ADVERTISEMENT

ಶುಲ್ಕಕ್ಕೆ ಒತ್ತಾಯಿಸಿದರೆ ಕ್ರಿಮಿನಲ್‌ ಕೇಸ್‌: ಸಚಿವ ಸುರೇಶ್ ಕುಮಾರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 21:15 IST
Last Updated 30 ಮಾರ್ಚ್ 2020, 21:15 IST
ಸುರೇಶ್ ಕುಮಾರ್
ಸುರೇಶ್ ಕುಮಾರ್   

ಬೆಂಗಳೂರು: ಕೊರೊನಾ ಸೋಂಕಿನ ಭೀತಿಯಿಂದಾಗಿ ಇಡೀ ದೇಶ ಲಾಕ್‌ಡೌನ್‌ನಲ್ಲಿದ್ದು, ಏಪ್ರಿಲ್ ತಿಂಗಳಲ್ಲೇ ಶುಲ್ಕ ಪಾವತಿಸಬೇಕು ಎಂದು ತಾಕೀತು ಮಾಡುವ ಕೆಲವು ಖಾಸಗಿ ಶಾಲೆಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ಹೂಡುವ ಹಾಗೂ ಮಾನ್ಯತೆ ರದ್ದುಪಡಿಸುವಂತಹ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಸೋಮವಾರ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ಅವರು ತಮ್ಮ ಫೇಸ್‌ಬುಕ್‌ ಖಾತೆಯ ಮೂಲಕವೇ ಈ ಎಚ್ಚರಿಕೆ ನೀಡಿದರು.‌

‘ರಾಜ್ಯದಲ್ಲಿ ಇರುವ ಯಾವುದೇ ಪಠ್ಯಕ್ರಮದ‌ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ ಏಪ್ರಿಲ್‌ ತಿಂಗಳ ನಿರ್ದಿಷ್ಟ ದಿನಾಂಕದ ಒಳಗೆ ಶುಲ್ಕ ಪಾವತಿಸಬೇಕು ಎಂದು ಈಗಾಗಲೇ ಸೂಚನೆ ನೀಡಿದ್ದರೆ ಅದನ್ನು ಕೂಡಲೇ ಹಿಂಪಡೆಯಬೇಕು. ಸರ್ಕಾರ ಮುಂದೆ ಆದೇಶ ಮಾಡುವವರೆಗೆ ಪ್ರವೇಶಾತಿ ಮಾಡಿಕೊಳ್ಳುವಂತಿಲ್ಲ ಮತ್ತು ಶುಲ್ಕ ಪಡೆಯುವಂತಿಲ್ಲ’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ADVERTISEMENT

ಇದಕ್ಕೆ ಪೂರಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಇಂತಹ ಶಾಲೆಗಳ ವಿರುದ್ಧ ಸಾಂಕ್ರಾಮಿಕ ರೋಗಗಳ ಅಧಿನಿಯಮ, ವಿಕೋಪ ನಿರ್ವಹಣಾ ಅಧಿನಿಯಮ, ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.

ಶಿಕ್ಷಕರ ರಜೆ ವಿಸ್ತರಣೆ
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಇದೇ 31ರವರೆಗೆ ನೀಡಲಾಗಿದ್ದ ರಜೆಯನ್ನು ಏಪ್ರಿಲ್‌ 11ರವರೆಗೆ ವಿಸ್ತರಿಸಲಾಗಿದೆ. ಬಳಿಕ ಬೇಸಿಗೆ ರಜೆ ಆರಂಭವಾಗಲಿದೆ.

ಶಿಕ್ಷಕರು ಕೇಂದ್ರ ಸ್ಥಾನ ಬಿಡಬಾರದು, ಅಗತ್ಯ ಇದ್ದಾಗಲೆಲ್ಲಾ ಕೊರೊನಾ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿರಬೇಕು
ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

*
ಅನೇಕ ಕುಟುಂಬಗಳು ಕೆಲಸ ಇಲ್ಲದೆ ಕುಳಿತಿವೆ. ಇಂತಹ ಹೊತ್ತಿನಲ್ಲಿ ಶಾಲಾ ಆಡಳಿತ ಮಂಡಳಿಗಳಿಗೆ ಹೃದಯ ಇರಬೇಕು.
–ಎಸ್‌.ಸುರೇಶ್‌ ಕುಮಾರ್, ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.