ADVERTISEMENT

ವಕ್ಫ್ ಹೆಸರಿನ ದಬ್ಬಾಳಿಕೆ ನಿಲ್ಲಿಸದಿದ್ದರೆ ಕರ್ನಾಟಕದಲ್ಲೂ 'ಕೈ' ಧೂಳೀಪಟ: ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2024, 13:34 IST
Last Updated 25 ನವೆಂಬರ್ 2024, 13:34 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ವಕ್ಫ್ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಿಸಿ. ಇಲ್ಲದಿದ್ದರೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿ ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಆದಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ಧೂಳೀಪಟ ಆಗುವುದು ನಿಶ್ಚಿತ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ವಕ್ಫ್ ವಿಚಾರದಲ್ಲಿ ದಿನಕ್ಕೊಂದು ನಾಟಕ, ಕ್ಷಣಕ್ಕೊಂದು ಸುಳ್ಳು ಹೇಳುತ್ತಲೇ ಬರುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಈಗ ಮತ್ತೊಮ್ಮೆ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ' ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರೇ, 'ವಕ್ಫ್ ವಿಚಾರ ಮೊದಲು ಪ್ರಸ್ತಾಪವಾದಾಗ ಸರ್ಕಾರ ಯಾರಿಗೂ ನೋಟೀಸು ಕಳಿಸುತ್ತಲೇ ಇಲ್ಲ ಎಂದು ಸುಳ್ಳು ಹೇಳಿದಿರಿ. ನಂತರ ವಿಜಯಪುರ ಜಿಲ್ಲೆಯಲ್ಲಿ ರೈತರು ಸಿಡಿದ್ದೆದ್ದಾಗ, ನೋಟಿಸ್‌ ವಾಪಸ್‌ ಪಡೆದು, ಈ ಪ್ರಕ್ರಿಯೆ ನಿಲ್ಲಿಸುತ್ತೇವೆ ಎಂದು ಮತ್ತೊಂದು ಸುಳ್ಳು ಹೇಳಿದಿರಿ.

ADVERTISEMENT

ಆದರೆ ರೈತರಿಗೆ, ಮಠ-ಮಂದಿರಗಳಿಗೆ ಕಳಿಸುವುದು, ರಾತ್ರೋರಾತ್ರಿ ತರಾತುರಿಯಲ್ಲಿ ಭೂದಾಖಲೆಗಳನ್ನು ತಿದ್ದುವುದು ಮಾತ್ರ ನಿಲ್ಲಲೇ ಇಲ್ಲ. ಮೇಲಾಗಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಇದೆಲ್ಲಾ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ನಡೆಯುತ್ತಿದೆ ಎಂದು ಹೇಳುವ ವಿಡಿಯೊ ಬಹಿರಂಗ ಆದಮೇಲೆ ತಮ್ಮ ಸುಳ್ಳು ಸಂಪೂರ್ಣ ಬಯಲಾಯಿತು ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಮತ್ತೊಂದು ಸುಳ್ಳು ಹೇಳಿದಿರಿ. ಆದರೆ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಕೊಡಬೇಕು ಎಂದು ತಮ್ಮ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹಮ್ಮದ್, ಸಚಿವ ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಮುಸ್ಲಿಂ ಶಾಸಕರು 2024ರ ಆಗಸ್ಟ್ 24ರಂದು ತಮಗೆ ಪತ್ರ ಬರೆಯುತ್ತಾರೆ. ತಾವು ಅದೇ ದಿನವೇ ಈ ಪತ್ರವನ್ನು ಪರಿಶೀಲಿಸಿ ಮಂಡಿಸಿ ಎಂದು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದ್ದೀರಿ. ಈ ಸಂಬಂಧ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲೂ ತಾವು ಅನುಮೋದನೆ ನೀಡಿದ್ದೀರಿ.

ಈಗ ವಕ್ಫ್ ವಿಚಾರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅತಿಹೆಚ್ಚು ನೋಟಿಸ್‌ ನೀಡಲಾಗಿದೆ ಎಂದು ಮತ್ತೊಂದು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಿ. ಓಲೈಕೆ ರಾಜಕಾರಣಕ್ಕೆ ಇನ್ನೆಷ್ಟು ಸುಳ್ಳು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಭಾವಿ ಮುಖಂಡರು ಬಡವರಿಗೆ ಸೇರಿದ ಸಾವಿರಾರು ಎಕರೆ ವಕ್ಫ್ ಭೂಮಿಯನ್ನು ಕಬಳಿಸಿದ್ದಾರೆ ಎಂಬ ವರದಿ ನಮ್ಮ ಸರ್ಕಾರಕ್ಕೆ ಬಂದಿತ್ತು. ಆಗ ಆ ವರದಿಯ ಆಧಾರದ ಮೇಲೆ ತನಿಖೆ ಮಾಡಲು ಸಂಬಂಧಪಟ್ಟವರಿಗೆ ನೋಟಿಸ್‌ ನೀಡಲಾಗಿತ್ತೇ ಹೊರತು ಇದರ ಹಿಂದೆ ಯಾವುದೇ ಕುತಂತ್ರ, ಷಡ್ಯಂತ್ರ ಇರಲಿಲ್ಲ ಎಂದಿದ್ದಾರೆ.

ಇಷ್ಟಕ್ಕೂ ಬಿಜೆಪಿ ಸರ್ಕಾರ ಬಡ ರೈತರು ತಲೆತಲಾಂತರಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಕೃಷಿ ಜಮೀನುಗಳಿಗೆ, ಗೋಮಾಳಗಳಿಗೆ, ಸ್ಮಶಾನಗಳಿಗೆ, ನೂರಾರು ವರ್ಷ ಇತಿಹಾಸ ಇರುವ ಸರ್ಕಾರಿ ಶಾಲೆಗಳಿಗೆ, ದೇವಸ್ಥಾನಗಳಿಗೆ, ಮಠ-ಮಾನ್ಯಗಳಿಗೆ, ಪಾರಂಪರಿಕ ತಾಣಗಳಿಗೆ, ಜನಸಾಮಾನ್ಯರ ಆಸ್ತಿ-ಪಾಸ್ತಿಗಳಿಗೆ, ಮಾಜಿ ಶಾಸಕರ ಮನೆಗಳಿಗೆ ನೋಟಿಸ್‌ ಕಳಿಸಿಲ್ಲ. ಬಡವರ ಭೂಮಿ ನುಂಗಿರುವ ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಹಿಡಿಯುವ ಉದ್ದೇಶದಿಂದ ನೋಟಿಸ್‌ ಕೊಟ್ಟಿತ್ತು. ಇಷ್ಟಕ್ಕೂ ಈಗ ತಮ್ಮದೇ ಸರ್ಕಾರ ಇದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟ ನೋಟಿಸ್‌ಗಳಲ್ಲಿ ಏನಾದರೂ ತಪ್ಪಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದೂ ಆಗ್ರಹಿಸಿದ್ದಾರೆ.

ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ ಜನರಿಗೆ ಸ್ಪಷ್ಟವಾಗಿ ಅರ್ಥವಾಗಿದೆ. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗೂ ಮೊದಲು ಹೇಗಾದರೂ ಮಾಡಿ ಜಮೀನು ಕಬಳಿಸಬೇಕು ಎಂಬ ಕಾಂಗ್ರೆಸ್ ಪಕ್ಷದ ಷಡ್ಯಂತ್ರ, ಕುತಂತ್ರ ಬಹುಸಂಖ್ಯಾತ ಹಿಂದೂಗಳಿಗೆ ಬಹಳ ಸ್ಪಷ್ಟವಾಗಿ ಮನವರಿಕೆಯಾಗಿದೆ. ಈಗ ಮತ್ತೊಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಬಿಡಿ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.