ಬಳ್ಳಾರಿ: ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಸಂದರ್ಶನದ ದಿನಾಂಕಗಳು ನಿಗದಿಯಾಗಿರುವುದರಿಂದ ಬೋಧಕರ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿ ನೀಡಬೇಕು ಎಂದು ಕೋರಿ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್.ಸುಭಾಷ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
‘ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ರಾಜ್ಯಪಾಲರು ನೇಮಕಾತಿ ಪ್ರಕ್ರಿಯೆಗೆ ಅನುಮೋದನೆ ನೀಡಿದ್ದಾರೆ. ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕವೇ ನೇಮಕಾತಿ ಪತ್ರ ನೀಡಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಯುಜಿಸಿ 12 ಬಿ ಮಾನ್ಯತೆ ಪಡೆಯಲು ಸಿಬ್ಬಂದಿ ನೇಮಕಾತಿ ಕಡ್ಡಾಯವಾಗಿದೆ. ಹೈದರಾಬಾದ್- ಕರ್ನಾಟಕ ಸ್ಥಳೀಯ ವೃಂದದ ಹುದ್ದೆಗಳನ್ನು ಸಾಧ್ಯವಾದಷ್ಟು ಬೇಗ ಭರ್ತಿ ಮಾಡಬೇಕು ಎಂದು ನ್ಯಾಯಾಲಯವೂ ಸೂಚಿಸಿದೆ’ ಎಂದು ಅವರು ಗಮನ ಸೆಳೆದಿದ್ದಾರೆ.
‘ನೀತಿ ಸಂಹಿತೆ ಉಲ್ಲಂಘಿಸಿ ಸಂದರ್ಶನ ಪ್ರಕ್ರಿಯೆ ನಡೆಸಿರುವುದರಿಂದ ಕ್ರಮ ಏಕೆ ಕೈಗೊಳ್ಳಬಾರದು’ ಎಂದು ಕಾರಣ ಕೇಳಿ ಜಿಲ್ಲಾ ಚುನಾವಣಾಧಿಕಾರಿ ನೀಡಿದ್ದ ನೋಟಿಸ್‌ಗೂ ಇವೇ ಕಾರಣಗಳನ್ನು ನೀಡಿರುವ ಕುಲಪತಿ, ನೋಟಿಸ್ ಅನ್ನು ವಾಪಸು ಪಡೆಯುವಂತೆ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.