ಬೆಂಗಳೂರು: ‘ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರ ಹೆಸರು ಹೇಳುವಂತೆ ಜಾರಿ ನಿರ್ದೇಶನಾಲಯವು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ’ ಎಂದು ಸಿದ್ದರಾಮಯ್ಯ ಸಂಪುಟದ ಐವರು ಸಚಿವರು ಗಂಭೀರ ಆರೋಪ ಮಾಡಿದರು.
ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ಇ.ಡಿ. ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಸಿಎಂ, ಡಿಸಿಎಂ ಹೆಸರು ಹೇಳಿ, ನಾವು ನಿಮ್ಮನ್ನು ಕಾನೂನಾತ್ಮಕವಾಗಿ ರಕ್ಷಿಸುತ್ತೇವೆ ಎಂದು ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ’ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
‘ಭೋವಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ನಿಗಮದಲ್ಲಿ ನಡೆದ ಹಗರಣದಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ಆಗಿದೆ. ಕೋವಿಡ್ ಅಕ್ರಮದ ಬಗ್ಗೆ ಇ.ಡಿ. ಏಕೆ ಈವರೆಗೂ ತನಿಖೆ ನಡೆಸಿಲ್ಲ?. ವಿರೋಧ ಪಕ್ಷದಲ್ಲಿ ಇದ್ದಾಗ ಪ್ರಕರಣ ದಾಖಲಿಸುತ್ತಾರೆ. ಬಿಜೆಪಿಗೆ ಬಂದರೆ ಅವರಿಗೆ ಕ್ಲೀನ್ ಚಿಟ್ ನೀಡಲಾಗುತ್ತದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ದುರ್ಬಳಕೆ ಮಾಡಿಕೊಂಡು ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ವಿರೋಧ ಪಕ್ಷದ ಮೇಲೆ ದಾಳಿ ಮಾಡುತ್ತಿದೆ’ ಎಂದರು.
‘ಇ.ಡಿ ಬಳಕೆ ಮಾಡಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ವಾಲ್ಮೀಕಿ ನಿಗಮದ ಹಗರಣ ತನಿಖೆ ನಡೆಸುತ್ತಿದೆ. ತನಿಖೆಗೆ ಒಳಪಟ್ಟವರ ಮೇಲೆ ಒತ್ತಡ ತಂದು ಸರ್ಕಾರದ ಉನ್ನತ ಮಟ್ಟದಲ್ಲಿ ಇರುವವರ ಹೆಸರು ಹೇಳಬೇಕು ಎಂದು ಇ.ಡಿ ಒತ್ತಡ ಹೇರುತ್ತಿದೆ. ಈ ಮೂಲಕ ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡುವ ಪ್ರಯತ್ನ ನಡೆಸುತ್ತಿದೆ’ ಎಂದು ಆರೋಪಿಸಿದರು.
‘ತನಿಖೆಯ ಅಂಶಗಳು ಸೆಲೆಕ್ಟಿವ್ ಆಗಿ ಸೋರಿಕೆ ಆಗುತ್ತಿದೆ. ಇ.ಡಿ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮುನ್ನವೇ ಮಾಹಿತಿ ಹೇಗೆ ಸೋರಿಕೆಯಾಯಿತು. ತನಿಖೆ ಮಾಡಿ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಿ. ರಾಜಕೀಯ ಉದ್ದೇಶಕ್ಕಾಗಿ ಅವರು ತನಿಖಾ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ’ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, ‘ಇದು ಬಿಜೆಪಿಯವರ ಎಸ್ಒಪಿ ಆಗಿದೆ. ಕಳೆದ 10 ವರ್ಷಗಳಲ್ಲಿ ಈ ಮೂರು ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವು ಹಲವು ರಾಜ್ಯ ಸರ್ಕಾರಗಳನ್ನು ಅಸ್ತಿರಗೊಳಿಸಿದೆ. ಗೋವಾ, ಮಣಿಪುರ, ಉತ್ತರಾಖಾಂಡ್, ಕರ್ನಾಟಕ, ಮಧ್ಯಪ್ರದೇಶದಲ್ಲಿ ಸರ್ಕಾರ ಪತನ ಮಾಡಿದ್ದಾರೆ. 444 ಶಾಸಕರನ್ನು ಖರೀದಿಸಲಾಗಿದೆ. ಬಿಜೆಪಿಯವರ ವಿರುದ್ಧವೂ ಐಟಿ, ಇಡಿ ಪ್ರಕರಣಗಳಿವೆ. ಅವರ ಮೇಲೆ ಎಲ್ಲಾ ಕೇಸುಗಳು ಏಕೆ ಸ್ಥಗಿತವಾಗಿದೆ ಎಂದು ಕಿಡಿ ಕಾರಿದರು.
ಬಿಜೆಪಿ ಸೇರಿದರೆ ಆರೋಪಿಯಾದ ರಾಜಕೀಯ ನಾಯಕರು ಕಾನೂನು ಕುಣಿಕೆಯಿಂದ ಪಾರಾಗುತ್ತಾರೆ. 121 ರಾಜಕೀಯ ನಾಯಕರ ಮೇಲೆ ತನಿಖಾ ಸಂಸ್ಥೆಗಳು ದಾಳಿ ಮಾಡಿವೆ. ಈ ಪೈಕಿ 115 ವಿಪಕ್ಷಗಳ ನಾಯಕರ ಮೇಲೆ ದಾಳಿ ನಡೆದಿದೆ. 3000 ಇ.ಡಿ, ಐಟಿ, ಸಿಬಿಐ ದಾಳಿಗಳಾಗಿವೆ. ಅದರಲ್ಲಿ ಶೇ 25ರಷ್ಟಲ್ಲಿ ಮಾತ್ರ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೇಲೆ ಅಕ್ರಮ ಆಸ್ತಿ ಪ್ರಕರಣ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಪದೇ ಪದೇ ದುಬೈಗೆ ಹೋಗುತ್ತಾರೆ ಎಂದು ಅವರ ಪಕ್ಷದ ಹಾಲಿ ಶಾಸಕರೇ ಆರೋಪಿಸುತ್ತಿದ್ದಾರೆ. ಈ ಕುರಿತು ಏಕೆ ತನಿಖೆ ಮಾಡುತ್ತಿಲ್ಲ. ಅಧಿಕಾರಿಗಳ ಮೇಲೆ ಐಟಿ, ಇ.ಡಿ. ಅವರು ಸಿಎಂ, ಡಿಸಿಎಂ ಹೆಸರು ಹೇಳುವಂತೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ನಾವು ಜಗ್ಗಲ್ಲ, ಬಗ್ಗಲ್ಲ’ ಎಂದರು.
‘ವಾಲ್ಕೀಕಿ ಅಭಿವೃದ್ಧಿ ನಿಗಮ ಅಕ್ರಮ ಕುರಿತ ಇ.ಡಿ. ತನಿಖೆ ರಾಜಕೀಯ ದುರುದ್ದೇಶದ ತನಿಖೆ ಆಗಿದೆ’ ಎಂದು ಸಚಿವ ಕೆ.ಜೆ.ಜಾರ್ಜ್ ದೂರಿದರು.
‘ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬಹುಮತದಿಂದ ಸರ್ಕಾರ ಬಂದಿದೆ. ಬಹುಶಃ ಸರ್ಕಾರದ ಕಾರ್ಯಕ್ರಮ ಅವರಿಗೆ ಸಹಿಸಲು ಆಗುತ್ತಿಲ್ಲ. ಚುನಾಯಿತ ಸರ್ಕಾರ ಬೀಳಿಸಲು ತನಿಖಾ ಸಂಸ್ಥೆಯನ್ನು ಬಳಕೆ ಮಾಡುತ್ತಿದ್ದಾರೆ. ಎಲ್ಲಾ ಪ್ರಕರಣಗಳಲ್ಲಿ ಇ.ಡಿ ಅಧಿಕೃತವಾಗಿ ತನಿಖಾ ಪ್ರಕ್ರಿಯೆಯ ಅಂಶಗಳನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ’ ಎಂದು ದೂರಿದರು.
ಇದು ರಾಜಕೀಯ ದುರುದ್ದೇಶವಾಗಿದೆ. ಇದೇ ರೀತಿ ಮುಂದುವರಿದರೆ ನಾವು ಸುಮ್ಮನೆ ಕೂರಲ್ಲ. ರಾಜಕೀಯ ಹೋರಾಟ ಮತ್ತು ಕಾನೂನು ಹೋರಾಟ ಮಾಡುತ್ತೇವೆ. ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಇದು ದುರುದ್ದೇಶಪೂರಿತ ಪ್ರಕರಣವಾಗಿದೆ ಎಂದು ಆರೋಪಿಸಿದರು.
ಇದರ ಉದ್ದೇಶ ಕಾಂಗ್ರೆಸ್ ಮುಖಂಡರನ್ನು ಪ್ರಕರಣದಲ್ಲಿ ಸಿಲುಕಿಸುವುದೇ ಆಗಿದೆ. ಸರ್ಕಾರದ ಹೆಸರುಗಳನ್ನು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ. ಇ.ಡಿ. ಬಿಜೆಪಿಯವರ ರಾಜಕೀಯ ವಿಭಾಗವಾಗಿದೆ. ಅವರ ಅನುಕೂಲಕ್ಕಾಗಿ ಇ.ಡಿ ಬಳಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.