ಬೆಳಗಾವಿ: ಸಿವಿಲ್ ಎಂಜಿನಿಯರಿಂಗ್ 4ನೇ ಸೆಮಿಸ್ಟರ್‌ನ ‘ಬೇಸಿಕ್ ಡಿಟರ್ಮಿನೇಟ್ ಸ್ಟ್ರಕ್ಚರ್ ಅನಾಲಿಸಿಸ್’ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ದೃಢಪಟ್ಟಿರುವುದರಿಂದ ಸಂಬಂಧಿಸಿದ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೊಬ್ಬರನ್ನು ಅಮಾನತು ಮಾಡಲಾಗಿದೆ. ಜುಲೈ 9ರಂದು ಮರುಪರೀಕ್ಷೆ ನಡೆಸಲಾಗುವುದು’ ಎಂದು ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು.
‘ಜೂನ್ 22ರಂದು ಮಧ್ಯಾಹ್ನ ಪರೀಕ್ಷೆ ನಡೆದಿತ್ತು. ಜೂನ್ 20ರಂದು ಮಧ್ಯಾಹ್ನ ಪ್ರಶ್ನೆಪತ್ರಿಕೆ ಪ್ರತಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ್ದು ನಂತರ ತಿಳಿದುಬಂತು. ಆ ಕುರಿತು ತನಿಖೆ ನಡೆಸಲಾಗಿದ್ದು, ವಿಟಿಯುನಿಂದ ಯಾವುದೇ ಲೋಪವಾಗಿಲ್ಲ. ಕಾಲೇಜಿನ ಪ್ರಾಧ್ಯಾಪಕರೇ ಆ ರೀತಿ ಮಾಡಿದ್ದಾರೆ ಎನ್ನುವುದು ಖಚಿತವಾಗಿದೆ. ಪ್ರವೇಶದ ಸಂದರ್ಭ ಇದಾಗಿರುವುದರಿಂದ, ಕಾಲೇಜಿನ ಹೆಸರು ಹಾಗೂ ಪ್ರಾಧ್ಯಾಪಕರ ಹೆಸರು ಬಹಿರಂಗಪಡಿಸಲು ಬಯಸುವುದಿಲ್ಲ. ಆದರೆ, ಅಂದು ಪರೀಕ್ಷೆ ನಡೆಸಲು ಆಗಿರುವ ಖರ್ಚನ್ನು ಅಮಾನತುಗೊಂಡಿರುವ ಪ್ರಾಧ್ಯಾಪಕರಿಂದಲೇ ವಸೂಲಿ ಮಾಡಲಾಗುವುದು’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಎಂಜಿನಿಯರಿಂಗ್ ಪದವಿಯ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ನಡೆಸಿದ ಗಣಿತ–2 ವಿಷಯದ ಪ್ರಶ್ನೆಪತ್ರಿಕೆ ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಕೆಲವು ಕಾಲೇಜುಗಳಲ್ಲಿ ಸೋರಿಕೆಯಾಗಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಈ ಕುರಿತು ತನಿಖೆ ನಡೆಸಲಾಗಿದೆ. ಪರೀಕ್ಷೆ ಮುಗಿದ ನಂತರ, ಪ್ರಶ್ನೆಪತ್ರಿಕೆಯ ಪ್ರತಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದೆ ಎನ್ನುವುದು ದೃಢಪಟ್ಟಿದೆ. ಹೀಗಾಗಿ, ಆ ವಿಷಯದ ಮರು ಪರೀಕ್ಷೆ ನಡೆಸಲಾಗುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.
ಅಂಕ ತಿದ್ದುಪಡಿಗೆ ಅವಕಾಶವಿಲ್ಲ:‘ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದ 11 ಮಂದಿ ನೌಕರರನ್ನು, ಗುತ್ತಿಗೆ ಅವಧಿ ಮುಗಿದಿದ್ದರಿಂದಾಗಿ ಕೆಲಸದಿಂದ ತೆಗೆಯಲಾಗಿದೆ. ಅಂಕಗಳನ್ನು ತಿದ್ದುಪಡಿ ಮಾಡುತ್ತಿದ್ದರಿಂದಾಗಿ ಅವರನ್ನು ತೆಗೆದು ಹಾಕಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಇದು ಸತ್ಯಕ್ಕೆ ದೂರವಾದುದು’ ಎಂದು ಸ್ಪಷ್ಟಪಡಿಸಿದರು.
‘ಪರೀಕ್ಷೆ ಸಂದರ್ಭದಲ್ಲಿ ಅವರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಜೂನ್ 30ಕ್ಕೆ ಅವರ ಅವಧಿ ಮುಗಿದಿದೆ. ಪರೀಕ್ಷಾ ಕಾರ್ಯದಲ್ಲಿ ಹೆಚ್ಚಿನ ಗಣಕೀರಣ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಕೆಲವು ಗುತ್ತಿಗೆ ನೌಕರರು ಸಮರ್ಪಕವಾಗಿ ಕೆಲಸ ನಿರ್ವಹಿಸದ ಕಾರಣ ಅಂಥವರನ್ನು ತೆಗೆದು ಹಾಕಲಾಗಿದೆ’ ಎಂದು ಹೇಳಿದ್ದಾರೆ.
‘ವಿಶ್ವವಿದ್ಯಾಲಯಕ್ಕೆ ಕಾಲೇಜುಗಳಿಂದ ಸಲ್ಲಿಸುವ ಆಂತರಿಕ ಅಂಕಗಳು ಹಾಗೂ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ, ಮೌಲ್ಯಮಾಪಕರ ನೀಡಿದ ಪರೀಕ್ಷಾ ಅಂಕಗಳು ಎನ್ಕ್ರಿಪ್ಟೆಡ್ ರೂಪದಲ್ಲಿ ಲಭ್ಯವಿರುತ್ತವೆ. ಫಲಿತಾಂಶ ಪಟ್ಟಿಯನ್ನು ತಂತ್ರಾಂಶ ಉಪಯೋಗಿಸಿ ಸಿದ್ಧಪಡಿಸಿದ ನಂತರ ಮೂಲ ಅಂಕಗಳು ಗೋಚರಿಸುತ್ತವೆ. ಅಲ್ಲಿವರೆಗೆ ಯಾರಿಗೇ ಆಗಲಿ ಮೂಲ ಅಂಕಗಳು ಲಭ್ಯವಿರುವುದಿಲ್ಲ. ಹೀಗಾಗಿ, ಯಾವುದೇ ವ್ಯಕ್ತಿಗೆ ಅಂಕಗಳನ್ನು ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ’ ಎಂದು ವಿವರಿಸಿದ್ದಾರೆ.
‘ವಿದ್ಯಾರ್ಥಿಗಳು ಮತ್ತು ಪೋಷಕರು ವದಂತಿಗಳಿಗೆ ಕಿವಿಗೊಡಬಾರದು. ಆತಂಕಕ್ಕೆ ಒಳಗಾಗಬಾರದು’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.