ಬೆಂಗಳೂರು: ರೈತರ ಜಮೀನನ್ನು ವಕ್ಫ್‌ಗೆ ಹಸ್ತಾಂತರಿಸುವ ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ನ.4ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಅಮಾಯಕ ರೈತರ ಪಹಣಿಗಳಲ್ಲಿ ‘ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ’ ಎಂದು ನಮೂದಿಸುವ ಮೂಲಕ ರಾಜ್ಯಾದ್ಯಂತ ರೈತರ ಜಮೀನು ಕಬಳಿಸುವ ಪ್ರಯತ್ನ ನಡೆದಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಕೈಗೊಳ್ಳಲಾಗುತ್ತಿದೆ ಎಂದು ಎಲ್ಲ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಲಬುರಗಿ, ವಿಜಯಪುರ, ಯಾದಗಿರಿ,ಬೀದರ್, ಶಿವಮೊಗ್ಗ, ಸೇರಿ ಹಲವಾರು ಜಿಲ್ಲೆಗಳಲ್ಲಿ ರೈತರು ಜಮೀನಿಗೆ ಸಂಚಕಾರ ಬಂದಿದೆ. ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ರಚನಾತ್ಮಕ ವಿರೋಧಪಕ್ಷವಾಗಿ ರೈತರ ಪರವಾಗಿ ಸರ್ಕಾರವನ್ನು ಎಚ್ಚರಿಸುವ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಪಕ್ಷದ ಎಲ್ಲ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಜಿಲ್ಲಾ ಅಧ್ಯಕ್ಷರು ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
ಎಲ್ಲ ಜಿಲ್ಲಾಧಿಕಾರಿ ಕಚೇರಿ ಮತ್ತು ತಾಲ್ಲೂಕು ಕಚೇರಿಗಳ ಮುಂದೆ ರೈತರನ್ನು ಒಳಗೊಂಡಂತೆ ಬೃಹತ್ ಸಂಖ್ಯೆಯಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದ್ದಾರೆ.
‘ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ’ ಎಂಬ ಪಹಣಿಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಸಚಿವ ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆ ಪಡೆಯಬೇಕು ಎಂದು ವಿಜಯೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.