ADVERTISEMENT

ಶಾಶ್ವತ ಕುಡಿಯುವ ನೀರಿಗೆ ಆಗ್ರಹ: ಬಳ್ಳಾರಿಯ ಹರಗಿನಡೋಣಿಯಲ್ಲಿ ಮತದಾನ ಬಹಿಷ್ಕಾರ

ಮತಗಟ್ಟೆಯಿಂದ ದೂರ ಉಳಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 3:52 IST
Last Updated 3 ನವೆಂಬರ್ 2018, 3:52 IST
ಮತದಾನದಿಂದ ದೂರ ಉಳಿದ ಹರಗಿನಡೋಣಿ ಗ್ರಾಮಸ್ಥರು
ಮತದಾನದಿಂದ ದೂರ ಉಳಿದ ಹರಗಿನಡೋಣಿ ಗ್ರಾಮಸ್ಥರು   

ಬಳ್ಳಾರಿ: ಕುಡಿಯುವ ನೀರು ಪೂರೈಕೆಗೆ ಶಾಶ್ವತ ಕ್ರಮ ಕೈಗೊಳ್ಳದಿದ್ದರೆ ಲೋಕಸಭಾ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಹೇಳಿದ್ದ ತಾಲ್ಲೂಕಿನ ಹರಗಿನಡೋಣಿ ಗ್ರಾಮಸ್ಥರು ತಮ್ಮ ಮಾತನ್ನು ಬಿಟ್ಟಕೊಡದೆ ಅಲ್ಲಿನ ಮೂರು ಮತಗಟ್ಟೆಗಳಿಂದ ದೂರ ಉಳಿದಿದ್ದಾರೆ. ಬೆಳಿಗ್ಗೆಯಿಂದ ಅಲ್ಲಿ ಮತದಾನ ನಡೆದಿಲ್ಲ.

ಗ್ರಾಮಕ್ಕೆ ಶುಕ್ರವಾರ ಸಂಜೆ ಭೇಟಿ ಮಾಡಿ ಭರವಸೆಗಳನ್ನು ನೀಡಿದ್ದ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌ ಅವರ ಮಾತಿಗೂ ಮತದಾದರು ಮಣಿದಿಲ್ಲ. ’ಅವರು ನೀಡಿರುವ ಭರವಸೆಗಳು ನಮ್ಮಲ್ಲಿ ನಂಬಿಕೆ ಮೂಡಿಸಿಲ್ಲ’ ಎಂದೇ ಹೇಳಿದ್ದಾರೆ.

‘ಗ್ರಾಮದಲ್ಲಿ ಮೂರು ಮತಗಟ್ಟೆಗಳಿವೆ. 2100 ಮತದಾರರಿದ್ದಾರೆ, ನಾವು ಯಾರೂ ಮತದಾನ ಮಾಡುವುದಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ನಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದೆವು. ನಂತರ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೂ ಸಲ್ಲಿಸಿದ್ದೆವು. ಇಬ್ಬರೂ ನಮ್ಮ ಗ್ರಾಮವನ್ನು ನಿರ್ಲಕ್ಷ್ಯಿಸಿದ್ದಾರೆ’ ಎಂದು ಮುಖಂಡರಾದ ದೊಡ್ಡನಗೌಡ ಮತ್ತು ಬಸವರಾಜ ತಿಳಿಸಿದರು.

ADVERTISEMENT

ಗ್ರಾಮಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಬಿ.ಬೆಳಗಲ್ಲು ಪಂಚಾಯ್ತಿಯಲ್ಲಿ ಬೆಳಗಲ್ಲು, ಬೆಳಗಲ್ಲು ತಾಂಡಾ, ಜಾನೇಕುಂಟೆ, ಜಾನೇಕುಂಟೆ ತಾಂಡಾ ಮತ್ತು ನಮ್ಮ ಗ್ರಾಮವಿದೆ. ನಮಗೆ ಮಾತ್ರ ನೀರಿಲ್ಲ. ಕುಡಿಯಲೂ ನೀರಿಲ್ಲ, ದಿನಬಳಕೆಗೂ ನೀರಿಲ್ಲ. ಕೊಳವೆಬಾವಿಗಳು ಬತ್ತಿವೆ. ನಮಗೆ ಕಾಲುವೆ ನೀರು ಪೂರೈಸಿ ಎಂಬ ಮನವಿಗೆ ಯಾರೂ ಸ್ಪಂದಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶಾಸಕರಾಗಲಿ, ಜಿಲ್ಲಾಧಿಕಾರಿಯಾಗಲೀ ನಮ್ಮೂರಿಗೆ ಬರಲೇ ಇಲ್ಲ. ಜಿಲ್ಲಾಧಿಕಾರಿ ನೀಡಿರುವ ಭರವಸೆಗಳ ಮೇಲೆ ನಮಗೆ ನಂಬಿಕೆ ಇಲ್ಲ. ಅವರು ಖಚಿತ ಭರವಸೆಗಳನ್ನು ನೀಡಲಿಲ್ಲ. ಸುಮ್ಮನೆ ಹೇಳಿಹೋದರಷ್ಟೇ’ ಎಂದು ಈ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ನೀರು ಪೂರೈಕೆಗೆ ಅಗತ್ಯವಿರುವ ಪೈಪ್‌ಲೈನ್‌ನನ್ನು ತಕ್ಷಣಕ್ಕೆ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಟ್ಯಾಂಕರ್‌ ನೀರು ಪೂರೈಸಲಾಗುವುದು ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. ನ.15ರಂದು ಗ್ರಾಮಕ್ಕೆ ಭೇಟಿ ನೀಡಿ ಎಲ್ಲ ಅಹವಾಲುಗಳನ್ನೂ ಆಲಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಆ ಸಂದರ್ಭದಲ್ಲೇ ಗ್ರಾಮಸ್ಥರು ಮತದಾನದಿಂದ ದೂರ ಉಳಿಯುವ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು.

ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಹೇಳಿಕೆ ನೀಡುತ್ತಿದ್ದಂತೆಯೇ ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಚುನಾವಣಾ ಆಯೋಗವೂ ಕೂಡಲೇ ವರದಿ ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ಸೂಚಿಸಿತ್ತು.

ಗ್ರಾ.ಪಂ.ಸ್ಥಳಾಂತರಕ್ಕೆ ಮುತ್ಕೂರು ಗ್ರಾಮಸ್ಥರ ವಿರೋಧ: ಮತದಾನ ಬಹಿಷ್ಕಾರ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮುತ್ಕೂರು ಗ್ರಾಮದಲ್ಲಿಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

ಗ್ರಾಮ ಪಂಚಾಯತಿ ಕಚೇರಿ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿ,ಮತಗಟ್ಟೆ ಕಡೆಗೆ ಸುಳಿಯದೆ ಮತದಾರರು ದೂರು ಉಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.