ಹುಬ್ಬಳ್ಳಿ: ಸಂಸದ ಜಗದಾಂಬಿಕಾ ಪಾಲ್ ಅವರ ಅಧ್ಯಕ್ಷತೆಯ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯು ವಕ್ಫ್ ಆಸ್ತಿಗೆ ಸಂಬಂಧಿಸಿದ 75ಕ್ಕೂ ಹೆಚ್ಚು ಅಹವಾಲುಗಳನ್ನು ಆಲಿಸಿತು.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಒಂದು ಗಂಟೆಗೂ ಹೆಚ್ಚು ಕಾಲ ಅಹವಾಲು ಸಭೆ ನಡೆಸಿದರು. ರೈತರು, ಸಾಮಾನ್ಯ ಜನರು, ವಿವಿಧ ಸಂಘಟನೆಗಳು ಹಾಗೂ ಬಿಜೆಪಿ ಶಾಸಕರಿಂದಲೂ ಸಮಿತಿಯು ಅಹವಾಲು ಸ್ವೀಕರಿಸಿತು.
ಮುಖ್ಯವಾಗಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ರಚಿಸಿದ್ದ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ಗೋವಿಂದ ಕಾರಜೋಳ ತಮ್ಮ ವರದಿಯ ಪ್ರತಿಯನ್ನು ಸಮಿತಿಗೆ ನೀಡಿದರು. ‘ವಿಜಯಪುರ ಜಿಲ್ಲೆಯ ವಿವಿಧೆಡೆ ಸಂಚರಿಸಿ, ಈ ವರದಿಯನ್ನು ಸಿದ್ಧಪಡಿಸಿದ್ದೇವೆ. 5ನೇ ಶತಮಾನ ಹಾಗೂ 12ನೇ ಶತಮಾನದಲ್ಲಿ ನಿರ್ಮಾಣವಾಗಿರುವ ದೇವಸ್ಥಾನದ ಜಾಗವನ್ನು ವಕ್ಫ್ ಆಸ್ತಿ ಎಂದು ನಮೂದಿಸಿರುವುದು ಕಂಡುಬಂದಿದೆ. ಹಿಂದೂ ದೇವಸ್ಥಾನಗಳ, ಮಠಗಳ ಆಸ್ತಿ ಹಾಗೂ ರೈತರ 1,000ಕ್ಕೂ ಹೆಚ್ಚು ಎಕರೆ ಜಾಗದ ಆರ್.ಟಿ.ಸಿ ಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿರುವುದನ್ನು ದಾಖಲೆ ಸಮೇತ ವರದಿ ನೀಡಿದ್ದೇವೆ’ ಎಂದು ಗೋವಿಂದ ಕಾರಜೋಳ ಹೇಳಿದರು.
ಸತ್ಯಶೋಧನಾ ಸಮಿತಿಯ ಸದಸ್ಯ, ವಕೀಲ ಎಂ.ಬಿ. ಜಿರಲಿ ಮಾತನಾಡಿ, ‘ಮಾಲೀಕರಿಗೆ ಯಾವುದೇ ನೋಟಿಸ್ ನೀಡದೇ ಜಾಗವನ್ನು ವಕ್ಫ್ ಆಸ್ತಿ ಎಂದು ಆರ್.ಟಿ.ಸಿ ಯಲ್ಲಿ ನಮೂದಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರೈತರ ಹೇಳಿಕೆಗಳು ಹಾಗೂ ದಾಖಲೆಗಳನ್ನು ಸಹ ನೀಡಿದ್ದೇವೆ’ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್, ಹಾವೇರಿ ಜಿಲ್ಲೆಯ ವಕೀಲರು, ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ಭಾರತೀಯ ಕಿಸಾನ್ ಸಂಘ, ರತ್ನ ಭಾರತ ರೈತ ಸಮಾಜ, ನರಗುಂದ ರೈತರು, ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ ರೈತರು, ಹಾವೇರಿ ಜಿಲ್ಲೆಯ ಹಾನಗಲ್ ರೈತರು, ಹಿಂದೂ ಜಾಗರಣ ವೇದಿಕೆ, ಗದಗ ಜಿಲ್ಲೆಯ ರೈತರು, ಗರಗ, ಅಣ್ಣಿಗೇರಿ ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಅಹವಾಲುಗಳನ್ನು ಸ್ವೀಕರಿಸಿದ ಜಗದಾಂಬಿಕಾ ಪಾಲ್ ಮಾತನಾಡಿ, ‘ಈ ಅಹವಾಲುಗಳನ್ನು ಪರಿಶೀಲಿಸುತ್ತೇನೆ’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.