ADVERTISEMENT

ತುಂಗಭದ್ರಾ ಜಲಾಶಯಕ್ಕೆ ಉತ್ತಮ ಒಳಹರಿವು; ನಾಳೆಯಿಂದ ಕಾಲುವೆಗಳಿಗೆ ನೀರು

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 11:03 IST
Last Updated 18 ಜುಲೈ 2024, 11:03 IST
<div class="paragraphs"><p>ತುಂಗಭದ್ರಾ ಜಲಾಶಯ</p></div>

ತುಂಗಭದ್ರಾ ಜಲಾಶಯ

   

ಪ್ರಜಾವಾಣಿ ಚಿತ್ರ

ಕೊಪ್ಪಳ: ಮಲೆನಾಡಿನ ಭಾಗದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ತುಂಗಾಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ (ಜು. 19) ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.

ADVERTISEMENT

’ಸಾಮಾನ್ಯವಾಗಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಸಿಯೇ ನೀರು ಹರಿಸುವ ಪ್ರಮಾಣ ನಿರ್ಧರಿಸಲಾಗುತ್ತಿತ್ತು. ಈಗ ಸಭೆಗಿಂತ ತುರ್ತಾಗಿ ರೈತರಿಗೆ ನೀರು ಕೊಡುವುದು ಅಗತ್ಯವಿದೆ. ಆದ್ದರಿಂದ ನೀರು ಬಿಡುಗಡೆಗೆ ತೀರ್ಮಾನಿಸಲಾಗಿದೆ’ ಎಂದು ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಎಡದಂಡೆ ಮುಖ್ಯ ಕಾಲುವೆಗೆ ಶುಕ್ರವಾರದಿಂದ ನಿತ್ಯ 4,100 ಕ್ಯುಸೆಕ್‌ನಂತೆ, ಬಲದಂಡೆ ಕೆಳಮಟ್ಟದ ವಿತರಣಾ ಕಾಲುವೆಗೆ 650 ಕ್ಯುಸೆಕ್‌ನಂತೆ, ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆಗೆ 1300 ಕ್ಯುಸೆಕ್‌ನಂತೆ ಮತ್ತು ಕಾರ್ಖಾನೆಗಳಿಗೆ 60 ಕ್ಯುಸೆಕ್‌ನಂತೆ ನೀರು ಹರಿಸಲಾಗುತ್ತದೆ. ರಾಯಬಸವಣ್ಣ ಕಾಲುವೆಗೆ ಜೂ.1ರಿಂದಲೇ ನಿತ್ಯ 180 ಕ್ಯುಸೆಕ್‌ನಂತೆ ನೀರು ಹರಿಸಲಾಗುತ್ತಿದೆ.

ತುಂಗಭದ್ರಾ ಜಲಾಶಯವು ಒಟ್ಟು 105.788 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಗುರುವಾರದ ವೇಳೆಗೆ 46.802 ಟಿಎಂಸಿ ಅಡಿ ಸಂಗ್ರಹವಿದೆ. ಒಳ ಹರಿವು 1,60 ಲಕ್ಷ ಕ್ಯುಸೆಕ್‌ ಇದೆ. ಇದೇ ಪ್ರಮಾಣದಲ್ಲಿ ಒಳಹರಿವು ಮುಂದುವರಿದರೆ ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ. ಕಳೆದ ವರ್ಷ ತೀವ್ರ ಮಳೆ ಕೊರತೆ ಕಾರಣದಿಂದಾಗಿ ಇದೇ ದಿನಾಂಕಕ್ಕೆ 10.947 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.