ADVERTISEMENT

ಜಮೀರ್‌ಗೆ ಥ್ಯಾಂಕ್ಸ್ ಹೇಳಬೇಕು; ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 8:04 IST
Last Updated 7 ನವೆಂಬರ್ 2024, 8:04 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಹುಬ್ಬಳ್ಳಿ: ‘ನೂರಾರು ವರ್ಷಗಳ ಹಿಂದಿನ ಆಸ್ತಿಯನ್ನು ವಕ್ಫ್‌ ಆಸ್ತಿಯಾಗಿ ಮಾಡಲು ಹೊರಟಿದ್ದ ಕಾಂಗ್ರೆಸ್‌ ಸರ್ಕಾರದ ಒಳಸಂಚನ್ನು ಸಚಿವ ಜಮೀರ್ ಅಹ್ಮದ್‌ ಖಾನ್‌ ಬಯಲು ಮಾಡಿದ್ದಾರೆ. ಅದಕ್ಕಾಗಿ ಅವರಿಗೊಂದು ಥ್ಯಾಂಕ್ಸ್‌ ಹೇಳಬೇಕು’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ನಗರದಲ್ಲಿ ಗುರುವಾರ ಜಂಟಿ ಸಂಸದೀಯ ಸಮಿತಿಯ ಅಹವಾಲು ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜನರ ಆಸ್ತಿಗಳನ್ನು ಒಂದೊಂದಾಗಿ ತನ್ನ ಆಸ್ತಿಯನ್ನಾಗಿ ಮಾಡಲು ವಕ್ಫ್‌ ಹೊರಟಿತ್ತು. ಮುಂದೊಂದು ದಿನ ದೊಡ್ಡ ಸಮಸ್ಯೆಯಲ್ಲಿ ಸಿಲುಕುತ್ತಿದ್ದ ರಾಜ್ಯದ ಜನರನ್ನು ಇವತ್ತು ಜಮೀರ್‌ ನೋಟಿಸ್‌ ಕೊಡಿಸುವ ಮೂಲಕ ಎಚ್ಚರಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘300–400 ವರ್ಷಗಳ ಹಿಂದಿನ ಆಸ್ತಿಯನ್ನು ಇವತ್ತು ವಕ್ಫ್‌ ಆಸ್ತಿ ಎಂದು ಆರ್‌.ಟಿ.ಸಿ.ಯಲ್ಲಿ ನಮೂದಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದು ಹಿಂದೂ– ಮುಸ್ಲಿಂ ಸಮಸ್ಯೆಯಲ್ಲ. ಕಾಂಗ್ರೆಸ್‌ ಹುಟ್ಟುಹಾಕಿರುವ ಸಮಸ್ಯೆ’ ಎಂದರು.

ADVERTISEMENT

‘1974ರ ಗೆಜೆಟ್‌ ಆಧಾರದ ಮೇಲೆ ಆರ್‌.ಟಿ.ಸಿ ದಾಖಲೆಗಳನ್ನು ಬದಲಾಯಿಸಲಾಗುತ್ತಿದೆ. ಮಠ, ಮಂದಿರ, ದೇವಸ್ಥಾನ ಹಾಗೂ ರೈತರ ಜಮೀನುಗಳ ಮಾಲೀಕತ್ವವನ್ನು ಬದಲಾಯಿಸಲಾಗುತ್ತಿದೆ. ದೇಶ ಸ್ವಾತಂತ್ರ್ಯಗೊಂಡಾಗ 800 ಪ್ರಾಂತಗಳಿದ್ದವು. ಅವುಗಳನ್ನು ಒಂದುಗೂಡಿಸಲಾಯಿತು. ಆದರೆ, ವಕ್ಫ್‌ ಆಸ್ತಿಗಳನ್ನು ಏಕೆ ಹೊರಗಿಡಲಾಯಿತು?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.