ವಕ್ಫ್ ಅಸ್ತಿಗಳ ಒತ್ತುವರಿಯನ್ನು ತೆರವು ಮಾಡಿಸಬೇಕು ಮತ್ತು ಪಹಣಿಗಳಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಿಸಬೇಕು ಎಂಬ ನಿರ್ಧಾರವು ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವಧಿಯಲ್ಲೇ ಆಗಿತ್ತು. ಈ ಅವಧಿಯಲ್ಲಿ ರೈತರು ಮತ್ತು ಭೂಮಾಲೀಕರಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ನೋಟಿಸ್ ನೀಡಲಾಗಿತ್ತು ಎಂಬ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ಆರಂಭವಾಗಿದೆ.
ಬೆಂಗಳೂರು: ‘ವಕ್ಫ್ ಆಸ್ತಿ ವಿಚಾರದಲ್ಲಿ ರಾಜ್ಯ ಬಿಜೆಪಿಯ ಆತ್ಮವಂಚನೆಯ ನಡವಳಿಕೆ ಮತ್ತೆ ಮತ್ತೆ ಬಯಲಾಗುತ್ತಿದ್ದರೂ ಕನಿಷ್ಠ ನಾಚಿಕೆ, ಮರ್ಯಾದೆ ಇಲ್ಲದೆ ಬೀದಿಗಿಳಿದು ನಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಆ ಪಕ್ಷದ ರಾಜಕೀಯ ದಿವಾಳಿತನ ಮತ್ತು ಹತಾಶ ಮನಸ್ಥಿತಿಯನ್ನು ಸೂಚಿಸುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಬಣ ರಾಜಕೀಯದಿಂದ ಒಡೆದು ಹೋಗಿರುವ ರಾಜ್ಯ ಬಿಜೆಪಿಯ ನಾಯಕರು ಪ್ರತಿಭಟನೆ ನಡೆಸುತ್ತಿರುವುದು ವಕ್ಫ್ ಆಸ್ತಿ ರಕ್ಷಣೆಗಾಗಿ ಅಲ್ಲ, ಬೀದಿಪಾಲಾಗಿರುವ ತಮ್ಮ ಮಾನ ರಕ್ಷಣೆಗೆ ಎನ್ನುವುದನ್ನು ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ’ ಎಂದು ಕುಟುಕಿದ್ದಾರೆ.
‘ವಕ್ಫ್ ಆಸ್ತಿ ಸಂರಕ್ಷಣೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರಿಗೆ ನೋಟಿಸ್ ನೀಡಿರುವುದು ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರ ಎನ್ನುವುದನ್ನು ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಅಧ್ಯಕ್ಷತೆಯ ವಿಧಾನಮಂಡಲದ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯೇ ವರದಿ ನೀಡಿರುವುದನ್ನು ‘ಪ್ರಜಾವಾಣಿ’ ಪತ್ರಿಕೆ ಸೋಮವಾರದ ಸಂಚಿಕೆಯಲ್ಲಿ ಪ್ರಕಟಿಸಿದೆ. ತನ್ನ ಬಣ್ಣ ಬಯಲಾದ ನಂತರವಾದರೂ ಬುದ್ದಿ ಕಲಿತು, ಪ್ರತಿಭಟನೆಯ ನಾಟಕ ನಿಲ್ಲಿಸಿ ತಮ್ಮ ಮರ್ಯಾದೆ ಅವರು ಉಳಿಸಿಕೊಳ್ಳಬೇಕು’ ಎಂದಿದ್ದಾರೆ.
‘ಸುಳ್ಳು ಆರೋಪ ಮತ್ತು ಅಪಪ್ರಚಾರಕ್ಕೆ ಸರಿಯಾದ ಶಿಕ್ಷೆಯನ್ನು ಇತ್ತೀಚಿನ ಉಪಚುನಾ ವಣೆಯಲ್ಲಿ ರಾಜ್ಯದ ಜಾಗೃತ ಮತದಾರರು ಬಿಜೆಪಿಗೆ ನೀಡಿದ್ದಾರೆ. ಇದರಿಂದಲೂ ಬುದ್ದಿ ಕಲಿಯದೆ ಇದ್ದರೆ ರಾಜ್ಯದಲ್ಲಿ ಬಿಜೆಪಿಯನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಕುಳ್ಳಿರಿಸುವುದು ಖಚಿತ’ ಎಂದೂ ಹೇಳಿದ್ದಾರೆ.
ಬೆಂಗಳೂರು: ‘ರೈತರಿಗೆ ವಕ್ಫ್ ನೋಟಿಸ್ ವಿಚಾರದಲ್ಲಿ ನಮ್ಮ ಸರ್ಕಾರದ ಮೇಲೆ ಮಾಡುತ್ತಿದ್ದ ಆಪಾದನೆ ಏನೆಂಬ ಸತ್ಯ ಬಯಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸತ್ಯವನ್ನು ಯಾವತ್ತೂ ಹೆಚ್ಚು ದಿನ ಮುಚ್ಚಿಡಲು ಆಗುವುದಿಲ್ಲ. ರೈತರಿಗೆ ನೋಟಿಸ್ ಕೊಟ್ಟಿದ್ದೇವೆ ಎಂದು ನಮ್ಮ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿದ್ದರು. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರಿಗೆ ಹೆಚ್ಚು ನೋಟಿಸ್ ನೀಡಲಾಗಿದೆ. ಈಗ ಬಿಜೆಪಿಯವರು ಏನು ಹೇಳುತ್ತಾರೆ’ ಎಂದು ಪ್ರಶ್ನಿಸಿದರು.
‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಕ್ಫ್ ವಿಚಾರದಲ್ಲಿ ತಮ್ಮ ಪಕ್ಷದವರಿಗೆ ಮುಖಭಂಗ ಮಾಡಲು ಹೋರಾಟಕ್ಕೆ ಮುಂದಾಗಿದ್ದಾರೆ' ಎಂದರು. ‘ನಾವು ವಿರೋಧ ಪಕ್ಷದಲ್ಲಿದ್ದಾಗ ರೈತರಿಗೆ ನೋಟಿಸ್ ನೀಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ನಾವು ಆ ವಿಚಾರವನ್ನು ಕೈಗೆತ್ತಿಕೊಂಡಿರ ಲಿಲ್ಲ. ಈಗ ನಮ್ಮ ಗಮನಕ್ಕೆ ಬಂದಿರುವುದರಿಂದ ಎಚ್ಚರಿಕೆ ಯಿಂದ ಕೆಲಸ ಮಾಡುತ್ತೇವೆ’ ಎಂದೂ ಹೇಳಿದರು.
ಬೆಂಗಳೂರು: ಕಾಂಗ್ರೆಸ್ ನಾಯಕರು ಭಾರೀ ಪ್ರಮಾಣದಲ್ಲಿ ವಕ್ಫ್ ಭೂಮಿ ಕಬಳಿಸಿ ಮಾರಾಟ ಮಾಡಿರುವುದು ಅನ್ವರ್ ಮಾಣಿಪ್ಪಾಡಿ ಸಮಿತಿ ವರದಿಯಿಂದ ಬೆಳಕಿಗೆ ಬಂದಿತ್ತು. ಕಬಳಿಕೆ ಮಾಡಿದ ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಲಾಗಿತ್ತೇ ಹೊರತು ಬಡ ರೈತರಿಗೆ ನೋಟಿಸ್ ನೀಡಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ಸಮಿತಿ ರಚಿಸಿ, ವಕ್ಫ್ ಭೂಕಬಳಿಕೆ ಕುರಿತು ವರದಿಯನ್ನು ಸಿದ್ಧಪಡಿಸಿತ್ತು. ಆಗ ಭೂಕಬಳಿಕೆ ಆಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೂ ಕಾಂಗ್ರೆಸ್ ಸಿದ್ಧವಿರಲಿಲ್ಲ ಎಂದು ತಿಳಿಸಿದರು
ಕಾಂಗ್ರೆಸ್ ಪಕ್ಷದ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಭಾವಿ ಮುಖಂಡರು ಸಾವಿರಾರು ಎಕರೆ ವಕ್ಫ್ ಭೂಮಿ ಕಬಳಿಸಿರುವುದು ಮಾಣಿಪ್ಪಾಡಿ ವರದಿ ಉಲ್ಲೇಖಿಸಿದೆ. ಬಡವರ ಭೂಮಿ ನುಂಗಿರುವ ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಹಿಡಿಯುವ ಉದ್ದೇಶದಿಂದ ಸರ್ಕಾರ ನೋಟಿಸ್ ಕೊಟ್ಟಿತ್ತು. ಈಗ ಕಾಂಗ್ರೆಸ್ ಸರ್ಕಾರವೇ ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟ ನೋಟಿಸ್‌ಗಳಲ್ಲಿ ಏನಾದರೂ ತಪ್ಪಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿ ಎಂದು ಅಶೋಕ ಸವಾಲು ಹಾಕಿದರು.
ಬಿಜೆಪಿ ಸರ್ಕಾರ ಬಡ ರೈತರಿಗೆ, ತಲೆ ತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಕೃಷಿ ಜಮೀನುಗಳಿಗೆ, ಗೋಮಾಳಗಳಿಗೆ ಸ್ಮಶಾನಗಳಿಗೆ, ನೂರಾರು ವರ್ಷ ಇತಿಹಾಸ ಇರುವ ಸರ್ಕಾರಿ ಶಾಲೆಗಳು, ದೇವಸ್ಥಾನಗಳಿಗೆ, ಮಠ– ಮಾನ್ಯಗಳಿಗೆ ಪಾರಂಪರಿಕ ತಾಣಗಳಿಗೆ ಜನಸಾಮಾನ್ಯರ ಆಸ್ತಿ–ಪಾಸ್ತಿಗಳಿಗೆ ಮತ್ತು ಮಾಜಿ ಶಾಸಕರ ಮನೆಗಳಿಗೆ ನೋಟಿಸ್ ನೀಡಿರಲಿಲ್ಲ. ಆದರೆ, ಕಾಂಗ್ರೆಸ್ ಈ ಕುರಿತು ಅಪಪ್ರಚಾರದಲ್ಲಿ ತೊಡಗಿದೆ ಎಂದು ಹರಿಹಾಯ್ದರು.
ವಕ್ಫ್ ವಿಚಾರದಲ್ಲಿ ದಿನಕ್ಕೊಂದು ನಾಟಕ, ಕ್ಷಣಕ್ಕೊಂದು ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ಮತ್ತೊಮ್ಮೆ ಜನರ ದಿಕ್ಕು ತಪ್ಪಿಸಲು ಹೊಸ ನಾಟಕ ಆರಂಭಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚು ನೋಟಿಸ್ ನೀಡಲಾಗಿದೆ ಎಂದು ಮತ್ತೊಂದು ದಿಕ್ಕು ತಪ್ಪಿಸುವ ಪ್ರಯತ್ನ ಕಾಂಗ್ರೆಸ್‌ನಿಂದ ನಡೆದಿದೆ. ಓಲೈಕೆ ರಾಜಕಾರಣಕ್ಕೆ ಇನ್ನೆಷ್ಟು ಸುಳ್ಳು ಹೇಳುತ್ತೀರಿ ಎಂದು ಅವರು ಪ್ರಶ್ನಿಸಿದರು.
ಸಿದ್ದರಾಮಯ್ಯ ಸರ್ಕಾರ ಒಂದು ಕಡೆ ನೋಟಿಸ್ ನೀಡುತ್ತಿಲ್ಲ ಎಂದು ಹೇಳುತ್ತಿದೆ. ಆದರೆ, ರೈತರಿಗೆ, ಮಠ– ಮಂದಿರಗಳಿಗೆ ನೋಟಿಸ್ ಕಳಿಸುವುದು, ರಾತ್ರೋರಾತ್ರಿ ತರಾತುರಿಯಲ್ಲಿ ಭೂದಾಖಲೆಗಳನ್ನು ತಿದ್ದುವುದು ಮಾತ್ರ ನಿಂತೇ ಇಲ್ಲ. ಜಮೀರ್ ಅಹಮದ್ ಖಾನ್ ಅವರು ಇದೆಲ್ಲಾ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ನಡೆಯುತ್ತಿದೆ ಎಂದು ಹೇಳುವ ವಿಡಿಯೋ ಬಹಿರಂಗ ಆದ ಮೇಲೆ ಕಾಂಗ್ರೆಸ್ ಸುಳ್ಳುಗಳು ಬಯಲಾಯಿತು ಎಂದಿದ್ದಾರೆ.
ಡಿ.4 ರಿಂದ ಪ್ರವಾಸ: ಬೆಂಗಳೂರು: ರಾಜ್ಯದಲ್ಲಿನ ವಕ್ಫ್ ಆಸ್ತಿ ಒತ್ತುವರಿಯ ಮಾಹಿತಿ ಸಂಗ್ರಹಕ್ಕೆ ಬಿಜೆಪಿಯ 3 ತಂಡಗಳು ಡಿ.4ರಿಂದ 6ರವರೆಗೆ ರಾಜ್ಯ ಪ್ರವಾಸ ನಡೆಸಲಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಡಿ.9ರಿಂದ ಆರಂಭ ವಾಗುವ ಬೆಳಗಾವಿ ಅಧಿವೇಶನದಲ್ಲಿ ಸದನದ ಒಳಗೆ, ಹೊರಗೆ ರೈತರ ಪರವಾಗಿ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.