ಕಲಬುರಗಿ: ‘ರಾಜ್ಯದಲ್ಲಿ ಉಪ ಚುನಾವಣೆಗಳು ನಡೆಯುತ್ತಿರುವುದರಿಂದ ವಕ್ಫ್ ವಿವಾದವನ್ನು ಮುನ್ನೆಲೆಗೆ ತರಲಾಗುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ವಕ್ಫ್ ಆಸ್ತಿಗಳು ಎಲ್ಲೆಲ್ಲಿವೆ ಎಂದು ಗುರುತಿಸಲಾಗಿತ್ತು. ಕಲಬುರಗಿ ಜಿಲ್ಲೆಯೊಂದರಲ್ಲೇ 95 ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಬಿಜೆಪಿ ಸರ್ಕಾರ ಇದ್ದಾಗ ಗುರುತಿಸಿದ್ದರು. ಇದಕ್ಕೆ ಬಿಜೆಪಿ ನಾಯಕರು ಏನೆನ್ನುತ್ತಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಇಷ್ಟಾಗಿಯೂ ರಾಜ್ಯದಲ್ಲಿ ಉಪಚುನಾವಣೆಗಳು ನಡೆಯುತ್ತಿರುವುದರಿಂದ ಬಿಜೆಪಿಯವರು ಪರಿಸ್ಥಿತಿಯ ಲಾಭ ಪಡೆಯಲು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಚುನಾವಣೆ ಬಳಿಕ ಈ ಬಗ್ಗೆ ತುಟಿಪಿಟಕ್ ಎನ್ನುವುದಿಲ್ಲ. ಬಿಜೆಪಿ ಅವಧಿಯಲ್ಲಿಯೂ ವಕ್ಫ್ ಅದಾಲತ್‌ಗಳು ನಡೆದಿದ್ದವು. ಆಗೇನು ವಕ್ಫ್ ಮಂಡಳಿ ಬಾಗಿಲು ಹಾಕಿತ್ತೇ’ ಎಂದು ಪ್ರಶ್ನಿಸಿದರು.
‘ನಮ್ಮ ಸರ್ಕಾರ ಬಂದ ಬಳಿಕ ಸುಮಾರು 40 ಪ್ರಕರಣಗಳಲ್ಲಿ ವಕ್ಫ್ ಆಸ್ತಿ ಇದೆ ಎಂದು ವಕ್ಫ್ ಮಂಡಳಿ ತಿಳಿಸಿದೆ. ಹಾಗೆಂದ ಮಾತ್ರಕ್ಕೆ ನಾವು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಿಲ್ಲ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಂಟಿಯಾಗಿ ಸಭೆ ನಡೆಸಿ ವಕ್ಫ್ ಆಸ್ತಿ ವಿಚಾರವಾಗಿ ರೈತರಿಗೆ ತೊಂದರೆ ನೀಡದಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಪ್ರಿಯಾಂಕ್ ಸ್ಪಷ್ಟಪಡಿಸಿದರು.
‘ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ವಿವಾದ ಮಾಡುತ್ತಿರುವ ಸಂಸದ ತೇಜಸ್ವಿ ಸೂರ್ಯ ತಾವು ಪ್ರತಿನಿಧಿಸುವ ಬೆಂಗಳೂರಿಗೆ ಒಂದು ರೂಪಾಯಿ ಅನುದಾನವಾದರೂ ತಂದಿದ್ದಾರಾ?, ಅಷ್ಟೊಂದು ರೈತರ ಬಗ್ಗೆ ಕಾಳಜಿ ಇದ್ದವರು ಅತಿವೃಷ್ಟಿಯಾದಾಗ, ತೊಗರಿಗೆ ನೆಟೆ ರೋಗ ಬಂದಾಗ ಏಕೆ ಬರಲಿಲ್ಲ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.