ADVERTISEMENT

ವಕ್ಫ್‌ ಬೋರ್ಡ್‌ ಅನ್ಯಾಯ ಅರಿಯಲು ಅನುಕೂಲ: ಪ್ರತಾಪ್‌ ಸಿಂಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 7:26 IST
Last Updated 7 ನವೆಂಬರ್ 2024, 7:26 IST
<div class="paragraphs"><p> ಪ್ರತಾಪ್‌ ಸಿಂಹ </p></div>

ಪ್ರತಾಪ್‌ ಸಿಂಹ

   

ಹುಬ್ಬಳ್ಳಿ: ‘ವಕ್ಫ್ ತಿದ್ದುಪಡಿ ಪರಿಶೀಲನೆಗೆ ರಚನೆ ಮಾಡಲಾಗಿರುವ ಸಂಸದೀಯ ಜಂಟಿ ಸಮಿತಿ ರಾಜ್ಯಕ್ಕೆ ಬಂದಿರುವುದರಿಂದ ವಕ್ಫ್‌ ಬೋರ್ಡ್‌ ಮುಖಾಂತರ ಹೇಗೆಲ್ಲ ಮೋಸ ಮಾಡಲಾಗುತ್ತದೆ ಎಂದು ತಿಳಿಯಲು ಅನುಕೂಲವಾಗಿದೆ’ ಎಂದು ಬಿಜೆಪಿ ಮುಖಂಡ ಪ್ರತಾಪ್‌ ಸಿಂಹ ಹೇಳಿದರು.

ಗುರುವಾರ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಬೇಕು ಎನ್ನುವುದು ಕೇಂದ್ರ ಸರ್ಕಾರದ ಮುಂದಿದ್ದು, ಆ ಕುರಿತು ವರದಿ ನೀಡುವಂತೆ ಸಂಸತ್ತಿನ ಜಂಟಿ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ನೇತೃತ್ವದ ತಂಡ ರಾಜ್ಯಕ್ಕೆ ಬಂದಿರುವುದರಿಂದ , ವಕ್ಫ್‌ ಬೋರ್ಡ್‌ ಮುಖಾಂತರ ಹೇಗೆಲ್ಲ ಅನ್ಯಾಯವಾಗುತ್ತಿದೆ ಎಂದು ರೈತರಿಗೆ ಹೇಳಿಕೊಳ್ಳಲು ಅವಕಾಶ ಸಿಗುತ್ತದೆ. ವಕ್ಫ್‌ ಬೋರ್ಡ್‌ನಿಂದ ಆಸ್ತಿ ಕಬಳಿಸಲು ಯತ್ನ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅದಕ್ಕೆ ಕುಮ್ಮಕ್ಕು ನೀಡುತ್ತಿರುವುದು ಹೀಗೆ ಎಲ್ಲವನ್ನೂ ಸಮಿತಿ ಎದುರು ದಾಖಲೆ ಸಮೇತ ಬಿಚ್ಚಿಡಬಹುದು’ ಎಂದರು.

ADVERTISEMENT

‘ಪಕ್ಷದ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯಪುರದಲ್ಲಿ ಧರಣಿ ಕೈಗೊಂಡು ಜನರ ಪರವಾಗಿ ಧ್ವನಿ ಎತ್ತಿದ್ದರು. ಅದರ ಪರಿಣಾಮ ಕೇಂದ್ರದ ಸಮಿತಿ ರಾಜ್ಯಕ್ಕೆ ಬಂದಿದೆ. ಭೂಮಿ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿರುವವರಿಗೆ ಇದರಿಂದ ನ್ಯಾಯ ಸಿಗಲಿದೆ. ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆ ಚರ್ಚೆಗೆ ಬರುವ ಸಾಧ್ಯತೆಯಿದ್ದು, ವಕ್ಫ್‌ ಬೋರ್ಡ್‌ನಿಂದ ಆಗುತ್ತಿರುವ ಅನ್ಯಾಯದ ಕುರಿತು ಸಹ ಚರ್ಚೆಯಾಗಬಹುದು’ ಎಂದು ಹೇಳಿದರು.

‘ಮುಡಾ ನಿವೇಶನ ಅಕ್ರಮ ಹಂಚಿಕೆ ಕುರಿತು ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆ ನಡೆಸಿದೆ. ಆರೋಪ ಬಂದಾಗ ವಿಚಾರಣೆಗೆ ಹೋಗಲೇ ಬೇಕಾಗುತ್ತದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಮುಖ್ಯಮಂತ್ರಿಯಾದರೂ ತಲೆ ಬಾಗಲೇಬಾಕಾಗುತ್ತದೆ’ ಎಂದು ಪ್ರತಾಪ ಸಿಂಹ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.