ADVERTISEMENT

ವಿಟಿಯು 18ನೇ ಘಟಿಕೋತ್ಸವ: 75,240 ಪದವಿ ಪ್ರದಾನ, ಸುಚಿತ್ರಾಗೆ 9 ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 16:56 IST
Last Updated 11 ಮಾರ್ಚ್ 2019, 16:56 IST
   

ಬೆಳಗಾವಿ: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 18ನೇ ಘಟಿಕೋತ್ಸವ ಇದೇ 18ರಂದು ನಡೆಯಲಿದ್ದು, 75,240 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು’‌ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು.

‘ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ವಜುಭಾಯಿ ಆರ್.ವಾಲಾ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರಿಗೂ ಆಹ್ವಾನ ನೀಡಲಾಗಿದೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘64,881 ಬಿ.ಇ., 619 ಬಿ.ಆರ್ಕ್., 4,425 ಎಂಬಿಎ, 1,801 ಎಂಸಿಎ, 2,859 ಎಂ.ಟೆಕ್., 172 ಎಂ.ಟೆಕ್(ಪಿ–ಟೈಮ್), 26 ಎಂ.ಆರ್ಕ್., 33 ಎಂ.ಎಸ್ಸಿ ಎಂಜಿನಿಯರಿಂಗ್, 6 ದ್ವಿ‍ಪದವಿ ಹಾಗೂ 418 ಮಂದಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಗುವುದು. ಈ ಬಾರಿ 200 ರ‍್ಯಾಂಕ್‌ಗಳನ್ನು ನೀಡಲಾಗುತ್ತಿದೆ. ಸಾಮಾಜಿಕ ಕಾರ್ಯಕರ್ತ ಹಾಗೂ‘ಬ್ರಿಜ್‌ ಮ್ಯಾನ್’ ಎಂದೇ ಖ್ಯಾತಿ ಗಳಿಸಿರುವ ಎಂಜಿನಿಯರ್ ಬಿ. ಗಿರೀಶ ಭಾರದ್ವಾಜ್ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು.

ADVERTISEMENT

‘ಕಳೆದ ಸಾಲಿನಲ್ಲಿ ಬಿ.ಇ, ಬಿ.ಟೆಕ್ ಪರೀಕ್ಷೆ ತೆಗೆದುಕೊಂಡ 86,875 ವಿದ್ಯಾರ್ಥಿಗಳಲ್ಲಿ 64,881 ಮಂದಿ ತೇರ್ಗಡೆಯಾಗಿದ್ದಾರೆ. 21,994 ಮಂದಿ ಅನುತ್ತೀರ್ಣರಾಗಿದ್ದಾರೆ. ಶೇ 74.68ರಷ್ಟು ಫಲಿತಾಂಶ ಬಂದಿದೆ. ಬೆಂಗಳೂರಿನ ದಯಾನಂದಸಾಗರ ಎಂಜಿನಿಯರಿಂಗ್ ಕಾಲೇಜು 34, ಆಚಾರ್ಯ ತಾಂತ್ರಿಕ ಕಾಲೇಜು ಹಾಗೂ ಬಿಐಟಿ ತಲಾ 14 ರ‍್ಯಾಂಕ್‌ಗಳನ್ನು ಪಡೆದಿದೆ.

ಬೆಳಗಾವಿಯ ಜಿಐಟಿ 10 ರ‍್ಯಾಂಕ್‌ಗಳನ್ನು ಗಳಿಸಿದೆ’ ಎಂದು ಹೇಳಿದರು.

‘ವಿಟಿಯು ವಿಭಜಿಸದಂತೆಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ವಿಭಜಿಸುವುದರಿಂದ ಆಗುವ ತೊಂದರೆ ಕುರಿತು ಮನವರಿಕೆ ಮಾಡಲಾಗಿದೆ’ ಎಂದುಪ್ರತಿಕ್ರಿಯಿಸಿದರು. ಕುಲಸಚಿವ ಪ್ರೊ.ಸತೀಶ ಅಣ್ಣಿಗೇರಿ ಇದ್ದರು.

ಸುಚಿತ್ರಾಗೆ 9 ಚಿನ್ನದ ಪದಕ
‘ಚಿನ್ನದ ಪದಕ ಪಡೆದವರಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ದಾವಣಗೆರೆಯ ಜೆಐಟಿಯ ಎನ್. ಸುಚಿತ್ರಾ 9 (ಬಿ.ಇ. ಸಿವಿಲ್), ದಾವಣಗೆರೆಯ ಬಿಐಟಿಯ ಎಸ್‌.ಆರ್. ಮಧುಶ್ರೀ (ಬಿಇ ಸಿವಿಲ್) ಹಾಗೂ ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಮೇಘನಾ ಪ್ರಕಾಶ್(ಬಿ.ಇ. ಎಲೆಕ್ಟ್ರಾನಿಕ್ಸ್‌ ಹಾಗೂ ಕಮ್ಯುನಿಕೇಷನ್) ತಲಾ 6,ಬೆಂಗಳೂರಿನ ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನ ಎಂ. ಸುಪ್ರೀತ್ (ಬಿ.ಇ. ಮೆಕ್ಯಾನಿಕಲ್), ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಎಸ್. ಜೀವಿತಾ (ಬಿ.ಇ. ಎಲೆಕ್ಟ್ರಿಕಲ್ಸ್‌ ಅಂಡ್ ಎಲೆಕ್ಟ್ರಾನಿಕ್ಸ್‌) ತಲಾ 5,ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪವಿತ್ರಿ ಬಿ.ಶೆಟ್ಟಿ (ಬಿ.ಇ. ಕಂಪ್ಯೂಟರ್ ಸೈನ್ಸ್), ಬೆಂಗಳೂರಿನ ಆರ್‌ಎನ್ಎಸ್‌ ತಾಂತ್ರಿಕ ಕಾಲೇಜಿನ ಆರ್. ಮಾನಸ (ಬಿ.ಇ. ಎಲೆಕ್ಟ್ರಾನಿಕ್ಸ್‌ ಅಂಡ್ ಇನ್ಸ್ಟ್ರುಮೆಂಟೇಷನ್), ಸಿ.ಎನ್. ಪವಿತ್ರಾ (ಎಂಬಿಎ 1ನೇ ರ‍್ಯಾಂಕ್) ತಲಾ 4, ಬೆಂಗಳೂರಿನ ಬಿಎನ್ಎಂ ತಾಂತ್ರಿಕ ಕಾಲೇಜಿನ ಬಿ.ಆರ್. ವೈಷ್ಣವಿ (ಬಿ.ಇ. ಎಲೆಕ್ಟ್ರಾನಿಕ್ಸ್‌ ಅಂಡ್ ಕಮ್ಯುನಿಕೇಷನ್), ಬೆಂಗಳೂರಿನ ಸಿಎಂಆರ್‌ಐಟಿಯ ಪಿ. ಸುಕನ್ಯಾ (ಎಂಸಿಎ), ಎಎಂಸಿಐಟಿಯ ಶಹನಾಜ್‌ ಹರ್ಷಿ (ಎಂ.ಟೆಕ್. ಪವರ್ ಸಿಸ್ಟಂ) ತಲಾ 3 ಸೇರಿದಂತೆ ಒಟ್ಟು 28 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.