ಬೆಂಗಳೂರು: ಮಳೆಗಾಲ ಮುಗಿಯುವ ಹೊತ್ತಿನಲ್ಲೂ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ನೀರು ತುಂಬಿಕೊಂಡು ಹರಿಯುತ್ತಿದ್ದ ನದಿಗಳು ಬತ್ತಿ ಹೋಗಿವೆ. ಬಾವಿ, ತೊರೆಗಳಲ್ಲಿ ಇದ್ದಕ್ಕಿದ್ದಂತೆ ನೀರು ಬಸಿದುಹೋಗಿದೆ. ಬೇಸಿಗೆಯ ಬೇಗೆ ವಾತಾವರಣವನ್ನು ತುಂಬಿಕೊಳ್ಳುತ್ತಿದೆ.
ಚಳಿಗಾಲ ಆರಂಭಕ್ಕೂ ಮುನ್ನವೇ ಕಾಣಿಸಿಕೊಂಡ ಬರಗಾಲದ ಛಾಯೆ ಜನರ ಆತಂಕಕ್ಕೆ ಕಾರಣವಾಗಿದೆ. ಈ ಬದಲಾವಣೆಗೆ ವಿಜ್ಞಾನಿಗಳೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭೂಗರ್ಭ, ಜಲ, ಮಣ್ಣು ಮತ್ತು ಪರಿಸರ ವಿಜ್ಞಾನಿಗಳು ಇದೊಂದು ಆತಂಕಕಾರಿ ವಿದ್ಯಮಾನ ಎಂದಿದ್ದಾರೆ. ಇದಕ್ಕೆ ‘ಜೀವಂತ’ ಭೂಮಿ ನಿರ್ಜೀವ ಆಗುತ್ತಿರುವುದೇ ಕಾರಣ ಎಂದೂ ಪ್ರತಿಪಾದಿಸಿದ್ದಾರೆ.
ರಾಜ್ಯದ ಪ್ರಮುಖ ನದಿಗಳಲ್ಲಿ ನೀರು ಕಡಿಮೆಯಾಗಿದೆ. ಈ ನದಿಗಳಿಗೆ ಬಂದು ಸೇರುವ ಉಪನದಿ, ಝರಿ ಮತ್ತು ತೊರೆಗಳೂ ಒಣಗುತ್ತಿವೆ. ಆಗಸ್ಟ್‌ನಲ್ಲಿ ಬೋರ್ಗರೆದು ಸುರಿದ ಮಳೆಯಿಂದಾಗಿ ಈ ನದಿಗಳಲ್ಲಿ ಪ್ರವಾಹ ಉಕ್ಕೇರಿತ್ತು. ಆದರೆ ಒಂದೇ ತಿಂಗಳ ಅವಧಿಯಲ್ಲಿ ಈ ನದಿಗಳ ಒಡಲು ಬರಿದಾಗಿವೆ.
ಅಪಾಯದಲ್ಲಿರುವ ನದಿಗಳು
* ತುಂಗಾ, ಭದ್ರಾ, ಕಾವೇರಿ, ಲಕ್ಷ್ಮಣತೀರ್ಥ
* ಬರಪೊಳೆ, ಕೊಂಗಣ ಹೊಳೆ, ಕುತ್ತುನಾಡು ಹೊಳೆ, ನಾಡಗುಂಡಿ,ಮುಕ್ಕೊಡ್ಲು ಹೊಳೆ
* ನೇತ್ರಾವತಿ, ಹೇಮಾವತಿ, ವೇದಾವತಿ
ವಿಜ್ಞಾನಿಗಳು ನೀಡುವ ಕಾರಣಗಳು
* ಈ ಪ್ರದೇಶಗಳಲ್ಲಿ ಮಹಾ ಮಳೆ, ಪ್ರವಾಹ, ಭೂಕುಸಿತದಿಂದ ನದಿಯ ಹರಿವಿನ ಗತಿ ಬದಲಾಗಿರಬಹುದು
*ಭೂಮಿರೂಪದಲ್ಲಿ ವ್ಯತ್ಯಾಸ ಆಗಿರುವ ಸಾಧ್ಯತೆಯೂ ಇದೆ
* ನದಿ, ತೊರೆಗಳಲ್ಲಿ ಹೂಳು ತುಂಬಿಕೊಂಡಿರಬಹುದು, ನದಿ ಹರಿವಿಗೆ ಭೂಕುಸಿತ ಅಡ್ಡಿಯಾಗಿರಬಹುದು
* ಅಂತರ್ಜಲದ ಹಂತದಲ್ಲಿ ಪುನಶ್ಚೇತನ (ರಿಚಾರ್ಜ್)ಆಗುವುದಕ್ಕಿಂತ ನೀರಿನ ಹೊರ ಹಾಕುವಿಕೆ(ಡಿಸ್ಚಾರ್ಜ್) ಕ್ರಿಯೆ ಹೆಚ್ಚಾಗಿದ್ದರಿಂದ ಬಾವಿಗಳು ಒಣಗುತ್ತಿರಬಹುದು
* ಈ ಪ್ರದೇಶಗಳಲ್ಲಿ ಮಣ್ಣು ತೇವಾಂಶವನ್ನು ಹಿಡಿಟ್ಟುಕೊಳ್ಳುವ ಮತ್ತು ನೀರನ್ನು ಇಂಗಿಸುವ ಜೈವಿಕ ಗುಣವನ್ನೇ ಕಳೆದುಕೊಂಡಿದೆ.
*ಇದರ ಪರಿಣಾಮ ಮಳೆ ಬಿದ್ದರೆ, ನೀರು ಭೂಮಿಯಲ್ಲಿ ಇಂಗದೇ ನದಿಯಲ್ಲಿ ಹರಿದು ನೇರವಾಗಿ ಸಮುದ್ರ ಸೇರುತ್ತಿದೆ
* ಮಣ್ಣಿನಲ್ಲಿ ಜೀವಂತಿಕೆ ಇದೆ. ಅದರಲ್ಲಿ ಬ್ಯಾಕ್ಟೀರಿಯಾ, ಫಂಗೈಗಳಿರುತ್ತವೆ. ಅರಣ್ಯ ಮತ್ತು ಹಸಿರು ನಾಶದಿಂದ ಈ ಸೂಕ್ಷ್ಮ ಜೀವಿಗಳೂ ನಾಶವಾಗಿರುತ್ತವೆ. ಇದರಿಂದಾಗಿ ನೀರು ಇಂಗಿಸುವ ಮತ್ತು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಮಣ್ಣು ಕಳೆದುಕೊಂಡಿದೆ
* ಆಯಾ ಪ್ರದೇಶಗಳ ಭೂ ಭಾಗದಲ್ಲಿ ನೈಸರ್ಗಿಕವಾಗಿ ಬೆಳೆಯುವ ಸಸ್ಯಗಳು ಮತ್ತು ಅರಣ್ಯಗಳಿಗೆ ನೀರು ಇಂಗಿಸುವ ಶಕ್ತಿ ಇರುತ್ತದೆ. ಆದರೆ, ಅವುಗಳನ್ನು ನಾಶ ಮಾಡಿ, ಅಲ್ಲಿ ವ್ಯಾಪಕ ಪ್ರಮಾಣದಲ್ಲಿ ತೋಟ, ಎಸ್ಟೇಟ್‌ಗಳನ್ನು ಮಾಡಿರುವುದರಿಂದ ಮಣ್ಣು ಸತ್ವ ಕಳೆದುಕೊಂಡಿದೆ
ಭೂಪದರಗಳೊಳಗೆ ನೀರು ಇಳಿಯುವ ವ್ಯವಸ್ಥೆಯೇ ನಾಶ ಆಗಿದೆ ಇಂತಹ ವಿದ್ಯಮಾನ ಕೇಳಿಲ್ಲ. ಭೂಸ್ವರೂಪದ ಬದಲಾವಣೆ, ನದಿ ಹರಿವಿನ ದಿಕ್ಕು ಬದಲಾಗಿರುವುದರಿಂದ ಈ ರೀತಿ ಆಗಿರಬಹುದು
- ಶ್ರೀನಿವಾಸರೆಡ್ಡಿ, ಹೈಡ್ರಾಲಜಿಸ್ಟ್
ಈ ಬೆಳವಣಿಗೆಯ ಕುರಿತು ಮಣ್ಣಿನ ತಜ್ಞರು ವಾಸ್ತವ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸಬೇಕು
-ಟಿ.ಆರ್.ಅನಂತರಾಮು, ಭೂಗರ್ಭ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.