ಬೆಂಗಳೂರು: ವಕ್ಫ್ ಆಸ್ತಿ ಸರ್ಕಾರದ್ದಲ್ಲ. ಸಮಾಜದ ದಾನಿಗಳು ನೀಡಿದ್ದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಜಿಲ್ಲಾ ವಕ್ಫ್ ಅಧ್ಯಕ್ಷರು, ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ‘ವಕ್ಫ್ ಆಸ್ತಿಯ ಒಂದು ಇಂಚೂ ಸರ್ಕಾರದಿಂದ ಪಡೆದಿಲ್ಲ. ಸಮಾಜದ ಒಳಿತಿಗಾಗಿ ದಾನಿಗಳು ಉದಾರವಾಗಿ ನೀಡಿದ್ದಾರೆ. ದೇವರ ಆಸ್ತಿಯ ಸಂರಕ್ಷಣೆ ಸಮಾಜದ ಎಲ್ಲರ ಹೊಣೆ’ ಎಂದರು.
‘ವಕ್ಫ್ ಮಂಡಳಿಯಿಂದ 15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜುಗಳನ್ನು ನಿರ್ಮಿಸಲಾಗುತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಜಿಲ್ಲಾಮಟ್ಟದಲ್ಲಿ ನಡೆಸುವ ಅದಾಲತ್‌ನಿಂದ ಹಲವು ಸಮಸ್ಯೆಗಳು ಬಗೆಹರಿದಿವೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಬಾಷಾ, ಸದಸ್ಯರಾದ ಯಾಕೊಬ್, ಮೌಲನಾ ಶಾಫಿ ಸಾದಿ, ರಿಯಾಜ್, ಅಸೀಫ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.