ADVERTISEMENT

ಕಸ ಈ ಗ್ರಾಮದ ‘ಸಂಪನ್ಮೂಲ’!

ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿಯಾದ ನಂದಗಡ

ಎಂ.ಮಹೇಶ
Published 29 ಅಕ್ಟೋಬರ್ 2019, 18:45 IST
Last Updated 29 ಅಕ್ಟೋಬರ್ 2019, 18:45 IST
ಘಟಕದ ಸಿಬ್ಬಂದಿ ತ್ಯಾಜ್ಯ ವಿಂಗಡಿಸುತ್ತಿರುವ ದೃಶ್ಯ
ಘಟಕದ ಸಿಬ್ಬಂದಿ ತ್ಯಾಜ್ಯ ವಿಂಗಡಿಸುತ್ತಿರುವ ದೃಶ್ಯ   

ಬೆಳಗಾವಿ: ಹಸಿ ಮತ್ತು ಒಣ ಕಸ ಸಂಗ್ರಹಿಸಲು ಪ್ರತ್ಯೇಕ ಬಕೆಟ್‌ಗಳ ವ್ಯವಸ್ಥೆ. ಮನೆ ಮನೆಯಿಂದ ವಾಹನದ ಮೂಲಕ ನಿತ್ಯವೂ ಕಸ ಸಂಗ್ರಹ. ಕಸ ವಿಂಗಡಿಸಲು ಘಟಕ. ನಿರ್ವಹಣೆಯಲ್ಲಿ ವೈಜ್ಞಾನಿಕ ಕ್ರಮ. ಸ್ವಚ್ಛ ಭಾರತ ಅಭಿಯಾನ ಪರಿಣಾಮಕಾರಿ ಅನುಷ್ಠಾನ...

–ಇದು ಯಾವುದೋ ಮಹಾನಗರದ ಚಿತ್ರಣವಲ್ಲ. ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮದ ಮಾದರಿ ನಡೆ.

ಗ್ರಾಮದಲ್ಲಿ ‘ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಘಟಕ’ವನ್ನು ಗ್ರಾಮ ಪಂಚಾಯಿತಿ ಆರಂಭಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನದಂತೆ ಸ್ವಚ್ಛ ಭಾರತ ಅಭಿಯಾನದಲ್ಲಿ ರಾಜ್ಯದ 90 ಗ್ರಾಮಗಳನ್ನು ‘ಮಾದರಿ’ ಮಾಡುವ ಉದ್ದೇಶವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಹೊಂದಿದೆ. ಇದರಲ್ಲಿ ಆಯ್ಕೆಯಾಗಿರುವ ನಂದಗಡದಲ್ಲಿನ ತ್ಯಾಜ್ಯ ನಿರ್ವಹಣೆ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT

ಮನೆಗಳಿಂದ ಸಂಗ್ರಹ: ‘ತ್ಯಾಜ್ಯವನ್ನು ‘ಕಸ’ ಎನ್ನುವ ಪರಿಕಲ್ಪನೆ ಇಲ್ಲಿ ಇಲ್ಲ. ಬದಲಿಗೆ, ಸಂಪನ್ಮೂಲ ಆಗಿದೆ. ಜಿಲ್ಲೆಯಲ್ಲೇ ಮೊದಲು ಇಲ್ಲಿ ಮಾಡುತ್ತಿದ್ದು, ₹55 ಲಕ್ಷ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪಂಚಾಯ್ತಿಯದ್ದೇ ಕಟ್ಟಡ ಹೊಂದಲು ಕಾಮಗಾರಿಯನ್ನೂ ಆರಂಭಿಸಲಾಗಿದೆ. ಪ್ರಸ್ತುತ ಎಪಿಎಂಸಿಗೆ ಸೇರಿದ ಕಟ್ಟಡ ಬಾಡಿಗೆಗೆ ಪಡೆದು ಘಟಕ ನಡೆಸಲಾಗುತ್ತಿದೆ. ಎಲ್ಲ 2,200 ಮನೆಗಳಿಗೂ ತಲಾ ಎರಡೆರಡು ಬಕೆಟ್‌ಗಳನ್ನು ನೀಡಲಾಗಿದೆ. ಹಸಿರು ಬಕೆಟ್‌ನಲ್ಲಿ ಹಸಿ ಹಾಗೂ ಕೆಂಪು ಬಕೆಟ್‌ನಲ್ಲಿ ಒಣ ಕಸ ವಿಂಗಡಿಸಿ ಕೊಡುವಂತೆ ಜನರಿಗೆ ತಿಳಿಸಲಾಗಿದ್ದು, ಅವರಿಂದ ಉತ್ತಮ ಸಹಕಾರ ಸಿಗುತ್ತಿದೆ’ ಎಂದು ಪಿಡಿಒ ಕೆ.ಎಸ್. ಗಣೇಶ್‌ ತಿಳಿಸಿದರು.

‘ನಿತ್ಯ ಮನೆಗಳಿಂದ ಕಸ ಸಂಗ್ರಹಿಸಲು ವಾಹನ ಖರೀದಿಸಲಾಗಿದೆ. ಘಟಕದಲ್ಲಿ ನಾಲ್ವರು ಮಹಿಳಾ ಸಿಬ್ಬಂದಿ, ಪ್ಲಾಸ್ಟಿಕ್‌, ಚಪ್ಪಲಿ, ಹಳೆ ಬಟ್ಟೆಗಳು, ನೀರಿನ ಬಾಟಲಿ, ಬಿಯರ್ ಬಾಟಲಿಗಳು, ಎಲೆಕ್ಟ್ರಾನಿಕ್‌ ವಸ್ತುಗಳು ಸೇರಿದಂತೆ ಒಟ್ಟು 64 ವಿಧದ ತ್ಯಾಜ್ಯಗಳನ್ನು ವಿಂಗಡಿಸುತ್ತಾರೆ’ ಎಂದರು.

ಸಿಮೆಂಟ್‌ ಕಾರ್ಖಾನೆಗೆ ಮಾರಾಟ:‘ಕೊಳೆಯುವಂಥದ್ದನ್ನು ಹಸಿ ಕಸದೊಂದಿಗೆ ವಿಲೇವಾರಿ ಘಟಕಕ್ಕೆ ಸಾಗಿಸಿ ಗೊಬ್ಬರ ತಯಾರಿಸಲಾಗುತ್ತದೆ. ಉಳಿದುದನ್ನು ಸಿಮೆಂಟ್‌ ಕಾರ್ಖಾನೆಯವರು ಖರೀದಿಸುತ್ತಾರೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಿತ್ಯ 500 ಕೆ.ಜಿ ಕಸ ಉತ್ಪಾದನೆಯಾಗುತ್ತಿದೆ. ಪ್ರಸ್ತುತ 8 ಟನ್‌ಗೂ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗಿದೆ’ ಎಂದು ಮಾಹಿತಿ ನೀಡಿದರು.

‘ಯೋಜನೆಯಿಂದ ಚರಂಡಿಗಳ ಸ್ವಚ್ಛತೆಗೆ ವಿನಿಯೋಗಿಸುತ್ತಿದ್ದ ಹಣ ಅಭಿವೃದ್ಧಿ ಕಾರ್ಯಕ್ಕೆ ಬಳಸಬಹುದಾಗಿದೆ. ನಮ್ಮದೇ ಕಟ್ಟಡಕ್ಕೆ ಘಟಕ ಸ್ಥಳಾಂತರಿಸಲು, ಅಲ್ಲಿ ವಿವಿಧ ರೀತಿಯ ಗೊಬ್ಬರ ತಯಾರಿಕೆಗೆ ಯೋಜಿಸಲಾಗಿದೆ. ಇದಕ್ಕಾಗಿ ಮುಕ್ಕಾಲು ಎಕರೆ ಜಾಗ ನಿಗದಿಪಡಿಸಲಾಗಿದೆ. ₹20 ಲಕ್ಷ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಆರಂಭವಾಗಿದೆ’ ಎಂದು ತಿಳಿಸಿದರು.

ತ್ಯಾಜ್ಯ ನಿರ್ವಹಣೆ ಮಾದರಿ ನೋಡಲು ಜಿಲ್ಲೆಯವರು ಬೇರೆ ಜಿಲ್ಲೆಗಳಿಗೆ ಅಥವಾ ನಗರಗಳಿಗೆ ಹೋಗುತ್ತಿದ್ದರು. ಆದರೀಗ ಬೇರೆ ಕಡೆಯವರು ಇಲ್ಲಿಗೆ ಬರುತ್ತಿದ್ದಾರೆ.
-ಡಾ.ಕೆ.ವಿ. ರಾಜೇಂದ್ರ ಸಿಇಒ, ಜಿಲ್ಲಾ ಪಂಚಾಯ್ತಿ

ಹಿರಿಯ ಅಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ.
-ಕೆ.ಎಸ್. ಗಣೇಶ್‌ ಪಿಡಿಒ, ನಂದಗಡ ಗ್ರಾಮ ಪಂಚಾಯ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.