ಬೆಂಗಳೂರು: ನಗರದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಸರ್ಕಾರೇತರ ಸಂಘ–ಸಂಸ್ಥೆಗಳು ಸಹ ಸ್ವಯಂಪ್ರೇರಿತವಾಗಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದು, ಮತದಾನದ ಮಹತ್ವ ತಿಳಿಸಲು ಕರಪತ್ರ ಹಂಚಿಕೆ, ವಾಕಥಾನ್, ಸೈಕಲ್ ಜಾಥಾ, ಬೀದಿ ನಾಟಕ ಸೇರಿ ವಿವಿಧ ಪ್ರಯತ್ನಗಳನ್ನು ಮಾಡುತ್ತಿವೆ.
ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದೆ. ಸಂಘ–ಸಂಸ್ಥೆಗಳು ಉದ್ಯಾನ ಸೇರಿ ನಗರದ ಪ್ರಮುಖ ಸ್ಥಳಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಮನೆ ಮನೆಗೆ ತೆರಳಿ ಕರಪತ್ರಗಳನ್ನೂ ಹಂಚಲಾಗುತ್ತಿದೆ. ಅದೇ ರೀತಿ, ಚುನಾವಣೆಯ ಮಹತ್ವವನ್ನೂ ಸಾರಲಾಗುತ್ತಿದೆ. ವಾರಾಂತ್ಯಗಳಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿಯೂ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇನ್ನೊಂದೆಡೆ ಬಿಬಿಎಂಪಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿ ವಿವಿಧ ಸರ್ಕಾರಿ ಇಲಾಖೆ ಹಾಗೂ ಸಂಸ್ಥೆಗಳು ಮತದಾನ ಜಾಗೃತಿ ಜಾಥಾ ನಡೆಸುತ್ತಿವೆ.
ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ಮತದಾರರ ಸಂಖ್ಯೆ 97.13 ಲಕ್ಷಕ್ಕೆ ತಲುಪಿದೆ. ಇವರಲ್ಲಿ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಲವರು ಉದ್ಯೋಗ ಸಂಬಂಧ ವಲಸೆ ಬಂದು, ಇಲ್ಲಿ ನೆಲೆಸಿದವರಾಗಿದ್ದಾರೆ. ಈಗಾಗಲೇ ಕೆಲ ಐಟಿ–ಬಿಟಿ ಕಂಪನಿಗಳು ಮತದಾನ ನಡೆಯುವ ದಿನದಂದು ರಜೆ ಘೋಷಿಸಿವೆ. ಇನ್ನೂ ಕೆಲ ಕಂಪನಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವ ಅವಕಾಶ ನೀಡಿವೆ.
2008, 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದೆ. ಇದಕ್ಕೆ ಮತದಾನದ ಬಗ್ಗೆ ಜಾಗೃತಿ ಕೊರತೆಯೇ ಪ್ರಮುಖ ಕಾರಣ ಎನ್ನಲಾಗಿದೆ.
ಮನೆಗೆ ತೆರಳಿ ಮನವಿ: ಶೇಷಾದ್ರಿಪುರಂ ತೆರಿಗೆದಾರರ ಸಂಘವು ಮತದಾನದ ಜಾಗೃತಿ ಸಾರುವ ಕರಪತ್ರಗಳನ್ನು ಮನೆ ಮನೆಗೆ ಹಂಚುತ್ತಿದೆ. ಬಿ.ಪ್ಯಾಕ್ ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲಿ ಜಾಗೃತಿ ಯಾತ್ರೆ ಹಮ್ಮಿಕೊಂಡಿದೆ. ಸಂಚಾರಿ ವಾಹನದ ಮೂಲಕ ‘ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಸಂದೇಶವನ್ನು ಸಾರಲಾಗುತ್ತಿದೆ.
ರಾಷ್ಟ್ರೋತ್ಥಾನ ಯೋಗ ಕೇಂದ್ರ, ಲೆಕ್ಕ ಪರಿಶೋಧಕರ ಸಂಘ, ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಸೇರಿ ವಿವಿಧ ಸಂಘ–ಸಂಸ್ಥೆಗಳು ಅರಿವು ಮೂಡಿಸುತ್ತಿವೆ. ಆರ್.ವಿ. ಕಾಲೇಜು, ಪಿಇಎಸ್ ಸೇರಿ ವಿವಿಧ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ತಿಳಿಸಲಾಗುತ್ತಿದೆ.
Highlights - ಅಂಕಿ–ಅಂಶಗಳು 97.13 ಲಕ್ಷ ಬೆಂಗಳೂರಿನ ಒಟ್ಟು ಮತದಾರರು 8,615 ಬೆಂಗಳೂರಿನ ಒಟ್ಟು ಮತಗಟ್ಟೆಗಳು ಶೇ 55.12 2018ರ ಮತದಾನ ಪ್ರಮಾಣ
Quote - ಈ ಹಿಂದಿನ ಚುನಾವಣೆಗಳಲ್ಲಿ ಬೆಂಗಳೂರಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿರುವುದು ಬೇಸರದ ಸಂಗತಿ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು. ಈ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ. ।ಪಿ.ಸಿ.ರಾವ್ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ
Quote - ಬೆಂಗಳೂರಿನಲ್ಲಿ ಶೇ 50ರಷ್ಟು ಮಾತ್ರ ಮತದಾನವಾಗುತ್ತಿದೆ. ನನ್ನ ಮತದಿಂದ ಏನಾಗುತ್ತದೆ ಎಂಬ ಅಸಡ್ಡೆ ಇದಕ್ಕೆ ಕಾರಣ. ಮತದಾನ ಹೆಚ್ಚಳಕ್ಕೆ ಅಪಾರ್ಟ್‌ಮೆಂಟ್ ಸಮುಚ್ಚಯ ಸೇರಿ ವಿವಿಧೆಡೆ ಜಾಗೃತಿ ಮೂಡಿಸುತ್ತಿದ್ದೇವೆ. ।ರಾಘವೇಂದ್ರ ಎಚ್.ಎಸ್. ಬಿ.ಪ್ಯಾಕ್ ಕಾರ್ಯಕ್ರಮ ಸಂಯೋಜಕ
Cut-off box - ಜಾಲತಾಣಗಳಲ್ಲಿ ಜಾಗೃತಿ ಸಂಘ–ಸಂಸ್ಥೆಗಳು ತಮ್ಮ ಅಧಿಕೃತ ಪೋರ್ಟಲ್ ಸಾಮಾಜಿಕ ಜಾಲತಾಣಗಳಲ್ಲಿಯೂ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಆರೋಗ್ಯ ಶಿಕ್ಷಣ ಕನ್ನಡ ಮತ್ತು ಸಂಸ್ಕೃತಿ ಸೇರಿ ವಿವಿಧ ಸರ್ಕಾರಿ ಇಲಾಖೆಗಳ ಅಧಿಕೃತ ಪೋರ್ಟಲ್‌ಗಳಲ್ಲಿಯೂ ಮತದಾನದ ಬಗ್ಗೆ ಜಾಗೃತಿ ಪುಟಗಳು ತೆರೆದುಕೊಳ್ಳಲಿವೆ. ಅವುಗಳ ಮೇಲೆ ಕ್ಲಿಕ್ಕಿಸಿದಾಗ ಕರ್ನಾಟಕ ಚುನಾವಣಾ ಆಯೋಗದ ಪೋರ್ಟಲ್ ತೆರೆದುಕೊಳ್ಳಲಿದ್ದು ಮತದಾನಕ್ಕೆ ಸಂಬಂಧಿಸಿದ ಮಾಹಿತಿಗಳು ದೊರೆಯಲಿವೆ. ಬಿಎಂಟಿಸಿ ಸಹ ಟಿಕೆಟ್‌ಗಳಲ್ಲಿ ‘ತಪ್ಪದೆ ಮತದಾನ ಮಾಡಿ’ ಎಂದು ಮನವಿ ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.