ತುಮಕೂರು: ನಗರದ ಎಲ್ಲ ಚಟುವಟಿಕೆಗೆ ಆಧಾರ ನೀರು. ಬೆಂಗಳೂರು ನಗರಕ್ಕೆ ಪೈಪೋಟಿಗೆ ಬಿದ್ದಂತೆ ಶರವೇಗದಲ್ಲಿ ಬೆಳೆಯುತ್ತಿದೆ. ಮೂರು ವರ್ಷಗಳಿಂದ ಅತೀ ವೇಗದಲ್ಲಿ ಬೆಳೆದಿದೆ. ಹೀಗೆ ಬೆಳೆಯುತ್ತಿರುವ ನಗರದಲ್ಲಿ ಈಗ ನೀರಿಗೆ ಪರದಾಟ ಶುರುವಾಗಿದೆ.
ಜನ ಜೀವನ, ವ್ಯಾಪಾರ, ವ್ಯವಹಾರ ಎಲ್ಲದರ ಮೇಲೂ ಅದು ಪರಿಣಾಮ ಬೀರುತ್ತಿದೆ. ಅಂತಹ ಸ್ಥಿತಿ ತುಮಕೂರು ನಗರಕ್ಕೆ ಸನ್ನಿಹಿತವಾಗಿದೆ.
ತುಮಕೂರು ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಸರೆಯಾದ ‘ಬುಗುಡನಹಳ್ಳಿ ಕೆರೆ’ ಬರಿದಾಗುವ ಹಂತಕ್ಕೆ ಬಂದಿದೆ. ಕಾರಣ ಹೇಮಾವತಿ ನೀರಿನ ಪ್ರಮಾಣವೂ ಏರಿಕೆ ಕಂಡಿಲ್ಲ. ಬುಗುಡನಹಳ್ಳಿ ಕೆರೆ ಬಹುತೇಕ ಖಾಲಿಯಾಗುತ್ತಿದೆ. ಕೆರೆಯಲ್ಲಿ ಕೇವಲ ಮುಕ್ಕಾಲು ಅಡಿ ಅಂದರೆ 30 ಎಂ.ಸಿ.ಎಫ್.ಟಿ ನೀರು ಇದೆ. ಗರಿಷ್ಠ ಎಂದರೆ 10–12 ದಿನ ಮಾತ್ರ ನೀರು ಈ ಕೆರೆಯಿಂದ ಪೂರೈಸಲು ಸಾಧ್ಯವಾಗಲಿದೆ.
ತುಮಕೂರು ನಗರಕ್ಕೆ ಹೇಮಾವತಿ ನೀರು ಪೂರೈಕೆ ಮಾಡಬಹುದು. ಆ ಮೇಲೆ ನೀರು ಖಾಲಿ ಖಾಲಿ. ಹಾಹಾಕಾರ ಶುರುವಾಗಲಿದೆ.
ಅಷ್ಟರೊಳಗೆ ಹೇಮಾವತಿ ಜಲಾಶಯ ಭರ್ತಿಯಾಗಿ ಅಲ್ಲಿಂದ ಬೇಗ ಬುಗುಡನಹಳ್ಳಿ ಕೆರೆಗೆ ನೀರು ಹರಿಸಿದರೆ ಮಾತ್ರ ಬಚಾವ್ ಆಗಬಹುದು. ಆದರೆ, ಅದು ಅಷ್ಟು ಸರಳವಾಗಿಲ್ಲ. ಹೇಮಾವತಿ ಜಲಾಶಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜಲಾನಯನ ಪ್ರದೇಶದಿಂದ ಮಳೆ ನೀರು ಹರಿದು ಬರುತ್ತಿಲ್ಲ. ಹೀಗಾಗಿ, ಹೇಮಾವತಿ ಜಲಾಶಯ ಭರ್ತಿಯಾಗಿ ನಗರಕ್ಕೆ ನೀರು ಹರಿದು ಬರುವ ನಿರೀಕ್ಷೆಯನ್ನೂ ಇಟ್ಟುಕೊಳ್ಳುವಂತಿಲ್ಲ.
ನಗರದಲ್ಲಿ ಮಹಾನಗರ ಪಾಲಿಕೆಯು ಪೂರೈಸುತ್ತಿರುವ ನೀರನ್ನು ಕೆಲವೇ ಕೆಲವರು ನೀರೆತ್ತುವ ಯಂತ್ರ ( ಮೋಟಾರ್) ಬಳಸಿ ಪಡೆಯುತ್ತಿದ್ದಾರೆ. ಹತ್ತು ಮನೆಗಳಿಗೆ ಹೋಗಬೇಕಾದ ನೀರನ್ನು ಒಂದೇ ಮನೆಯವರು ಪಡೆದುಕೊಳ್ಳುತ್ತಿದ್ದಾರೆ. ಕೆಲವರು ಮನಸೋಇಚ್ಛೆ ಬಳಕೆ ಮಾಡುತ್ತಿದ್ದಾರೆ. ಇದು ಕೂಡಾ ನೀರಿನ ಬವಣೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ವಾರ್ಡ್‌ಗಳಿಗೆ ನೀರು ಬಿಡುವ ವಾಲ್ವ್ ಮನ್‌ಗಳಿಗೆ ಕೆಲವರು ಬೆದರಿಕೆ ಹಾಕಿ ನೀರು ಬಿಡಿಸಿಕೊಳ್ಳುತ್ತಾರೆ. ಕೆಲ ಕಡೆ ವಾರ್ಡ್ ಸದಸ್ಯರೇ ಒತ್ತಡ ಹಾಕುತ್ತಾರೆ ಎಂಬ ಆರೋಪವಿದೆ. ಮತ್ತೊಂದೆಡೆ ವಾಲ್ವ್ ಮನ್‌ಗಳೇ ನೀರು ಬಿಡುವಲ್ಲಿ ತಾರತಮ್ಯ ಮಾಡಿ ನೀರು ಹರಿಸುತ್ತಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
‘ನಗರದ ನೀರಿನ ಸಮಸ್ಯೆಯ ಲಾಭವನ್ನು ಖಾಸಗಿ ನೀರಿನ ಟ್ಯಾಂಕ್ ಮಾಲೀಕರು ಪಡೆಯುತ್ತಿದ್ದಾರೆ. ಪ್ರತಿ ಟ್ಯಾಂಕಿಗೆ ₹ 400ರಿಂದ 500ಕ್ಕೆ ಮಾರಾಟ ಮಾಡುತ್ತಿದ್ದಾರೆ. ಎಲ್ಲ ಟ್ಯಾಂಕರ್ ನೀರು ಶುದ್ಧವಾಗಿರುವುದಿಲ್ಲ. ನೀರಿಲ್ಲದೆಯಂತೂ ಜನ ಜೀವನ ನಡೆಯಲ್ಲ. ಅನಿವಾರ್ಯವಾಗಿ ಹಣ ತೆತ್ತು ನೀರು ಪಡೆದುಕೊಳ್ಳುತ್ತಿದ್ದಾರೆ. ಅವುಗಳಿಗೂ ಸಾಕಷ್ಟು ಡಿಮ್ಯಾಂಡ್ ಬಂದಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಇಮ್ರಾನ್ ಪಾಷ ಪ್ರಜಾವಾಣಿಗೆ ವಿವರಿಸುತ್ತಾರೆ.
ಬತ್ತಿ ಹೋಗುತ್ತಿರುವ ಕೊಳವೆ ಬಾವಿಗಳು: ನಗರದಲ್ಲಿ ಒಟ್ಟು 748ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ನೀರು ಪೂರೈಕೆಗೆ ಮಹಾನಗರ ಪಾಲಿಕೆಯು ವರ್ಷದಿಂದ ವರ್ಷಕ್ಕೆ ಕೊರೆಸಿದೆ. ಇದರಲ್ಲಿ 433 ಕೊಳವೆ ಬಾವಿ ಕಾರ್ಯನಿರ್ವ
ಹಿಸುತ್ತಿದ್ದು, 242 ಕೊಳವೆ ಬಾವಿ ಬತ್ತಿ ಹೋಗಿವೆ. 73 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಲೇ ಇಲ್ಲ!
2016–17ರಲ್ಲೂ ಇದೇ ಸ್ಥಿತಿ: 2016–2017ರಲ್ಲೀ ಇದೇ ರೀತಿ ನೀರಿನ ಸಮಸ್ಯೆ ನಗರವನ್ನು ಬಾಧಿಸಿತ್ತು. 2018ರಲ್ಲಿ ಮುಂಗಾರು ಮಳೆಯಾಗಿ ಜಲಾಶಯ ಭರ್ತಿಯಾಗಿದ್ದರಿಂದ ಜುಲೈ 14ರಷ್ಟೊತ್ತಿಗೆ ಜಲಾಶಯದಿಂದ ಬುಗುಡನಹಳ್ಳಿ ಜಲಾಶಯಕ್ಕೆ ನೀರು ಹರಿಸಲಾಗಿತ್ತು. ಈ ವರ್ಷ ಹೇಮಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚು ಆಗದೇ, ಜಲಾಶಯವೂ ಬೇಗ ತುಂಬುತ್ತಿಲ್ಲದೇ ಇರುವುದರಿಂದ ಆಗಸ್ಟ್ 14 ವರೆಗೂ ನೀರು ತುಮಕೂರು ನಗರಕ್ಕೆ ಪಡೆಯುವುದು ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.
ಕೊಳವೆ ಬಾವಿಗೆ ಮೊರೆ: ವರ್ಷದಲ್ಲಿ ಕನಿಷ್ಠ 100ಕ್ಕೂ ಹೆಚ್ಚು ಕೊಳವೆ ಬಾವಿ ಪಾಲಿಕೆ ಕೊರೆಸುತ್ತದೆ. ಪಂಪ್, ಪೈಪ್‌ಗೆ ಲಕ್ಷಗಟ್ಟಲೆ ಖರ್ಚು ಮಾಡುತ್ತದೆ. ಆದರೆ, ಹಿಂದಿನ ವರ್ಷ ಕೊರೆದ ಕೊಳವೆ ಬಾವಿಗಳು ಮುಂದಿನ ವರ್ಷ ಉಳಿದಿರುವುದಿಲ್ಲ. ಅಂತರ್ಜಲ ಕಡಿಮೆ ಆಗಿರುತ್ತದೆ. ಮತ್ತೆ ಕೊಳವೆ ಬಾವಿ ಕೊರೆಸಲು ಪಾಲಿಕೆ ಸಜ್ಜಾಗುತ್ತದೆ! ಇದನ್ನು ಬಿಟ್ಟರೆ ಬೇರೆ ಮಾರ್ಗ ಕಂಡು ಕೊಂಡಿಲ್ಲ. ಅಲ್ಲದೇ, ನೀರನ್ನು ಬಾಡಿಗೆ ಟ್ಯಾಂಕರ್ ಮೂಲಕ ಪೂರೈಸಲು ಲಕ್ಷಾಂತರ ವೆಚ್ಚ ಮಾಡುತ್ತದೆ ಎಂಬ ಆರೋಪಗಳು ಇವೆ.
ಮೈದಾಳ ಕೆರೆಯಿಂದ 15 ವಾರ್ಡಿಗೆ ನೀರು: ಬುಗುಡನಹಳ್ಳಿ ಕೆರೆಯಲ್ಲಿ ನೀರು ಖಾಲಿ ಆಗುವ ಹಂತ ತಲುಪಿರುವುದರಿಂದ ನೀರಿನ ಸಮಸ್ಯೆ ಗಂಭೀರವಾಗುತ್ತಿರುವುದು ನಿಜ. ಸಮಸ್ಯೆ ನಿಭಾಯಿಸಲು ಕೆಲ ಕ್ರಮಗಳನ್ನು ಕೈಗೊಳ್ಳಲು ಪಾಲಿಕೆ ಮುಂದಾಗಿದೆ ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ‘ಪ್ರಜಾವಾಣಿ’ಗೆ ಹೇಳಿದರು.
ಬುಗುಡನಹಳ್ಳಿ ಕೆರೆ ಖಾಲಿ ಆಗುತ್ತಿರುವುದರಿಂದ ಮೈದಾಳ ಕೆರೆಯಿಂದ ನಗರದ 15 ವಾರ್ಡಿಗೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಮೈದಾಳ ಕೆರೆ ನೀರು ಈ ರೀತಿ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ನೀರಿಲ್ಲದೇ ಇರುವುದರಿಂದ 5–6 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುವುದು. ಸಾರ್ವಜನಿಕರೂ ಸಹಕರಿಸಿ ಮಿತ ನೀರು ಬಳಕೆಗೆ ಒತ್ತು ಕೊಡಬೇಕು ಎಂದು ಮನವಿ ಮಾಡಿದರು.
ನೀರಿಗಾಗಿ ಹೆಚ್ಚು ಪರದಾಡುವವರು: ಆಯಾ ದಿನ ದುಡಿದು ಉಪಜೀವನ ನಡೆಸುವ ಬಡ ಕುಟುಂಬಗಳಿಗೆ ಈ ನೀರಿನ ಸಮಸ್ಯೆ ತಂದೊಡ್ಡಿದೆ. ಮನೆಯಲ್ಲಿ ಮೂರ್ನಾಲ್ಕು ಜನರಿದ್ದರೆ ಇಬ್ಬರು ದಿನಪೂರ್ತಿ ನೀರು ತುಂಬಬೇಕು. ಇಬ್ಬರಿದ್ದರೆ ಒಬ್ಬರು ನೀರು ತುಂಬಬೇಕು. ಒಬ್ಬರ ದುಡಿಮೆಯನ್ನು ಕಳೆದು ಕೊಳ್ಳಬೇಕಾದ ಸ್ಥಿತಿ ಕಂಡು ಬರುತ್ತಿದೆ. ನೀರು ತುಂಬದೇ ದುಡಿಮೆಗೆ ಹೋದರೆ ನೀರಿಗಾಗಿ ಪರದಾಡ ಬೇಕಾದ ಸ್ಥಿತಿ ಇವರದು. ಕಟ್ಟಡ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಸ್ಥರು, ತರಕಾರಿ ವ್ಯಾಪಾರಸ್ಥರು, ಬೇರೆ ಊರಿಗೆ ತೆರಳಿ ಕೆಲಸ ಮಾಡಿ ಬರುವವರು ಈ ಸಮಸ್ಯೆ ಹೆಚ್ಚು ಅನುಭವಿಸುತ್ತಿದ್ದಾರೆ.
ಕೊಡಗಳನ್ನ ಹಿಡಿದುಕೊಂಡು ಕಂಡ ಕಂಡಲ್ಲಿ ಹೋಗಿ ನೀರು ತುಂಬಿಕೊಂಡು ಬರುತ್ತಿದ್ದಾರೆ. ಮಹಾನಗರ ಪಾಲಿಕೆಯ ಟ್ಯಾಂಕರ್ ನೀರು ಬಂದರೆ ಕಾದಾಡಿ ನೀರು ಹಿಡಿದುಕೊಳ್ಳುವ ದೃಶ್ಯ ಸಾಮಾನ್ಯವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.