ಬೆಂಗಳೂರು: ಕಣಿಮಿಣಿಕೆ ವಸತಿ ಯೋಜನೆಯನ್ನು ಅಸಮರ್ಪಕವಾಗಿ ಕಾರ್ಯಗತಗೊಳಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೇಡಿಕೆಯನ್ನು ಅರಿಯದೆ, ಸಂಪರ್ಕ ರಸ್ತೆಯನ್ನೂ ಕಲ್ಪಿಸದೆ ₹27.24 ಕೋಟಿ ವ್ಯರ್ಥವಾಗಿ ವೆಚ್ಚ ಮಾಡಿದೆ. ವ್ಯಯಮಾಡಿರುವ ₹451.53 ಕೋಟಿ ವರಮಾನವೂ ಬಂದಿಲ್ಲ ಎಂದು ಸಿಎಜಿ ವರದಿ ಹೇಳಿದೆ.
2021ರ ಮಾರ್ಚ್‌ಗೆ ಕೊನೆಗೊಂಡ ವರ್ಷಕ್ಕೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಅನುಪಾಲನಾ ಲೆಕ್ಕಪರಿಶೋಧನೆ ವರದಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಮನೆ ಒದಗಿಸುವ ಉದ್ದೇಶವೂ ಈಡೇರಿಲ್ಲ ಎಂದು ಅಭಿಪ್ರಾಯಪಡಲಾಗಿದೆ.
ಬಿಡಿಎ ಕಣಿಮಿಣಿಕೆ ವಸತಿ ಯೋಜನೆ ಕಾರ್ಯಸಾಧ್ಯತೆಯನ್ನು ನಿರ್ಧರಿಸುವ ಸಮಯದಲ್ಲೇ ಬೇಡಿಕೆ ಸಮೀಕ್ಷೆ ನಡೆಸಿಲ್ಲ. ಹೀಗಾಗಿ ಯೋಜನೆ ಪೂರ್ಣಗೊಂಡರೂ 1,500 ಫ್ಲ್ಯಾಟ್‌ಗಳಲ್ಲಿ 224 (ಶೇ 15ರಷ್ಟು) ಫ್ಲ್ಯಾಟ್‌ಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. ಉಳಿದ ಫ್ಲ್ಯಾಟ್‌ಗಳಿಗೆ ಬೇಡಿಕೆ ಇಲ್ಲ. ಅಲ್ಲದೆ, ಬಿಬಿಎಂಪಿಯ ಕಟ್ಟಡ ನಿರ್ಮಾಣ ಉಪ–ನಿಯಮಗಳನ್ನೂ ಈ ಯೋಜನೆಯಲ್ಲಿ ಪಾಲಿಸಿಲ್ಲ. ಬಹುಮಹಡಿ ಕಟ್ಟಡದ ಎದುರಿನ ರಸ್ತೆ 12 ಮೀಟರ್ ಹಾಗೂ ವಸತಿ ಘಟಕಗಳಿಗೆ ಸಂಪರ್ಕ ರಸ್ತೆ ಇರಬೇಕು. ಆದರೆ, ಮೈಸೂರು ಮುಖ್ಯರಸ್ತೆಗೆ ಒಂದು ಸಂಪರ್ಕ ರಸ್ತೆಯನ್ನು ಅಂತಿಮ ರೂಪಕ್ಕೆ ತಾರದೆಯೇ ಯೋಜನೆ ಮುಗಿಸಲಾಗಿದೆ. ರಸ್ತೆ ಸಮಸ್ಯೆಯನ್ನು 2022ರ ಮಾರ್ಚ್‌ವರೆಗೂ ನಿವಾರಿಸದೇ ಇದ್ದುದೇ ಬೇಡಿಕೆ ಕನಿಷ್ಠ ಪ್ರಮಾಣಕ್ಕೆ ಕುಸಿಯಲು ಕಾರಣ ಎಂದು ವರದಿ ವಿವರ ನೀಡಿದೆ.
ಹೆಚ್ಚುವರಿ ವೆಚ್ಚಕ್ಕೆ ಕಾರಣರಾದ ಗುತ್ತಿಗೆದಾರರಿಂದ ಆ ಮೊತ್ತವನ್ನು ವಸೂಲಿ ಮಾಡಬೇಕು. ನಿವೇಶನಗಳಲ್ಲಿ ದಾಸ್ತಾನಾಗಿದ್ದ ₹91 ಲಕ್ಷ ಮೌಲ್ಯದ ಸಾಮಗ್ರಿಗಳು ಕಳ್ಳತನವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ, ಜವಾಬ್ದಾರಿ ನಿಗದಿಪಡಿಸುವ, ನಷ್ಟವನ್ನು ವಸೂಲು ಮಾಡುವ ಬಗ್ಗೆ ಬಿಡಿಎ ಯಾವುದೇ ಅನುಸರಣಾ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.
ಬಿಡಿಎ ಇನ್ನು ಮುಂದೆ ಬೇಡಿಕೆ ಸಮೀಕ್ಷೆ, ಸಂಪರ್ಕ ರಸ್ತೆ ಸೇರಿದಂತೆ ಮೂಲಸೌಕರ್ಯ ಒದಗಿಸುವ ಖಾತರಿ ದೊರೆತ ಮೇಲೆ ವಸತಿ ಯೋಜನೆ ಕೈಗೊಳ್ಳಬೇಕು ಎಂದು ಸಿಎಜಿ ವರದಿ ಶಿಫಾರಸು ಮಾಡಿದೆ.
ಭೂಮಾಲೀಕರಿಗೆ ಅನರ್ಹ ಲಾಭ
ನ್ಯಾಯಾಲಯದ ಆದೇಶಗಳಿಗೆ ಅಗೌರವ ತೋರಿರುವ ಬಿಡಿಎ, ಹಾಲಿ ಹಾಗೂ ಹೊಸ ಬಡಾವಣೆಗಳಲ್ಲಿ ಭೂ ಮಾಲೀಕರಿಗೆ ಅನರ್ಹ ಲಾಭ ಮಾಡಿಕೊಟ್ಟು ₹29.85 ಕೋಟಿ ಹೊರೆ ಮಾಡಿಕೊಂಡಿದೆ.
ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ ಹೆಚ್ಚುವರಿ ವಿಸ್ತರಣೆಗಾಗಿ 19 ಎಕರೆ ಗೋಮಾಳವಿದ್ದರೂ, ಅದರಲ್ಲಿ ಎಂಟು ಎಕರೆ ಗೋಮಾಳವನ್ನು ನಾಲ್ಕು ವ್ಯಕ್ತಿಗಳಿಗೆ ತಲಾ ಎರಡು ಎಕರೆಯಂತೆ ಬಿಡಿಎ ಹಂಚಿಕೆ ಮಾಡಿದೆ. ಅಸಮರ್ಪಕ ಹಾಗೂ ಅಗತ್ಯ ದಾಖಲೆಗಳ ಅನುಪಸ್ಥಿತಿ ಮೇಲೆ ವಿಶೇಷ ಜಿಲ್ಲಾಧಿಕಾರಿ ಈ ಆದೇಶವನ್ನು ರದ್ದುಗೊಳಿಸಿದರು. ನಂತರ ಹೈಕೋರ್ಟ್ ಆದೇಶದಂತೆ ವಿಶೇಷ ಜಿಲ್ಲಾಧಿಕಾರಿ ಮತ್ತೆ ವಿವರವಾದ ತನಿಖೆ ನಡೆಸಿದರು. ಗೋಮಾಳ ಸ್ವಾಧೀನ ಪಡಿಸಿಕೊಂಡ ನಂತರ ಭೂಮಿ ಮೇಲಿನ ಹಕ್ಕುಗಳನ್ನು ಮಾಲೀಕರಿಗೆ ನ್ಯಾಯಾಲಯಗಳ ಆದೇಶಕ್ಕೆ ವಿರುದ್ಧವಾಗಿ ಬಿಡಿಎ ನೀಡಿದೆ. ಇದರಿಂದ ಭೂ ಮಾಲೀಕರಿಗೆ 40:60 ಅನುಪಾತದಲ್ಲಿ ನಿವೇಶನ ನೀಡಬೇಕಾಯಿತು. ಇದು ಬಿಡಿಎಗೆ ಹೊರೆಯಾಗಿದೆ. ಈ ಆರ್ಥಿಕ ಹೊರೆಗೆ ಕಾರಣರಾದ ವ್ಯಕ್ತಿಗಳನ್ನು ಸರ್ಕಾರ ಗುರುತಿಸಿ, ಕರ್ತವ್ಯಲೋಪ ನಿಗದಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸಿಎಜಿ ವರದಿ ಶಿಫಾರಸು ಮಾಡಿದೆ.
ಕಾನೂನು ವರದಿಗೆ ಅಗೌರವ ತೋರಿಸಿ ಚಂದ್ರಾ ಲೇಔಟ್‌ನಲ್ಲಿ 97ನೇ ನಿವೇಶನದ ಹರಾಜಿನಲ್ಲಿ ಖರೀದಿದಾರರು ಪಾವತಿಸಿದ್ದ ₹1.52 ಕೋಟಿ ಠೇವಣಿ ಮೊತ್ತವನ್ನು ಬಿಡಿಎ ಆಯುಕ್ತರ ಆದೇಶದ ಮೇರೆಗೆ ಮರುಪಾವತಿ ಮಾಡಲಾಗಿದೆ. ಅದೇ ಇತರೆ ಮಳಿಗೆಗಳ ಹರಾಜಿನಲ್ಲಿ ಪ್ರಾರಂಭಿಕ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹೀಗಾಗಿ ಠೇವಣಿ ಮರುಪಾವತಿಯಲ್ಲಿ ಕಟ್ಟುನಿಟ್ಟಿನ ನಿಯಮ ಪಾಲಿಸಲು ಸಿಎಜಿ ವರದಿ ಸೂಚಿಸಿದೆ.
ಹೆಚ್ಚುವರಿ ವೆಚ್ಚ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೊಳಚೆ ನೀರು ಹರಿಯುವ ಕೊಳವೆಗಳು ತುಕ್ಕು ಹಿಡಿಯದಂತೆ ತಡೆಯಲು ಕ್ರಮ ಕೈಗೊಳ್ಳದೆ, ಪೈಪ್‌ಗಳು ಹಾಳಾಗಿವೆ. ಮಿತವ್ಯಯಿ ಕ್ರಮಗಳನ್ನು ಕೈಗೊಳ್ಳದೆ ಪೈಪ್‌ಗಳಿಗೆ ಪಾಲಿಮರ್ ಆಧರಿತ ಸಂರಕ್ಷಣೆ ಲೇಪನ ಒದಗಿಸಿದ್ದರಿಂದ ₹40.65 ಕೋಟಿ ಹೆಚ್ಚುವರಿ ವೆಚ್ಚವಾಗಿದೆ. ಇದಕ್ಕೆ ಕಾರಣರಾದವರಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಸಿಎಜಿ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.