ADVERTISEMENT

ಮತ ಎಣಿಕೆ ಮರೆತ ಚುನಾವಣಾ ಆಯೋಗ!

ಅಧಿಸೂಚನೆಯಲ್ಲಿ ದಿನಾಂಕದ ಉಲ್ಲೇಖವೇ ಇಲ್ಲ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 19:29 IST
Last Updated 28 ಸೆಪ್ಟೆಂಬರ್ 2019, 19:29 IST
   

ಬೆಂಗಳೂರು: ಚುನಾವಣಾ ಆಯೋಗರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಶುಕ್ರವಾರ ಉಪಚುನಾವಣೆ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದ್ದರೂ, ಮತ ಎಣಿಕೆಯ ದಿನಾಂಕವನ್ನು ನಮೂದಿಸಲು ಮರೆತೇಬಿಟ್ಟಿತ್ತು!

ಬಳಿಕ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರವೊಂದನ್ನು ರವಾನಿಸಿದ ಚುನಾವಣಾ ಆಯೋಗ, ಡಿಸೆಂಬರ್‌ 9ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದೆ.

ಯಾವುದೇ ಚುನಾವಣೆಯಲ್ಲೂ ಮತದಾನದಷ್ಟೇ ಫಲಿತಾಂಶ ಯಾವಾಗ ಬರುತ್ತದೆ ಎಂಬ ಕುತೂಹಲ ಸಹಜವಾಗಿರುತ್ತದೆ. ಹಿಂದೆ ನಡೆದ ಉಪ ಚುನಾವಣೆ ಸಹಿತ ಎಲ್ಲ ಚುನಾವಣೆಗಳ ಅಧಿಸೂಚನೆಯಲ್ಲೂ ಮತ ಎಣಿಕೆ ಎಂದು ನಡೆಯುತ್ತದೆ ಎಂದು ಉಲ್ಲೇಖ ಇರುತ್ತಿತ್ತು. ಇದೇ ಮೊದಲ ಬಾರಿಗೆ ಆಯೋಗ ಎಡವಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ.

ADVERTISEMENT

ನೀತಿ ಸಂಹಿತೆ ಯಾವಾಗಿನಿಂದ ಜಾರಿಗೆ ಬರುತ್ತದೆ ಎಂಬುದು ಸಹ ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ನಮೂದಾಗಿರಲಿಲ್ಲ. ನಾಮಪತ್ರ ಸಲ್ಲಿಕೆಆರಂಭವಾಗಲಿರುವ ನವೆಂಬರ್‌ 11ರಿಂದಲೇ ನೀತಿ ಸಂಹಿತೆಯೂ ಜಾರಿಗೆ ಬರಲಿದೆ ಎಂದು ಮುಖ್ಯ ಕಾರ್ಯದರ್ಶಿಯವರಿಗೆ ಬರೆಯಲಾದ ಪತ್ರದಲ್ಲಿ ತಿಳಿಸಲಾಗಿದೆ.

ಚುನಾವಣಾ ಆಯೋಗದ ಈ ಅರೆಬರೆ ಮತ್ತು ಅವಸರದ ಅಧಿಸೂಚನೆಗೆ ವಿವಿಧ ರಾಜಕೀಯ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.ಯಾವುದೋ ಒಂದು ಪಕ್ಷದ ಹಿತಾಸಕ್ತಿ ಕಾಪಾಡುವ ಸಲುವಾಗಿ ಚುನಾವಣಾ ಆಯೋಗ ಕೆಲಸ ಮಾಡುತ್ತಿರುವಂತಿದೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಟೀಕಿಸಿವೆ.

ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರು ಸಲ್ಲಿಸಿದ ಅರ್ಜಿ ವಿಚಾರಣೆಗೆ ಬಂದಾಗ ಸಹ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅಭ್ಯಂತರ ಇಲ್ಲ ಹಾಗೂ ತಾನೇ ಹೊರಡಿಸಿದ ಚುನಾವಣಾ ಅಧಿಸೂಚನೆಯನ್ನು ರದ್ದುಪಡಿಸುವುದಾಗಿಚುನಾವಣಾ ಆಯೋಗ ಸ್ವಯಂಪ್ರೇರಿತವಾಗಿ ಹೇಳಿದ್ದು ಸಹ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.

ಯಾವ ಮಾಹಿತಿಯೂ ಇಲ್ಲ: ‘ಇದು ಕೇಂದ್ರ ಚುನಾವಣಾ ಆಯೋಗದಿಂದಲೇ ಬಂದ ಅಧಿಸೂಚನೆ, ಪೂರಕ ಪತ್ರವನ್ನು ಸಹ ಆಯೋಗವೇ ಮುಖ್ಯ ಕಾರ್ಯದರ್ಶಿಯವರಿಗೆ ಬರೆದಿದೆ. ಇದರ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ’ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.