ ವಕೀಲರು, ಅರ್ಜಿದಾರರ ಮನವಿಗೆ ಸಂಬಂಧಿಸಿದ ಕ್ರಮಗಳನ್ನು ಜಾರಿಗೊಳಿಸಿರುವ ಕುರಿತಂತೆ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ‘ಅರ್ಜಿದಾರರ ಮನವಿ ಈಡೇರಿದೆ. ನ್ಯಾಯಾಲಯದ ಎಲ್ಲ ನಿರ್ದೇಶನಗಳನ್ನು ಸಾರಿಗೆ ಸಂಸ್ಥೆ ಜಾರಿಗೊಳಿಸಿದೆ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಿಲೇವಾರಿ ಮಾಡಿತು.
ಅರ್ಜಿದಾರರ ಪರ ವಾದ ಮಂಡಿಸಿದ್ದ ಎನ್.ಶ್ರೇಯಸ್, ‘ಈ ಮೊದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬಿಎಂಟಿಸಿ ಬಸ್‌ಗಳು ಮತ್ತು ಮೆಟ್ರೊ ರೈಲಿನಲ್ಲಿ ದ್ವನಿಯ ಮೂಲಕ ಪ್ರಯಾಣಿಕರಿಗೆ ವಿವರಣೆ ನೀಡಲಾಗುತ್ತಿತ್ತು. ಇದರಿಂದ ದೃಷ್ಟಿ ದೋಷವುಳ್ಳವರಿಗೆ ಇಳಿಯವ ಸ್ಥಳ ಮತ್ತು ಬಸ್ ನಿಲ್ದಾಣಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತಿತ್ತು. ಆದರೆ, ಕೆಲ ದಿನಗಳ ಹಿಂದೆ ಈ ವ್ಯವಸ್ಥೆಯನ್ನು ಹಠಾತ್ ಸ್ಥಗಿತಗೊಳಿಸಲಾದೆ. ಇದರಿಂದ ದೃಷ್ಟಿ ದೋಷವುಳ್ಳವರಿಗೆ ತೀವ್ರ ತೊಂದರೆ ಉಂಟಾಗಿದೆ’ ಎಂದು ದೂರಿದ್ದರು.
ಮನವಿ ಏನಿತ್ತು?: ‘ಓಲಾ, ಉಬರ್ ಬಾಡಿಗೆ ವಾಹನಗಳಲ್ಲಿ ಸಂಚರಿಸುವಾಗ ಮಾರ್ಗದ ವಿವರವನ್ನು ಧ್ವನಿಯ ಮೂಲಕ ಕೇಳಿಸಿಕೊಳ್ಳಬಹುದಾಗಿದೆ. ಯಾವುದೇ ರೀತಿಯ ತೊಂದರೆ ಎದುರಾದರೆ ಸಂಬಂಧಿಕರನ್ನು ತಕ್ಷಣವೇ ಸಂಪರ್ಕಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಇಂತಹುದೇ ಸೌಲಭ್ಯವನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲೂ ಕಲ್ಪಿಸಲು ಬಿಎಂಟಿಸಿ ಬಸ್‌ಗಳು ಮತ್ತು ವೋಲ್ವೊ (ವಜ್ರ) ಬಸ್‌ಗಳಿಗೂ ವಿಸ್ತರಿಸಲು ನಿರ್ದೇಶಿಸಬೇಕು‘ ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.