ದಾವಣಗೆರೆ: ವಕ್ಫ್ ಮಂಡಳಿಯ ಆಸ್ತಿ ಹತ್ತು ವರ್ಷಗಳಲ್ಲಿ ಶೇ 30ರಷ್ಟು ಹೆಚ್ಚಾಗಿದೆ. ಇದು ಹೀಗೆ ಮುಂದುವರಿದರೆ ದೇಶ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು ಸಿಕ್ಕು ದೊಡ್ಡ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
‘ವಕ್ಫ್ ಆಸ್ತಿಯನ್ನು ಮುಸ್ಲಿಂ ಸಮುದಾಯದವರ ಬಳಕೆಗೆ ನೀಡಲಾಗುತ್ತದೆ. ಆಗ ಅಲ್ಲಿ ಎಂಥ ಚಟುವಟಿಕೆಗಳು ನಡೆಯುತ್ತವೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ವಿಶೇಷ ಸ್ಥಾನ ಪಡೆದಿದ್ದ ಕಾಶ್ಮೀರ ಭಯೋತ್ಪಾದಕರ ನೆಲೆಯಾಗಿರಲಿಲ್ಲವೇ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ವಕ್ಫ್ ಆಸ್ತಿಯನ್ನು ಹೆಚ್ಚಿಸಿಕೊಳ್ಳಲು ರಾಜ್ಯದ ಹಲವು ನಗರಗಳಲ್ಲಿ ಸರ್ವೇ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ. ರೈತರಿಗೆ ನೋಟಿಸ್ ನೀಡದೇ ಭೂದಾಖಲೆಗಳಲ್ಲಿ ವಕ್ಫ್ ಮಂಡಳಿ ಹೆಸರು ನಮೂದಿಸಲಾಗಿದೆ. ರೈತರಿಂದ ವಶಕ್ಕೆ ಪಡೆದ ಭೂಮಿಯನ್ನು ಕೂಡಲೇ ಹಿಂತಿರುಗಿಸಬೇಕು’ ಎಂದು ಆಗ್ರಹಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಸ್ಲಿಂ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ. ಮತಾಂಧರಾಗಿರುವ ಸಚಿವ ಜಮೀರ್ ಅಹಮ್ಮದ್ ಮುಂದೆಬಿಟ್ಟು ವಕ್ಫ್ ಅದಾಲತ್‌ಗಳನ್ನು ನಡೆಸಿ ಸಾಮಾನ್ಯ ರೈತರ ಭೂಮಿಯನ್ನು ಕಬಳಿಸಲಾಗುತ್ತಿದೆ’ ಎಂದು ಕಿಡಿಕಾರಿದರು.
ಶಿಕ್ಷಣ, ಉದ್ಯೋಗದಲ್ಲಿ ನೀಡುತ್ತಿರುವ ಮೀಸಲಾತಿ ಸಂವಿಧಾನ ಬಾಹಿರ ಎಂಬುದನ್ನು ನ್ಯಾಯಾಲಯ ಈಗಾಗಲೇ ಸ್ಪಷ್ಟಪಡಿಸಿದೆ. ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವುದು ತಪ್ಪು.ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ‘ಕರಿಯಾ’ ಎಂದು ಕರೆದು ಜನಾಂಗೀಯ ನಿಂದನೆ ಮಾಡಲಾಗಿದೆ. ಎಚ್.ಡಿ.ದೇವೇಗೌಡ ಕುಟುಂಬವನ್ನು ಅವಹೇಳನ ಮಾಡಿದ್ದು ಖಂಡನೀಯ.ಆರ್.ಅಶೋಕ್, ವಿರೋಧ ಪಕ್ಷದ ನಾಯಕ
ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
‘ಕಳೆದ ಅಧಿವೇಶನದಲ್ಲಿ ಸಚಿವರೊಬ್ಬರ ತಲೆದಂಡವಾಗಿದೆ. 16 ತಿಂಗಳಲ್ಲಿ 16 ಸ್ವರೂಪದ ಭ್ರಷ್ಟಾಚಾರವನ್ನು ರಾಜ್ಯ ಸರ್ಕಾರ ಮಾಡಿದೆ. ‘ಮುಡಾ’ ಹಗರಣದಲ್ಲಿ ಸಿಕ್ಕಿಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆದಂಡ ನಿಶ್ಚಿತ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
‘ತಮ್ಮ ಹಗರಣ ಮುಚ್ಚಿಕೊಳ್ಳುವ ಉದ್ದೇಶದಿಂದ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಕೋವಿಡ್‌ಗೆ ಸಂಬಂಧಿಸಿದಂತೆ ಆಯೋಗವೊಂದನ್ನು ರಚಿಸಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ಜಗ್ಗುವುದಿಲ್ಲ’ ಎಂದು ಹೇಳಿದರು.
‘ವಿಧಾನಸಭಾ ಉಪಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಮದ್ಯದ ಲಾಬಿ, ಭ್ರಷ್ಟಾಚಾರದಿಂದ ಸಂಗ್ರಹಿಸಿದ ಹಣವನ್ನು ಮತದಾರರಿಗೆ ಹಂಚಲಾಗುತ್ತಿದೆ. ಚುನಾವಣಾ ಆಯೋಗ ಬಿಗಿ ಕ್ರಮ ಕೈಗೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.