ADVERTISEMENT

ನವವೃಂದಾವನದಲ್ಲಿ ಪದ್ಮನಾಭ ತೀರ್ಥರ 694ನೇ ಆರಾಧನೆ

ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮಿಗಳ ನೇತೃತ್ವದಲ್ಲಿ ಪೂರ್ವರಾಧನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 16:57 IST
Last Updated 5 ಡಿಸೆಂಬರ್ 2018, 16:57 IST
ಗಂಗಾವತಿ ತಾಲ್ಲೂಕಿನ ನವವೃಂದಾನವದ ನಡುಗಡ್ಡೆಯಲ್ಲಿ ಪದ್ಮನಾಭ ತೀರ್ಥರ ಆರಾಧನೆಯಲ್ಲಿ ತೊಡಗಿರುವ ಮಂತ್ರಾಲಯದ ಸುಭುದೇಂದ್ರ ತೀರ್ಥರು
ಗಂಗಾವತಿ ತಾಲ್ಲೂಕಿನ ನವವೃಂದಾನವದ ನಡುಗಡ್ಡೆಯಲ್ಲಿ ಪದ್ಮನಾಭ ತೀರ್ಥರ ಆರಾಧನೆಯಲ್ಲಿ ತೊಡಗಿರುವ ಮಂತ್ರಾಲಯದ ಸುಭುದೇಂದ್ರ ತೀರ್ಥರು   

ಗಂಗಾವತಿ (ಕೊಪ್ಪಳ): ತಾಲ್ಲೂಕಿನ ಆನೆಗೊಂದಿ ಸಮೀಪ ಇರುವ ನವವೃಂದಾವನ ಗಡ್ಡೆಯಲ್ಲಿ ಪದ್ಮನಾಭ ತೀರ್ಥರ 694ನೇ ಆರಾಧನೆ ಪೊಲೀಸರ ಬಿಗಿ ಭದ್ರತೆಯಲ್ಲಿ ಬುಧವಾರ ಆರಂಭವಾಯಿತು.

ಪದ್ಮನಾಭ ತೀರ್ಥರ ಆರಾಧನೆಯ ಮೊದಲ ಒಂದೂವರೆ ದಿನ ಪೂರ್ವರಾಧನೆ ಮತ್ತು ಮಧ್ಯರಾಧನೆ ಧಾರ್ಮಿಕ ಚಟುವಟಿಕೆ ಕೈಗೊಳ್ಳಲು ಹೈಕೋರ್ಟ್‌ ಮಂತ್ರಾಲಯ ಮಠಕ್ಕೆ ಅನುಮತಿ ನೀಡಿದೆ. ಹೀಗಾಗಿ ಭಕ್ತರು ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮಿಗಳ ನೇತೃತ್ವದಲ್ಲಿ ಪೂರ್ವರಾಧನೆಯನ್ನು ನೆರವೇರಿಸಿದರು.

ಬೆಳಿಗ್ಗೆ 6ರಿಂದಲೇ ಭಕ್ತರು ಸಕಲ ವೃಂದಾವನ ಅಲಂಕಾರ, ಅಭಿಷೇಕ ಮೊದಲಾದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮಧ್ಯಾಹ್ನದ ಹೊತ್ತಿಗೆ ನಡುಗಡ್ಡೆ ಪ್ರವೇಶಿಸಿದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ ಪದ್ಮನಾಭ ತೀರ್ಥರ ವೃಂದಾವನಕ್ಕೆ ಪೂಜೆ ಸಲ್ಲಿಸಿದರು.

ADVERTISEMENT

’ನ್ಯಾಯಾಲಯಗಳು ಏನೇ ತೀರ್ಪು ನೀಡಲಿ ಅಥವಾ ಬಿಡಲಿ, ಧಾರ್ಮಿಕ ಚಟುವಟಿಕೆಗಳನ್ನು ಎಲ್ಲರೂ ಸೇರಿ ಮಾಡಿದರೆ ಮಾತ್ರ ಅದಕ್ಕೊಂದು ಅರ್ಥ. ಈ ವಿಚಾರದಲ್ಲಿ ಪೂಜೆಯಲ್ಲಿ ಭಾಗವಹಿಸಲು ಉತ್ತರಾಧಿ ಮಠದವರಿಗೆ ಮುಕ್ತ ಆಹ್ವಾನವಿದೆ’ ಎಂದು ಮಂತ್ರಾಲಯದ ಶ್ರೀಗಳು ತಿಳಿಸಿದರು.

ನವವೃಂದಾನವ ನಡುಗಡ್ಡೆಯಲ್ಲಿ ತಾತ್ಕಾಲಿಕವಾಗಿ ಎಂಟಕ್ಕೂ ಹೆಚ್ಚು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸರ ಮತ್ತು ಕ್ಯಾಮೆರಾ ಕಣ್ಗಾವಲಿನಲ್ಲಿ ಮೂರು ದಿನ ಆರಾಧನೆ ಎಲ್ಲಾ ಪೂಜಾ ಕಾರ್ಯಗಳು ನಡೆಯಲಿವೆ.

**

ಪೂಜೆ, ಆರಾಧನೆ ಯಾವುದೇ ಒಂದು ಗುಂಪಿಗೆ ಸೀಮಿತವಾಗಬಾರದು. ತಮ್ಮ ಸಹೋದರರಾದ ಉತ್ತರಾಧಿ ಮಠದವರೂ ಬಂದು ತೀರ್ಥರ ಪೂಜೆಯಲ್ಲಿ ಭಾಗವಹಿಸಿದರೆ ಸಂತೋಷ. ಈ ವಿಚಾರದಲ್ಲಿ ತಾವು ಸದಾ ಮುಕ್ತವಾಗಿದ್ದೇವೆ
- ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ, ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.