ADVERTISEMENT

Waqf Row | ರೈತರಿಗೆ ಕೊಟ್ಟ ನೋಟಿಸ್‌‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು: ಶೋಭಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2024, 8:25 IST
Last Updated 5 ನವೆಂಬರ್ 2024, 8:25 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಬೆಂಗಳೂರು: ಕರ್ನಾಟಕದ ವಿಜಯಪುರ ಜಿಲ್ಲೆ ಸೇರಿ ಬೇರೆ ಬೇರೆ ಜಿಲ್ಲೆಗಳಲ್ಲಿ ವಕ್ಫ್‌ ಹೆಸರಲ್ಲಿ ರೈತರಿಗೆ ಕೊಟ್ಟ ನೋಟಿಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಸಿಎಂಗೆ ಶೋಭಾ ಕರಂದ್ಲಾಜೆ ಬರೆದಿರುವ ಪತ್ರದ ಪೂರ್ಣರೂಪ ಇಲ್ಲಿದೆ:

'ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಕ್ಫ್‌ ಇಲಾಖೆ ವತಿಯಿಂದ, ಜಮೀನನ್ನು ಅತಿಕ್ರಮಣ ಮಾಡುವುದು ಮತ್ತು ರೈತರಿಗೆ ನೋಟಿಸ್ ಕೊಡುವದು ಆರಂಭವಾಗಿದೆ. ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಯನ್ನು ತಿದ್ದುಪಡೆ ಮಾಡುವ ಸಲುವಾಗಿ ಜೆ.ಪಿ.ಸಿ (Joint Parliamentary Committee) ನೇಮಕ ಮಾಡಿದ ನಂತರ ಕರ್ನಾಟಕ ರಾಜ್ಯದಲ್ಲಿ ವಕ್ಫ್‌ ಸಚಿವ ಜಮೀರ್ ಅಹ್ಮದ್ ಖಾನ್ ರವರು ವಕ್ಫ್‌ ಅದಾಲತನ್ನು ತರಾತುರಿಯಲ್ಲಿ ನಡೆಸಿ, ಕಂದಾಯ ಅಧಿಕಾರಿಗಳಿಗೆ ಒತ್ತಡ ಮಾಡಿ ಸಾವಿರಾರು ರೈತರ ಜಮೀನು, ಮಠಗಳು, ದೇವಸ್ಥಾನಗಳು ಮತ್ತು ಪುರಾತತ್ವ ಇಲಾಖೆಯ ಜಾಗಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಿದ್ದಾರೆ. ಹಲವಾರು ರೈತರ ಜಮೀನಿನ ಪಹಣಿ (ಉತಾರೆ) ಯಲ್ಲಿ ವಕ್ಫ್‌ ಜಮೀನೆಂದು ನಮೂದು ಆಗಿರುತ್ತದೆ'.

ADVERTISEMENT

'ವಿಜಯಪುರ ಜಿಲ್ಲೆಯಲ್ಲಿ 15 ಸಾವಿರ ಎಕರೆಗಿಂತಲೂ ಹೆಚ್ಚು ರೈತರ ಜಮೀನನ್ನು ವಕ್ಫ್‌ ಆಸ್ತಿ ಎಂದು ನಮೂದಿಸಲಾಗಿದೆ. ಉದಾಹರಣೆಗೆ ವಿಜಯಪುರದ ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ, ಸಿಂದಗಿಯ ವಿರಕ್ತ ಮಠ, ಸೋಮೇಶ್ವರ ದೇವಸ್ಥಾನ ರಾಜ್ಯದ ಇತರೆ ಭಾಗಗಳಲ್ಲಿ ಕುರುಬರ ಆರಾಧ್ಯದೈವ ಭೀರದೇವರ ದೇವಸ್ಥಾನ, ಮಂಡ್ಯದ ಚಿಕ್ಕಮ್ಮ ದೇವಸ್ಥಾನ, ಹಾವೇರಿಯ ಆಂಜನೇಯ ದೇವಸ್ಥಾನ, ಕೊಪ್ಪಳದ ಆಂಜನಾದ್ರಿಯ ಬೆಟ್ಟ, ಹಂಪಿಯ ಹಲವಾರು ಪ್ರದೇಶಗಳು, ಕಲಬುರ್ಗಿ, ಯಾದಗಿರಿ, ಬೀದರ್‌ನ ಹಲವಾರು ಪ್ರಸಿದ್ಧ ಸ್ಥಳಗಳನ್ನು ವಕ್ಫ್‌ ತನ್ನ ಆಸ್ತಿ ಎಂದು ಘೋಷಿಸಿರುವುದು ಖಂಡನೀಯ'.

'ನಿಮ್ಮ ಸಚಿವ ಸಂಪುಟದ ಸಹದ್ಯೋಗಿ ಜಮೀರ್ ಅಹ್ಮದ್ ಖಾನ್ ರವರು ಮತಾಂಧ ಭಾಷಣಗಳನ್ನು ಮಾಡುತ್ತಾ, ಅಲ್ಲಾನ ಸಲುವಾಗಿ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆಂದು ಸಾರ್ವಜನಿಕವಾಗಿ ಹೇಳುತ್ತಿದ್ದಾರೆ ಮತ್ತು ಈ ಸಂಬಂಧ ಅಧಿಕಾರಿಗಳಿಗೆ ಧಮ್ಮಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಚಾಲುಕ್ಯರು, ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನಗಳನ್ನು, 12ನೇ ಶತಮಾನದಲ್ಲಿ ಕಿತ್ತೂರು ರಾಣಿ ಚನ್ನಮ್ಮ ರವರು ಮಠಗಳಿಗೆ ದಾನ ಕೊಟ್ಟಿದ್ದ ಜಮೀನು ವಕ್ಫ್‌ ಆಸ್ತಿಯಾಗಲು ಹೇಗೆ ಸಾಧ್ಯ? ಇದರ ಹಿಂದೆ ಇರುವ ಹುನ್ನಾರವೇನು?'

'ಡಾ.ಬಾಬಾಸಾಹೇಬರವರು ರಚನೆ ಮಾಡಿದ ಮೂಲ ಸಂವಿಧಾನದಲ್ಲಿ ವಕ್ಫ್‌ ಅನ್ನುವ ಪದ ಅಥವಾ ಕಲ್ಪನೆಯೇ ಇರಲ್ಲಿಲ್ಲ. 1954-1955 ರಲ್ಲಿ ಇದನ್ನು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ರವರ ಆಡಳಿತಾವಧಿಯಲ್ಲಿ ಸೇರಿಸಲಾಯಿತು. ವಕ್ಫ್‌ ಸಂಸ್ಥೆಯ ರಚನೆಯೇ ದೇಶದ ರೈತರ ದಲಿತರ, ಹಿಂದುಳಿದ ವರ್ಗದವರ ಮತ್ತು ಮಠ ಮಂದಿರಗಳ ಜಮೀನಿನ ವಾರಸುದಾರಿಕೆ ಬಗ್ಗೆ ಪ್ರಶ್ನಿಸುವ ಒಂದು ವ್ಯವಸ್ಥಿತ ಷಡ್ಯಂತರದ ಭಾಗವಾಗಿದೆ'.

'ಇನ್ನೂ ಆತಂಕ ತಂದಿರುವ ಸಂಗತಿ ಏನೆಂದರೆ, ಸರ್ಕಾರದ ದಿಶಾಂಕ್ ಆ್ಯಪ್‌ನಲ್ಲಿ ಕರ್ನಾಟಕದ ಹಲವಾರು ಪ್ರದೇಶಗಳ ಹೆಸರನ್ನು ಬದಲಾಯಿಸಿ, ಆಕ್ಷೇಪಾರ್ಹ ಹೆಸರನ್ನು ನಮೂದಿಸಲಾಗಿದೆ. ಉದಾಹರಣೆಗೆ ಉಡುಪಿ ನಗರದಲ್ಲಿ ಕಲ್ಸಂಕಾ ವೃತ್ತದ ಎಡಭಾಗ ಪೂರ್ಣವಾಗಿ ಸುಲ್ತಾನಪುರ್ ಆಗಿದೆ. ಅದೇ ರೀತಿ ದಿಶಾಂಕ್‌ ಆ್ಯಪ್‌ನಲ್ಲಿ ಶಿವಳ್ಳಿ, ಗ್ರಾಮವು ಕೂಡ ಸುಲ್ತಾನಪುರ ಆಗಲು ಯಾರ ಕುಮ್ಮಕ್ಕು ಎಂಬುವುದು ತನಿಖೆಯಾಗಬೇಕಾಗಿದೆ'.

ಈ ಎಲ್ಲಾ ಗೊಂದಲಗಳ ನಿವಾರಣೆಗಾಗಿ ತಕ್ಷಣ ತಾವುಗಳು ನಮ್ಮ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಶೋಭಾ ಕರಂದ್ಲಾಜೆ ಮುಂದಿರಿಸಿರುವ ಬೇಡಿಕೆಗಳು:

1) ಕರ್ನಾಟಕದಲ್ಲಿ ವಿಜಯಪುರ ಜಿಲ್ಲೆ ಸೇರಿ ಬೇರೆ ಬೇರೆ ಜಿಲ್ಲೆಗಳಲ್ಲಿ ವಕ್ಫ್‌ ಹೆಸರಲ್ಲಿ ರೈತರಿಗೆ ಕೊಟ್ಟ ನೋಟಿಸ್ ಗಳನ್ನು ತಕ್ಷಣ ವಾಪಸ್ ಪಡೆಯಬೇಕು.

2) ರೈತರು ಮತ್ತು ಮಠ ಮಂದಿರಗಳ ಪಹಣಿ (ಉತಾರಿ) ಯಲ್ಲಿ ವಕ್ಫ್‌ ಎಂದು ನಮೂದಿಸಿದನ್ನು ತಗೆದು ಹಾಕಿ, ಮೂಲ ಭೂಮಾಲೀಕರ ಹೆಸರನ್ನು ಮತ್ತೆ ಇಂಡೀಕರಣ ಮಾಡಬೇಕು.

3) 1974ರ ರಾಜ್ಯ ಪತ್ರ ಮತ್ತು ನಂತರದ ಸಂಬಂಧಿತ ಎಲ್ಲ ರಾಜ್ಯ ಪತ್ರಗಳನ್ನು ರದ್ದುಪಡಿಸಬೇಕು.

4) ಕಾನೂನು ಬಾಹಿರವಾಗಿ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಿದನ್ನು ಪರಿಶೀಲಿಸಿ, ಕರ್ನಾಟಕ ಭೂ ಕಂದಾಯ ಅಧಿನಿಯಮದಂತೆ, ಸದರಿ ನಮೂದನ್ನು ತೆಗೆದು ಹಾಕಲು ತ್ವರಿತವಾಗಿ ಕ್ರಮವಹಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಬೇಕು. ಮುಂದುವರೆದು, ನಿಯಮಬಾಹಿರವಾಗಿ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಲು ಮೌಖಿಕ ಆದೇಶ ನೀಡಿರುವ ವಕ್ಫ್‌ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡಬೇಕು ಹಾಗೂ ಸಚಿವರ ಮೌಖಿಕ ಆದೇಶ ಪಾಲಿಸಿ ಕಾನೂನು ಬಾಹಿರವಾಗಿ ರೈತರ ಜಮೀನುಗಳ ಪಹಣಿ (ಉತಾರೆ) ಗಳಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು.

5) ದಿಶಾಂಕ್ ಆ್ಯಪ್‌ನಲ್ಲಿ ತಪ್ಪು ನಮೂದುಗಳನ್ನು ರದ್ದು ಮಾಡಿ, ಸಾರ್ವಜನಿಕರು ಮತ್ತು ಅಧಿಕಾರಿಗಳು ಪರಿಶೀಲನೆ ಮಾಡಿದ ತರುವಾಯ ಜನರಿಗೆ ನಿಖರ ಮಾಹಿತಿ ನೀಡಬೇಕು ಹಾಗೂ ದಿಶಾಂಕ್ ಆ್ಯಪ್‌ ಮತ್ತು ಭೂಮಿ ತಂತ್ರಾಂಶದ ಸರ್ವರ್ ನಿಷ್ಕ್ರಿಯ ಆಗಿರುವುದನ್ನು ತಕ್ಷಣ ಸರಿ ಮಾಡಬೇಕು.

6) ವಕ್ಫ್‌ ಜಮೀನನಲ್ಲಿ ಆದ ಅಕ್ರಮದ ಬಗ್ಗೆ ಅನ್ವರ ಮಾಣಿಪ್ಪಾಡಿ ವರದಿ ನೀಡಿದ್ದಾರೆ. ಈ ವರದಿಯಲ್ಲಿ ಕಂಡು ಬಂದ ಅಕ್ರಮಗಳ ಬಗ್ಗೆ ತನಿಖೆಯಾಗಬೇಕು.

ಈ ಬಗ್ಗೆ ತಕ್ಷಣ ಅವಶ್ಯ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರ ಆತಂಕವನ್ನುದೂರಗೊಳಿಸಬೇಕೆಂದು ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.