ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ ಮತದಾನ ನಡೆಯಲಿದ್ದು, ಮೂರೂ ಪಕ್ಷಗಳು ಅಡ್ಡ ಮತದಾನದ ಆತಂಕದಲ್ಲಿವೆ. ತಮ್ಮ ಶಾಸಕರನ್ನು ಬಲವಾಗಿ ಹಿಡಿದಿಟ್ಟುಕೊಳ್ಳುವ ಜತೆಯಲ್ಲೇ ಎದುರಾಳಿಗಳ ಮತ ಕಸಿಯುವ ಕಸರತ್ತನ್ನೂ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಎನ್‌ಡಿಎ ಮೈತ್ರಿಕೂಟ ಮುಂದುವರಿಸಿವೆ.
ತಮ್ಮ ಮತಗಳನ್ನು ರಕ್ಷಿಸಿಟ್ಟುಕೊಂಡು, ಎದುರಾಳಿಗಳನ್ನು ಅಡ್ಡ ಮತದಾನದ ಉರುಳಿಗೆ ಸಿಲುಕಿಸುವ ಪ್ರಯತ್ನವನ್ನೂ ಆಡಳಿತ ಮತ್ತು ಪ್ರತಿಪಕ್ಷಗಳು ಬಲವಾಗಿಯೇ ಮಾಡುತ್ತಿವೆ. ಯಾವುದೇ ಕಡೆಯಿಂದ ಅಡ್ಡ ಮತದಾನ ನಡೆದರೂ, ಭವಿಷ್ಯದ ದಿನಗಳಲ್ಲಿ ರಾಜ್ಯದ ರಾಜಕೀಯಲ್ಲಿ ಹೊಸ ಬೆಳವಣಿಗೆಗಳಿಗೆ ಇದು ನಾಂದಿಯಾಗುವ ಸಾಧ್ಯತೆ ಇದೆ.
ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ ಪ್ರಥಮ ಪ್ರಾಶಸ್ತ್ಯದ 45 ಮತಗಳ ಅಗತ್ಯವಿದೆ. ವಿಧಾನಸಭೆಯ 224 ಸದಸ್ಯ ಬಲದ ಪೈಕಿ ಕಾಂಗ್ರೆಸ್ 135 ಬಲ ಹೊಂದಿತ್ತು. ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕರ ಅಕಾಲಿಕ ನಿಧನದಿಂದಾಗಿ ಕಾಂಗ್ರೆಸ್ ಸಂಖ್ಯೆ 134ಕ್ಕೆ ಇಳಿದಿದೆ. ಬಿಜೆಪಿಯ 66 ಹಾಗೂ ಜೆಡಿಎಸ್‌ನ 19 ಶಾಸಕರಿದ್ದಾರೆ. ಇಬ್ಬರು ಪಕ್ಷೇತರರು, ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಒಬ್ಬ ಶಾಸಕರಿದ್ದಾರೆ.
ಕಾಂಗ್ರೆಸ್‌ನಿಂದ ಅಜಯ್ ಮಾಕನ್, ಸೈಯದ್ ನಾಸಿರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ಕಣದಲ್ಲಿದ್ದಾರೆ.ಮೂವರನ್ನೂ ಗೆಲ್ಲಿಸಿಕೊಳ್ಳಲು ಆಡಳಿತ ಪಕ್ಷಕ್ಕೆ ಒಂದು ಮತದ ಕೊರತೆ ಇದೆ. ಸ್ವಂತ ಬಲದ ಜತೆಗೆ ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ ಮತ್ತು ಕೆ.ಎಚ್. ಪುಟ್ಟಸ್ವಾಮಿ ಗೌಡ ಕಾಂಗ್ರೆಸ್ ಸಹ ಸದಸ್ಯರಾಗಿ ಗುರುತಿಸಿಕೊಂಡಿರುವುದರಿಂದ ಮೂರೂ ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಮತ್ತು ಕೆಆರ್‌ಪಿಪಿಯ ಜಿ. ಜನಾರ್ದನ ರೆಡ್ಡಿ ಅವರ ಮತಗಳನ್ನೂ ಸೆಳೆಯುವ ಕಸರತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾರಥ್ಯದಲ್ಲಿ ನಡೆದಿದೆ.
ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವುದಾಗಿ ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾತುಕೊಟ್ಟಿದ್ದು, ಎರಡನೇ ಪ್ರಾಶಸ್ತ್ಯದ ಮತವನ್ನು ಜೆಡಿಎಸ್‌ಗೆ ಹಾಕುವುದಿಲ್ಲ ಎಂದು ಅವರು ಹೇಳಿದ್ದಾಗಿ ಮೂಲಗಳು ಹೇಳಿವೆ.
ಬಿಜೆಪಿ 66 ಶಾಸಕರನ್ನು ಹೊಂದಿದ್ದು, 45 ಶಾಸಕರು ಮೊದಲ ಪ್ರಾಶಸ್ತ್ಯದ ಮತಗಳನ್ನು ಪಕ್ಷದ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಅವರಿಗೆ ಚಲಾಯಿಸಲಿದ್ದಾರೆ. ಹೆಚ್ಚುವರಿ 21 ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ವರ್ಗಾಯಿಸಲಿದೆ.
ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಸಂಬಂಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೆಳಿಗ್ಗೆ ಹೊಟೇಲ್‌ವೊಂದರಲ್ಲಿ ಮಾತುಕತೆ ನಡೆಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇದ್ದರು.
ಬಿಜೆಪಿ ಮತ್ತು ಜೆಡಿಎಸ್‌ನ ಎಲ್ಲ ಶಾಸಕರು ಮಂಗಳವಾರ ಬೆಳಿಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರ ಕಚೇರಿಗೆ ಬರಲಿದ್ದಾರೆ. ಅಲ್ಲಿಂದ ಮತ ಚಲಾವಣೆಗೆ ತೆರಳುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.