ವಿಜಯಪುರ: ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದ ಜಗದಂಬಿಕಾ ಪಾಲ್ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿಯು (ಜೆಪಿಸಿ) ನ.7ರಂದು ಮಧ್ಯಾಹ್ನ 12ಕ್ಕೆ ವಿಜಯಪುರಕ್ಕೆ ಭೇಟಿ ನೀಡಲಿದೆ.
ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಿ, ಅಲ್ಲಿಂದ ಹೆಲಿಕಾಫ್ಟರ್ ಮೂಲಕ ವಿಜಯಪುರಕ್ಕೆ ಬರಲಿದೆ. ಸಮಿತಿಯು ವಿಜಯಪುರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ತೊಂದರೆಗೆ ಒಳಗಾದವರ ಅಹವಾಲು ಸ್ವೀಕರಿಸಲಿದೆ.
ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಕುಳಿತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ತಂಡ ಭೇಟಿ ಮಾಡಿ, ಮನವಿ ಸ್ವೀಕರಿಸಲಿದೆ.
ಈ ನಡುವೆ ಕಾಂಗ್ರೆಸ್, ಬಿಜೆಪಿ ಮುಖಂಡರ ನಡುವೆ ವಕ್ಪ್ ವಿವಾದದ ಕುರಿತು ಪರಸ್ಪರ ರಾಜಕೀಯ ಕೆಸರೆರಚಾಟ ನಡೆದಿದೆ.
‘ವಿಜಯಪುರಕ್ಕೆ ಭೇಟಿ ನೀಡಲಿರುವ ಜೆಪಿಸಿ ಕೇವಲ ಜಿಲ್ಲಾಧಿಕಾರಿ ಹಾಗೂ ಧರಣಿ ನಿರತ ಬಿಜೆಪಿ ಸಚಿವೆ, ಶಾಸಕರ ಜೊತೆ ಸಭೆ ಮಾಡಿದರೆ ಸಾಲದು, ಪಕ್ಷಾತೀತವಾಗಿ ಜಿಲ್ಲೆಯ ಸಾರ್ವಜನಿಕರ ಅಹವಾಲು ಆಲಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ.
ಹೋಳಿಗೆ ಊಟ...
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಮೀಪ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಕುಳಿತಿರುವ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ಮುಖಂಡರು ಮಂಗಳವಾರ ಹೋಳಿಗೆ, ಕರದಂಟು ಊಟ ಸವಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.