ADVERTISEMENT

ಜಲಾಶಯಗಳಲ್ಲಿ ಕುಸಿದ ನೀರಿನ ಮಟ್ಟ

ಒಟ್ಟು ಶೇಖರಣಾ ಸಾಮರ್ಥ್ಯದ ಶೇ 10ರಷ್ಟು ಮಾತ್ರ ಲಭ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 19:23 IST
Last Updated 3 ಜುಲೈ 2019, 19:23 IST
   

ಬೆಂಗಳೂರು: ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಬೆಂಗಳೂರು, ಮೈಸೂರು ನಗರ ಹಾಗೂ ಈ ಭಾಗದ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಲಿದೆ.

ಕೆಆರ್‌ಎಸ್, ಹೇಮಾವತಿ, ಕಬಿನಿ, ಹಾರಂಗಿಜಲಾಶಯಗಳಲ್ಲಿ ಇರುವ ನೀರು ಜುಲೈ ಅಂತ್ಯದವರೆಗೆ ಕುಡಿಯಲು ಸಾಕಾಗಬಹುದು. ಅಷ್ಟರಲ್ಲಿ ಮಳೆ ಬಂದರೆ ಪರಿಸ್ಥಿತಿ ಸುಧಾರಿಸಬಹುದು. ಇಲ್ಲವಾದರೆ ನೀರಿಗೆ ಏನು ಮಾಡುವುದು ಎಂಬ ಚಿಂತೆ ಸರ್ಕಾರವನ್ನು ಕಾಡುತ್ತಿದೆ. ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ತುಮಕೂರು ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಕಾಣಿಸಿಕೊಳ್ಳಲಿದೆ.

ಅಣೆಕಟ್ಟೆಗಳಲ್ಲಿನೀರು ಕುಸಿದಿರುವುದಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು. ಜಲಾಶಯಗಳಒಟ್ಟು ಸಾಮರ್ಥ್ಯದಲ್ಲಿ ಶೇ 10ರಷ್ಟು ಮಾತ್ರ ನೀರು ಉಳಿದಿದ್ದು, ಮುಂದಿನ ದಿನಗಳು ಕಷ್ಟಕರವಾಗಲಿದೆ ಎಂದರು.

ADVERTISEMENT

ಕಳೆದ ವರ್ಷದ ಇದೇ ಸಮಯದಲ್ಲಿ ಜಲಾಶಯಗಳಲ್ಲಿ ಶೇ 30ರಷ್ಟು ನೀರು ಸಂಗ್ರಹ ಇತ್ತು. ಇದರಿಂದ ಬೆಂಗಳೂರು ಜನರ ಕುಡಿಯುವ ನೀರಿಗೆ ಸಮಸ್ಯೆ ಆಗಿರಲಿಲ್ಲ. ಈ ಸಲ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸಚಿವರಿಗೆ ಮನವಿ: ‘ಮೇಕೆದಾಟು ಬಳಿ ಕಾವೇರಿ ನದಿಗೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯದ ಇತರ ಸಚಿವರನ್ನೂ ಭೇಟಿ ಮಾಡಿ ಶೀಘ್ರ ಯೋಜನೆಗೆ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದೇನೆ’ ಎಂದು ಹೇಳಿದರು.

ಕುಸ್ತಿ ಮಾಡಲ್ಲ:‘ತಮಿಳುನಾಡು ಜತೆಗೆ ಕುಸ್ತಿ ಮಾಡುವುದಿಲ್ಲ. ಪಕ್ಕದ ರಾಜ್ಯದವರು ಸಹೋದರರು ಇದ್ದಂತೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಕಾವೇರಿ ನೀರು ಬಳಸಿಕೊಳ್ಳಬೇಕಿದೆ. ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗೆ ಮಾತ್ರ ಮೇಕೆದಾಟು ಜಲಾಶಯದ ನೀರು ಬಳಸಿಕೊಳ್ಳಲಾಗುವುದು. ವಿದ್ಯುತ್ ಉತ್ಪಾದನೆ ನಂತರ ನೀರು ತಮಿಳುನಾಡಿಗೆ ಹರಿದು ಹೋಗಲಿದ್ದು, ಆ ನೀರನ್ನು ನಮ್ಮ ಕಡೆಗೆ ಹರಿಸಲು ಸಾಧ್ಯವಿಲ್ಲ. ಈ ವಿಚಾರವನ್ನು ತಮಿಳುನಾಡಿನ ನನ್ನ ಸಹೋದರ ಮಿತ್ರರು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.