ADVERTISEMENT

ಗ್ರಾಮೀಣ ಪ್ರದೇಶದ ಮನೆಮನೆಗೂ ಗಂಗೆ: 2,693 ಗ್ರಾಮಗಳ ಪ್ರತಿ ಮನೆಗೂ ನೀರು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 19:31 IST
Last Updated 4 ಫೆಬ್ರುವರಿ 2022, 19:31 IST
ಗ್ರಾಮೀಣ ಪ್ರದೇಶದ ನೀರನ ಗುಣಮಟ್ಟ ಪರೀಕ್ಷೆಗೆ ಗ್ರಾಮಾಭಿವೃದ್ಧಿ ಇಲಾಖೆ ಸ್ಥಾಪಿಸಿರುವ ಪ್ರಯೋಗಾಲಯದ ಒಂದು ನೋಟ
ಗ್ರಾಮೀಣ ಪ್ರದೇಶದ ನೀರನ ಗುಣಮಟ್ಟ ಪರೀಕ್ಷೆಗೆ ಗ್ರಾಮಾಭಿವೃದ್ಧಿ ಇಲಾಖೆ ಸ್ಥಾಪಿಸಿರುವ ಪ್ರಯೋಗಾಲಯದ ಒಂದು ನೋಟ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಜಲಜೀವನ್ ಮಿಷನ್’ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನೀರು ಪೂರೈಸುವ ‘ಮನೆಮನೆಗೂ ಗಂಗೆ’ ಆಶಯ ಸಾಕಾರಗೊಳಿಸಲು ರಾಜ್ಯದ 50 ಸಾವಿರ ಗ್ರಾಮಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.

2020ರಲ್ಲಿ ಕರ್ನಾಟಕದಲ್ಲಿ ಆರಂಭವಾದ ಈ ಯೋಜನೆಯಡಿ ಇಲ್ಲಿಯವರೆಗೆ 2,693 ಗ್ರಾಮಗಳ ಪ್ರತಿಯೊಂದು ಮನೆಗಳಿಗೂ ನೀರು ಸಂಪರ್ಕ ನೀಡಲಾಗಿದೆ.ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ 33 ಸ್ವಯಂಸೇವಾ ಸಂಸ್ಥೆಗಳ ಸಹಯೋಗ ಪಡೆದುಕೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.

2019ರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ‘ಜಲಜೀವನ್ ಮಿಷನ್‌’ ಯೋಜನೆ ಘೋಷಿಸಿದ ಪ್ರಧಾನಿ ಮೋದಿ ಅವರು, 2024 ರೊಳಗೆ ಪ್ರತಿಯೊಂದು ಮನೆಗೂ ನೀರು ಕೊಡುವ ವಾಗ್ದಾನ ಮಾಡಿದ್ದರು.ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರಾಮೀಣ ಜನರಿಗೆ ಸ್ವಚ್ಛ ಮತ್ತು ಶುದ್ದ ಕುಡಿಯುವ ನೀರು ಕೊಡುವ ಯೋಜನೆಗೆ ಸಂಪೂರ್ಣ ಬೆಂಬಲ ನೀಡಿ, ರಾಜ್ಯದ ಪಾಲಿನ ಹಣ ಒದಗಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಈ ಯೋಜನೆ ಆರಂಭವಾಗುವ ಮೊದಲು ಕರ್ನಾಟಕದ 97,91,513 ಜನವಸತಿ ಪ್ರದೇಶಗಳ ಪೈಕಿ, 24,51,220 ಜನವಸತಿ ಪ್ರದೇಶಗಳಲ್ಲಿನ ಶೇ 25ರಷ್ಟು ಮನೆಗಳಿಗೆ ನಲ್ಲಿಯ ನೀರು ಸಿಗುತ್ತಿತ್ತು. ಈ ಯೋಜನೆ ಜಾರಿಗೆ ಬಂದ ಬಳಿಕ 20,56,560 ಮನೆಗಳಿಗೆ ಹೊಸದಾಗಿ ನೀರು ಸಂಪರ್ಕ ನೀಡಲಾಗಿದೆ. ಎರಡು ವರ್ಷದಲ್ಲಿ ಗ್ರಾಮೀಣ ಭಾಗದಲ್ಲಿನ ಶೇ 25 ರಿಂದ ಶೇ 46 ರಷ್ಟು ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕುಡಿಯುವ ನೀರಿನ ಸಂಪರ್ಕದ ಮೇಲ್ವಿಚಾರಣೆಗಾಗಿ 26,786 ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ರಚಿಸಲಾಗಿದೆ. ಈ ಸಮಿತಿಗಳು ನೀರಿನ ಗುಣಮಟ್ಟ ಮತ್ತು ನೀರು ಸರಬರಾಜು ನಿರ್ವಹಣೆಯ ಮೇಲುಸ್ತುವಾರಿ ಮಾಡುತ್ತಿವೆ.ಶುದ್ಧ ನೀರನ್ನು ಪೂರೈಸಬೇಕೆಂಬ ಕಾರಣಕ್ಕೆ ನೀರು ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿಯೇ ರಾಜ್ಯದ 31 ಜಿಲ್ಲೆಯ 46 ತಾಲ್ಲೂಕಿನಲ್ಲಿ ತಲಾ ಒಂದು ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇನ್ನೂ ಎರಡು ಪ್ರಯೋಗಾಲಯಗಳು ಸ್ಥಾಪನೆಯ ಹಂತದಲ್ಲಿವೆ ಎಂದು ಅವರು ವಿವರಿಸಿದ್ದಾರೆ.

ಕೇಂದ್ರ ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಅವರು, ಯೋಜನೆ ಅನುಷ್ಠಾನದ ಪ್ರಗತಿಯ ವಿವರ ಪಡೆದುಕೊಂಡು ಮೇಲುಸ್ತುವಾರಿ ಮಾಡುತ್ತಿದ್ದಾರೆ.ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್ ಹಾಗೂ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ಪ್ರಕಾಶ್ ಕುಮಾರ್ ಯೋಜನೆಯ ಜಾರಿಗೆ ಮುತುವರ್ಜಿ ವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.