ಮೈಸೂರು: ‘ಬಿಜೆಪಿ ಹಾಗೂ ಎನ್‌ಡಿಎಗೆ ಅಲ್ಪಸಂಖ್ಯಾತರ ಮೇಲೆ ಕೋಪವಿದೆ. ಹೀಗಾಗಿಯೇ, ವಕ್ಫ್ ಕಾಯ್ದೆ ತಿದ್ದುಪಡಿ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿರುವ ಕುರಿತು ಇಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ‘ಬಿಜೆಪಿಯವರು ಎಂದಿಗೂ ಜಾತ್ಯತೀತತೆ, ಸಾಮಾಜಿಕ ನ್ಯಾಯದ ಪರವಾಗಿ ನಿಂತವರಲ್ಲ. ಬಿಜೆಪಿ ಹಿಂದಿನಿಂದಲೂ ಕೋಮುವಾದಿ ಪಕ್ಷವಾಗಿಯೇ ಗುರುತಿಸಿಕೊಂಡಿದ್ದು, ಜಾತ್ಯತೀತ ತತ್ವವನ್ನು ನಂಬುವುದಿಲ್ಲ’ ಎಂದು ಆರೋಪಿಸಿದರು.
‘ಮತಾಂತರ ನಿಷೇಧ ಕಾನೂನು, ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗಳನ್ನು ಮಾಡಿದವರು ಬಿಜೆಪಿಯವರು. ಈಗ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಸಂವಿಧಾನದ ಪ್ರಕಾರ ಎಲ್ಲರಿಗೂ ಸಮಾನ ಅವಕಾಶಗಳಿವೆ. ವಕ್ಫ್ ಬೋರ್ಡ್ ಕಾನೂನು ಆ ಸಮುದಾಯದ ವೈಯಕ್ತಿಕ ಕಾನೂನಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವುದು ಸಂವಿಧಾನ ಬಾಹಿರವಾಗುತ್ತದೆ. ಸಂವಿಧಾನದ ತತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿರುವ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದವರು, ಕೇಂದ್ರದ ಈ ನಿಲುವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ’ ಎಂದು ತಿಳಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎನ್ನುವವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸುಳ್ಳು ಪ್ರಕರಣಗಳನ್ನೆಲ್ಲಾ ಎದುರಿಸುವ ಶಕ್ತಿ ನನಗಿದೆ. ಸುಳ್ಳು ಕೇಸುಗಳನ್ನು ದಾಖಲಿಸಿದರೆ, ಅವು ಕಾನೂನಿನಲ್ಲಿ ಮಾನ್ಯವಾಗುವುದಿಲ್ಲ’ ಎಂದು ಹೇಳಿದರು.
‘ಜನಾಂದೋಲನ ಸಮಾವೇಶದ ರೂಪರೇಷೆ ನಾನು ಮಾಡಿಲ್ಲ. ಪಕ್ಷದ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದವರು, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್ ಮಾಡಿದ್ದಾರೆ. ಚಾಮರಾಜನಗರ, ಮೈಸೂರು, ಕೊಡಗು ಹಾಗೂ ಮಂಡ್ಯದ ಮುಖಂಡರು ಕೈಜೋಡಿದ್ದಾರೆ. ಬಹಳಷ್ಟು ವಿಷಯಗಳನ್ನು ಅಲ್ಲಿ ಮಾತನಾಡುತ್ತೇನೆ’ ಎಂದರು.
ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಜಮೀರ್ ಅಹಮದ್ ಖಾನ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.