ಮೈಸೂರು: ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೀರಿನ ಸಂಗ್ರಹವು ದಾಖಲೆ ಪ್ರಮಾಣದಲ್ಲಿ ಕುಸಿದಿದೆ.
ಕೃಷ್ಲರಾಜಸಾಗರ, ಹಾರಂಗಿ, ಕಬಿನಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತವಾಗಿದ್ದರೆ, ಹೇಮಾವತಿ ಜಲಾಶಯದ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಒಂದು ಅಡಿ (2,901.1) ಕಡಿಮೆ ಇದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಶನಿವಾರ 99.60 ಅಡಿಗೆ ಇಳಿದಿತ್ತು. ವಿಶ್ವೇಶ್ವರಯ್ಯ, ಇತರ ನಾಲೆಗಳು ಹಾಗೂ ನದಿಗೆ 4,416 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಜಲಾಶಯಕ್ಕೆ 226 ಕ್ಯುಸೆಕ್ ಒಳ ಹರಿವಿತ್ತು, 2022ರ ಮಾರ್ಚ್ 25ರಂದು ಜಲಾಶಯದಲ್ಲಿ 108.36 ಅಡಿ ನೀರು ಸಂಗ್ರಹವಾಗಿತ್ತು. 4,284 ಕ್ಯುಸೆಕ್ ಹೊರ ಹರಿವು, 177 ಕ್ಯುಸೆಕ್ ಒಳ ಹರಿವು ದಾಖಲಾಗಿತ್ತು.
ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದ ನೀರಿನ ಮಟ್ಟ 2823.85 ಅಡಿ ಇದ್ದು, ಗರಿಷ್ಠ ಮಟ್ಟ 2,859 ಅಡಿ ಆಗಿದೆ. ಒಳ ಹರಿವು 231 ಕ್ಯುಸೆಕ್ ಇದ್ದರೆ, ಹೊರ ಹರಿವು 709 ಕ್ಯುಸೆಕ್ ಇದೆ.
ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 2848.73 ಅಡಿ ಇತ್ತು.
ಹಾಸನದ ಗೊರೂರಿನ ಹೇಮಾವತಿ ಅಣೆಕಟ್ಟೆಯ ಜಲಾಶಯದ ಇಂದಿನ ಮಟ್ಟ 2901.02 ಅಡಿ (ಗರಿಷ್ಠ ಮಟ್ಟ 2,922 ಅಡಿ) ಇದ್ದು, 20.36 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ಒಳಹರಿವು 70 ಕ್ಯುಸೆಕ್ ಇದ್ದರೆ, ಹೊರ ಹರಿವು 900 ಕ್ಯುಸೆಕ್ ಇದೆ. ಕಳೆದ ವರ್ಷ ನೀರಿನ ಮಟ್ಟ 2902.67 ಅಡಿಯಿದ್ದು, 21.50 ಟಿಎಂಸಿ ನೀರು ಸಂಗ್ರಹವಿತ್ತು. 33 ಕ್ಯುಸೆಕ್ ಒಳಹರಿವು, ಹೊರಹರಿವು 350 ಕ್ಯುಸೆಕ್ ಇತ್ತು.
ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಜಲಾಶಯದ ನೀರಿನ ಮಟ್ಟವು 2260.99 ಅಡಿಯಿದ್ದು, ಕಳೆದ ವರ್ಷ 2270.01 ಅಡಿ ನೀರು ಇತ್ತು. ಗರಿಷ್ಠ ಮಟ್ಟ 2,284 ಅಡಿಗಳಾಗಿವೆ. ಸದ್ಯ 7.69 ಟಿಎಂಸಿ ನೀರು ಸಂಗ್ರಹವಿದೆ. ಒಳ ಹರಿವು 78 ಕ್ಯುಸೆಕ್ ಇದ್ದರೆ, ಹೊರ ಹರಿವು 854 ಕ್ಯುಸೆಕ್ ಇದೆ.
‘ಕಟ್ಟು ಪದ್ಧತಿಯಲ್ಲಿ ಬೆಳೆಗೆ ನೀರು’
‘ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿನ ಭತ್ತ ಮೊದಲಾದ ಬೆಳೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುತ್ತಿದೆ. ಅದೇ ಮಾದರಿ ನೀರು ಹರಿಸಿದರೆ ಮೇ ಅಂತ್ಯದವರೆಗೆ ಬೆಳೆಗಳಿಗೆ ನೀರು ಕೊಡಬಹುದು‘ ಎಂದು ಕಾವೇರಿ ನೀರಾವರಿ ನಿಗಮದ ಸೂಪರಿಂಟೆಂಡಿಂಗ್ಎಂಜಿನಿಯರ್ ಆನಂದ್ ತಿಳಿಸಿದರು.
’ಕುಡಿಯುವ ಉದ್ದೇಶಕ್ಕೆ ಜುಲೈ ಅಂತ್ಯದವರೆಗೂ ನೀರು ಸಿಗಲಿದೆ. ಮೇ ಅಂತ್ಯ ಅಥವಾ ಜೂನ್ ಮೊದಲ ವಾರ ಮುಂಗಾರು ಮಳೆ ಬೀಳುವ ಸಾಧ್ಯತೆ ಇದೆ. ಹಾಗಾಗಿ ನೀರಿಗೆ ಅಭಾವವಾಗದು‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.