ADVERTISEMENT

ಜಲಜೀವನ್‌ ಮಿಷನ್‌ | 11 ಕೋಟಿ ಕುಟುಂಬಗಳಿಗೆ ಕುಡಿಯುವ ನೀರು: ಸೋಮಣ್ಣ

ಜಲಶಕ್ತಿ ಖಾತೆ ರಾಜ್ಯ ಸಚಿವರಾಗಿ ಸೋಮಣ್ಣ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 15:35 IST
Last Updated 12 ಜೂನ್ 2024, 15:35 IST
ಸಚಿವರಾಗಿ ವಿ.ಸೋಮಣ್ಣ ಅಧಿಕಾರ ಸ್ವೀಕರಿಸಿದರು
ಸಚಿವರಾಗಿ ವಿ.ಸೋಮಣ್ಣ ಅಧಿಕಾರ ಸ್ವೀಕರಿಸಿದರು   

ನವದೆಹಲಿ: ಗ್ರಾಮೀಣ ‍ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜಲ ಜೀವನ್‌ ಮಿಷನ್‌ ಮೂಲಕ 11 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. 

ಜಲಶಕ್ತಿ ರಾಜ್ಯ ಸಚಿವರಾಗಿ ಬುಧವಾರ ಇಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿ, ‘ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಿಯಾಶೀಲ ನಾಯಕತ್ವದಲ್ಲಿ ದೇಶವು ಗಮನಾರ್ಹ ಬೆಳವಣಿಗೆ ಕಂಡಿದೆ’ ಎಂದರು. ಸರ್ಕಾರದ 3ನೇ ಅವಧಿಯಲ್ಲೂ ಅಭಿವೃದ್ಧಿಯ ವೇಗವನ್ನು ಮುಂದುವರಿಸುವ ಸಂಕಲ್ಪವನ್ನು ಸಚಿವರು ವ್ಯಕ್ತಪಡಿಸಿದರು.

‘ಈಗ ಶೇ 76ಕ್ಕಿಂತ ಹೆಚ್ಚಿನ ಗ್ರಾಮೀಣ ಕುಟುಂಬಗಳಲ್ಲಿ ಪ್ರತಿ ವ್ಯಕ್ತಿಗೆ 55 ಲೀಟರ್ ಗುಣಮಟ್ಟದ ನೀರು ಒದಗಿಸಲಾಗುತ್ತಿದೆ. ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ್) ಅಡಿ ದೇಶದ ಶೇ 93ಕ್ಕಿಂತ ಹೆಚ್ಚಿನ ಹಳ್ಳಿಗಳನ್ನು ಬಯಲು ಶೌಚ ಮುಕ್ತ (ಒಡಿಎಫ್) ಪ್ಲಸ್ ಮಾಡಲಾಗಿದೆ. ಸುಮಾರು ಶೇ 33ರಷ್ಟು ಒಡಿಎಫ್ ಪ್ಲಸ್ ಮಾದರಿ ಗ್ರಾಮಗಳಾಗಿ ಪರಿವರ್ತನೆ ಹೊಂದಿವೆ. 2025ರ ಮಾರ್ಚ್ ವೇಳೆಗೆ ಎಲ್ಲ ಹಳ್ಳಿಗಳನ್ನು ಒಡಿಎಫ್ ಪ್ಲಸ್ ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು’ ಎಂದು ಅವರು ಹೇಳಿದರು. 

ADVERTISEMENT

‘ಸ್ವಚ್ಛ ಭಾರತ್ ಅಭಿಯಾನದ ಎರಡನೇ ಭಾಗಕ್ಕೆ ಚಾಲನೆ ನೀಡಲಾಗುತ್ತದೆ. ಈ ಯೋಜನೆಯಡಿ ಹೊಸ ಕ್ರಾಂತಿ ಮಾಡಲಿದ್ದೇವೆ. ಕೇಂದ್ರ ಸಚಿವ ಸಿ.ಆರ್.ಪಾಟೀಲ್‌ ಮಾರ್ಗದರ್ಶನದಲ್ಲಿ ಮುಂದುವರಿಯಲಿದ್ದೇವೆ’ ಎಂದರು. 

ನೂತನ ಸಚಿವರನ್ನು ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ (ಕುಡಿಯುವ ನೀರು ಮತ್ತು ನೈರ್ಮಲ್ಯ) ವಿನಿ ಮಹಾಜನ್ ಸ್ವಾಗತಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.