Wayanad landslides| ದೇವರ ನಾಡಿನಲ್ಲಿ ದುರಂತ: ಬೆಚ್ಚಿಬೀಳಿಸುತ್ತಿರುವ ಊರ ನೆನಪು
ಕಾಳಜಿ ಕೇಂದ್ರಗಳ ಸಾಂತ್ವನದ ನಡುವೆ ನೋವಿನಲ್ಲಿ ಮುದುಡಿದ ಜೀವಗಳು
ವಿಕ್ರಂ ಕಾಂತಿಕೆರೆ Published 4 ಆಗಸ್ಟ್ 2024, 23:30 IST Last Updated 4 ಆಗಸ್ಟ್ 2024, 23:30 IST ಮೇಪ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರದಲ್ಲಿ ವ್ಯಕ್ತಿಯೊಬ್ಬರಿಗೆ ನೆರವು ನೀಡುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ
ಕಲ್ಪೆಟ್ಟ (ವಯನಾಡ್ ಜಿಲ್ಲೆ): ಚೂರಲ್‌ಮಲದಲ್ಲಿ ವಾಸವಾಗಿದ್ದ ಸಿಸಿಲಿ ಅವರಿಗೆ ಹೃದ್ರೋಗವಿದೆ. ಎಕೊ ಮಾಡಿಸಬೇಕು ಎಂದು ವೈದ್ಯರು ಬರೆದುಕೊಟ್ಟಿದ್ದರು. ಮೇಪ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರದಲ್ಲಿರುವ ಅವರು, ಭಾನುವಾರ ಆಸ್ಪತ್ರೆಗೆ ಹೋಗಲು ಸಜ್ಜಾಗಿ ಮಗ ಬರಲಿ ಎಂದು ಕಾಯುತ್ತಿದ್ದರು. ಆದರೆ ಡಿಎಂ ವಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಸ್ವಂತ ತಾಯಿ ಎಂಬಂತೆ ಅವರನ್ನು ಕರೆದುಕೊಂಡು ಹೋದರು.
ಚೂರಲ್‌ಮಲದ ಖದೀಜ ಮತ್ತು ಜಮಾಲ್ ದಂಪತಿಯೂ ಇದೇ ಕಾಳಜಿ ಕೇಂದ್ರದಲ್ಲಿದ್ದಾರೆ. ಬೆನ್ನುನೋವು, ಕಾಲುನೋವು, ಮಧುಮೇಹ, ರಕ್ತದೊತ್ತಡ ಇತ್ಯಾದಿ ಸಮಸ್ಯೆ ಇಬ್ಬರನ್ನೂ ಕಾಡುತ್ತಿದೆ. ಕಾಳಜಿ ಕೇಂದ್ರದ ಸಿಬ್ಬಂದಿ ಆಗಾಗ ಬಂದು ಔಷಧಿ ಸೇವಿಸುವಂತೆ ಹೇಳುತ್ತಿದ್ದರು. ಔಷಧಿ ತೆಗೆದುಕೊಳ್ಳುವವರೆಗೂ ಅವರ ಒತ್ತಾಯ ಮುಂದುವರಿಯಿತು.
ನಾಲ್ಕು ಊರುಗಳನ್ನು ಸರ್ವನಾಶ ಮಾಡಿದ ಭೂಕುಸಿತದಲ್ಲಿ ಸಂಬಂಧಿಕರು, ಆಪ್ತರು ಮತ್ತು ಮನೆಗಳನ್ನು ಕಳೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ಕಳೆಯುತ್ತಿರುವವರಿಗೆ ಇಂಥ ಆಪ್ತ ಆರೈಕೆ ಸಿಗುತ್ತಿದೆ. ಈ ಸಂದರ್ಭದಲ್ಲಿ ಕೆಲವು ನಿಮಿಷ ನೋವು ಮರೆಯುವ ಅವರು, ಕ್ಷಣಾರ್ಧದಲ್ಲಿ ದುರಿತ ತಂದ ಕುಸಿತದ ಆ ದಿನಗಳನ್ನು ನೆನೆದು ಬೆಚ್ಚಿಬೀಳುತ್ತಾರೆ.
ಅವರ ಬಳಿ ದುರಂತವನ್ನು ವಿವರಿಸಲು ಪದಗಳಿಲ್ಲ. ಆದರೆ ಜನಿಸಿ ಬೆಳೆದ ಊರಿನ ಬಗ್ಗೆ ಹೇಳಲು ನೂರಾರು ಕಥೆಗಳಿವೆ. ಅಂಥ ಊರನ್ನು ಮರೆಯಲು ಅವರೀಗ ಪ್ರಯತ್ನಿಸುತ್ತಿದ್ದಾರೆ. ಇನ್ನೆಷ್ಟು ಕಾಲ ಕಳೆದರೂ ದುರಂತದ ಆ ದಿನಗಳನ್ನು, ಕಣ್ಣಮುಂದೆಯೇ ಕಳೆದುಹೋದವರನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಚೂರಲ್‌ಮಲ ಶಾಲೆಯ ಸಮೀಪದ ರಸ್ತೆಯ ಬದಿಯಲ್ಲಿ ಮನೆ ಇದ್ದ ಜಮಾಲ್ ಮತ್ತು ಖದೀಜ ಅವರ ಕುಟುಂಬದವರೆಲ್ಲರೂ ಬದುಕಿ ಉಳಿದಿದ್ದಾರೆ. ಆದರೆ ಖದೀಜ ಅವರ ದೊಡ್ಡಪ್ಪನ ಕುಟುಂಬ ಸೇರಿದಂತೆ ನಾಲ್ಕು ಮನೆಗಳ 22 ಮಂದಿ ಒಮ್ಮೆಲೇ ಇಲ್ಲವಾಗಿದ್ದಾರೆ. ಇವರ ಪೈಕಿ ಕೆಲವರ ದೇಹ ಮಾತ್ರ ಸಿಕ್ಕಿದೆ. ಉಳಿದವರ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದು ಹೇಳುವಷ್ಟರಲ್ಲಿ ಖದೀಜ ಭಾವುಕರಾದರು. ಬಿಕ್ಕಿಬಿಕ್ಕಿ ಅತ್ತು ‘ಮಾತ್ರೆ ಸೇವಿಸುವುದಕ್ಕಿದೆ’ ಎಂದು ಹೇಳಿ ಅತ್ತ ಸಾಗಿದರು.
‘ಭೂಕುಸಿತ ಉಂಟಾಗುವ ಹಿಂದಿನ ರಾತ್ರಿ ನಮ್ಮ ಮನೆಯ ಹಿಂದೆ ಕೆಸರು ಮಿಶ್ರಿತ ನೀರು ಕಂಡಿದ್ದೆವು. ಸಂದೇಹಗೊಂಡು ಎಲ್ಲರೂ ಮೇಪ್ಪಾಡಿಯ ಕೋಟ್ಟತ್ತರವಯಲ್‌ನಲ್ಲಿರುವ ಮಗಳ ಮನೆಗೆ ಬಂದು ಆಶ್ರಯ ಪಡೆದೆವು. 2018ರಲ್ಲಿ ಉಂಟಾದ ದುರಂತದ ಸಂದರ್ಭದಲ್ಲಿ ಮಗಳ ಮನೆಯವರು ಮೇಪ್ಪಾಡಿಗೆ ಬಂದು ನೆಲೆಸಿದ್ದರು. ಆಕೆಯ ಮನೆಗೆ ಬಂದ ಕಾರಣ ನಾವೆಲ್ಲರೂ ಉಳಿದೆವು’ ಎಂದು ಜಮಾಲ್ ಹೇಳಿದರು.
ಆಸರೆ ಪಡೆದ ಮನೆಯೇ ನಾಶ:
ಖದೀಜ ಅವರ ದೊಡ್ಡಪ್ಪ ಮತ್ತು ಕುಟುಂಬ ಮುಂಡಕ್ಕೈಯಲ್ಲಿದ್ದರು. ಹಿಂದಿನ ದಿನ ಸಣ್ಣದೊಂದು ಕುಸಿತ ಸಂಭವಿಸಿದ್ದರಿಂದ ಹೆದರಿ ಗುಡ್ಡ ಇಳಿದು ಚೂರಲ್‌ಮಲದ ಸಂಬಂಧಿಕರ ಮನೆಯಲ್ಲಿ ಆಸರೆ ಪಡೆದಿದ್ದರು. ಆದರೆ ಆ ಮನೆ ಮತ್ತು ಅಲ್ಲಿದ್ದವರೆಲ್ಲರನ್ನೂ ಕೆಸರುನೀರು ಕೊಚ್ಚಿಕೊಂಡು ಹೋಗಿದೆ.
ಕಾಳಜಿ ಕೇಂದ್ರದಲ್ಲಿರುವ ಮಕ್ಕಳನ್ನು ಆಟದಲ್ಲಿ ತೊಡಗಿಸಿಕೊಂಡು ನೋವು ಮರೆಸಲು ಪ್ರಯತ್ನಿಸುತ್ತಿರುವ ಆಪ್ತಸಮಾಲೋಚರು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.
ಖದೀಜ ಮತ್ತು ಶೆರೀಫಾ ಅಕ್ಕಪಕ್ಕದ ನಿವಾಸಿಗಳು. 2018ರಲ್ಲಿ ಉಂಟಾದ ಪುತ್ತುಮಲ ಭೂಕುಸಿತದಲ್ಲಿ ಬಚಾವಾದ ಶೆರೀಫಾ ಮತ್ತು ಕುಟುಂಬದವರು ಚೂರಲ್‌ಮಲ ಪ್ರದೇಶಕ್ಕೆ ಬಂದಿದ್ದರು. ಗುಡ್ಡಕುಸಿತದಲ್ಲಿ ಭಾರಿ ಪ್ರಮಾಣದ ನೀರು ಬರುವುದು ಕಂಡು ಗುಡ್ಡ ಹತ್ತಿ ಓಡಿಹೋಗಿ ಯಾರದೋ ಮನೆಯಲ್ಲಿ ಆಶ್ರಯ ಪಡೆದು ಕಾಳಜಿ ಕೇಂದ್ರಕ್ಕೆ ತಲುಪಿದ್ದಾರೆ.
‘ನಮ್ಮದು ಹೆಂಚು ಹಾಸಿದ ಸಣ್ಣ ಮನೆ. ಅದರ ಒಂದು ಭಾಗಕ್ಕೆ ಮಾತ್ರ ಹಾನಿಯಾಗಿದೆ. ಆದರೆ ಸ್ವಲ್ಪ ದೂರ ಸಂಬಂಧಿಕರಿದ್ದರು. ಅವರದು ಎರಡು ಮಹಡಿ ಮನೆ. ಅದು ಪೂರ್ಣ ಕೊಚ್ಚಿಕೊಂಡು ಹೋಗಿದೆ. ಜೊತೆಯಲ್ಲಿದ್ದ ಯಾರೂ ಈಗ ನಮ್ಮ ಊರಿನಲ್ಲಿ ಇಲ್ಲ. ಆದ್ದರಿಂದ ಇನ್ನು ಅತ್ತ ತೆರಳುವ ಪ್ರಶ್ನೆಯೇ ಇಲ್ಲ’ ಎಂದು ಶೆರೀಫಾ ಹೇಳಿದರು.
ಮಗಳು ಮತ್ತು ಮೊಮ್ಮಗನೊಂದಿಗೆ ಪ್ರಾಣ ಉಳಿಸಿಕೊಂಡ ಮೊಯ್ದು ಓಳಪರಂಬನ್ ಅವರನ್ನು ಕಾಳಜಿ ಕೇಂದ್ರದ ಸಿಬ್ಬಂದಿ ಹೊರಗೆ ಕರೆದುಕೊಂಡು ಹೋದರು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.
ಬದುಕುಳಿದರೂ ಮೊಯ್ದು ಈಗ ಅತಂತ್ರ
ಮಗಳು ಮತ್ತು ಮೊಮ್ಮಗನನ್ನು ಅತ್ಯಂತ ಸಾಹಸದಿಂದ ಉಳಿಸಿದ ಚೂರಲ್‌ಮಲ ಪಟ್ಟಣದ ಎದುರಿನ ಮನೆಯಲ್ಲಿ ವಾಸವಾಗಿದ್ದ ಮೊಯ್ದು ಓಳಪರಂಬನ್, ಬದುಕಿ ಉಳಿದರೂ ಅತಂತ್ರ. 68 ವರ್ಷ ವಯಸ್ಸಿನ ಅವರು, ದುರಂತದ ಸಂದರ್ಭದಲ್ಲಿ ನಡೆಸಿದ ಹೋರಾಟದಿಂದ ಕಾಲುಗಳಿಗೆ ದೊಡ್ಡ ಗಾಯಗಳಾಗಿವೆ. ದೇಹವೂ ಸೋತಿದೆ. ‘ಭೂಕುಸಿತ ಉಂಟಾದ ವಿಷಯ ತಿಳಿದು ಮಗಳು ರಮ್ಸೀಳಾ ಮತ್ತು ಆಕೆಯ ಮಗು ಹನ್ಸಲ್‌ನನ್ನು ಹಿಡಿದುಕೊಂಡು ಓಡಿದೆ. ಬಾಗಿಲು ತೆಗೆಯುವಷ್ಟರಲ್ಲಿ ಎದೆಯ ಮಟ್ಟಕ್ಕೆ ಕೆಸರು ತುಂಬಿತು. ಅವರಿಬ್ಬರನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಮೂವರೂ ಹೇಗೋ ಉಳಿದೆವು. ಈಗ ಮನಸ್ಸು ಮರಗಟ್ಟಿದೆ. ಏನೊಂದೂ ಗೊತ್ತಾಗುತ್ತಿಲ್ಲ. ಮಗಳು ಮತ್ತು ಮೊಮ್ಮಗನನ್ನು ಹೇಗೆ ಸಾಕುವುದು ಎಂದೇ ತಿಳಿಯುತ್ತಿಲ್ಲ’ ಎಂದು ಅವರು ಹೇಳಿದರು.
ಸೂಜಿಪ್ಪಾರ ಜಲಪಾತದಲ್ಲಿ ಬಿದ್ದಿರುವ ವಾಹನ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.
ಮೊಯ್ದು ಓಳಪರಂಬನ್ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.
12 ಮಂದಿ ಆಪ್ತ ಸಮಾಲೋಚಕರು ಮಲಪ್ಪುರಂ ಜಿಲ್ಲೆಯಿಂದ ಬಂದಿದ್ದೇವೆ. ಮಕ್ಕಳನ್ನು ಆಘಾತದಿಂದ ಹೊರತರುವುದೇ ನಮ್ಮ ಮುಖ್ಯ ಉದ್ದೇಶ.
–ಧನ್ಯಾ ಆಬಿದ್ ಆಪ್ತ ಸಮಾಲೋಚಕಿನನ್ನಮ್ಮನ ಕಂಡವರಿಹರೇ...?
ಕಂಡೋ ನಾಟ್ಟಾರೆಕಂಡೋ ಎನ್ ನಾಟ್ಟಾರೆಉಣ್ಣೀಡೆ ಅಮ್ಮಯೆ ಕಂಡೋರುಂಡೊ... (ಓ ನಾಡಜನರೇ ಓ ಎನ್ನ ಪ್ರೀತಿಯ ಜನಗಳೇ ನನ್ನಮ್ಮನ ಎಲ್ಲಾದರೂ ಕಂಡವರಿಹರೇ...) ಎಂಟು ವರ್ಷದ ಅಮರ್‌ಜೀತ್ ಜೋರಾಗಿ ಹಾಡಿದಾಗ ಮೇಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇದ್ದವರೆಲ್ಲರ ಕಣ್ಣಂಚಿನಿಂದ ನೀರು ಜಿನುಗಿತು. ದುರಂತದಲ್ಲಿ ಸಂಬಂಧಿಕರನ್ನು ಕಳೆದುಕೊಂಡು ಕಾಳಜಿ ಕೇಂದ್ರ ಸೇರಿರುವ ಮಕ್ಕಳಲ್ಲಿ ಭರವಸೆ ಮೂಡಿಸಿ ಅವರನ್ನು ನವಜೀವನದತ್ತ ಕರೆದುಕೊಂಡು ಬರಲು ಕೇರಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಆಪ್ತ ಸಮಾಲೋಚನೆ ಮಾಡುತ್ತಿರುವ ಕಾರ್ಯಕರ್ತರು ಶನಿವಾರ ಮಧ್ಯಾಹ್ನ ಏರ್ಪಡಿಸಿದ್ದ ಮನರಂಜನಾ ಕಾರ್ಯಕ್ರಮದಲ್ಲಿ ಚೂರಲ್‌ಮಲ ಸರ್ಕಾರಿ ಶಾಲೆಯ ಅಮರ್‌ಜೀತ್ ಮಿಮಿಕ್ರಿಯ ನಂತರ ಈ ನಾಡನ್ ಪಾಟ್ಟ್ (ಜಾನಪದ ಗೀತೆ) ಹಾಡಿದರು. ತಂದೆ ತಾಯಿಯನ್ನು ಕಳೆದುಕೊಂಡ ಅನೇಕ ಮಕ್ಕಳು ಅಲ್ಲಿದ್ದರು. ಒಂಬತ್ತು ಮಂದಿಯನ್ನು ಕಳೆದುಕೊಂಡ ಕುಟುಂಬದ ಕುಡಿಗಳೂ ಅಲ್ಲಿದ್ದವು. ಆಪ್ತಸಮಾಲೋಚಕಿಯರು ಹೇಳಿಕೊಟ್ಟ ಆಟದಲ್ಲಿ ಪಾಲ್ಗೊಂಡ ಅವರು ಆಟದ ನಡುವಿನ ಬಿಡುವಿನಲ್ಲಿ ಅಂತರ್ಮುಖಿಯಾಗುತ್ತಿದ್ದುದನ್ನು ಗಮನಿಸಿದ ಎಲ್ಲರ ಕಣ್ಣಂಚಿನಲ್ಲೂ ನೀರು ಜಿನುಗುತ್ತಿತ್ತು. ನನ್ನಮ್ಮನ ಕಂಡಿದ್ದೀರಾ ಎಂದು ಅಮರ್‌ಜೀತ್ ಹಾಡಿದಾಗ ಆ ಕಣ್ಣೀರ ಕಟ್ಟೆ ಒಡೆಯಿತು.
ಕಾಳಜಿ ಕೇಂದ್ರದಲ್ಲಿರುವ ಮಕ್ಕಳನ್ನು ಆಟದಲ್ಲಿ ತೊಡಗಿಸಿಕೊಂಡು ನೋವು ಮರೆಸಲು ಪ್ರಯತ್ನಿಸುತ್ತಿರುವ ಆಪ್ತಸಮಾಲೋಚರು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.
ಪ್ರಪಾತದಲ್ಲಿ ಕಾರು, ಸೈಕಲ್, ಸಿಲಿಂಡರ್
ಮುಂಡಕ್ಕೈ ಗುಡ್ಡದ ತುದಿಯ ಪುಂಜಿರಿಮಟ್ಟಂ ಭಾಗದಿಂದ ಒಡೆದು ಬಂದ ಕೆಸರು ಮಣ್ಣು, ಕೆಳಗುರುಳಿದ ಬಂಡೆಕಲ್ಲುಗಳ ಪ್ರಹಾರಕ್ಕೆ ಸಿಲುಕಿ ಎಂಟು ಕಿಲೋಮೀಟರ್ ವರೆಗಿನ ಪ್ರದೇಶ ನಾಶವಾಗಿದೆ. ಚೂರಲ್‌ಮಲದ ಇಳಿಜಾರು ಪ್ರದೇಶದಿಂದ ಇನ್ನಷ್ಟು ಮನುಷ್ಯರು, ಮನೆ ಮತ್ತು ಸಾಮಗ್ರಿ ಕೊಚ್ಚಿಕೊಂಡು ಹೋದ ಕೆಸರುನೀರು, ಐದು ಕಿಲೊಮೀಟರ್ ದೂರದಲ್ಲಿರುವ ಸೂಜಿಕ್ಕಲ್ಲು ಜಲಪಾತದಿಂದ ಧುಮುಕಿ ಮುಂದೆ ಸಾಗಿದೆ. ಸೂಜಿಕ್ಕಲ್ಲು ಪ್ರದೇಶದಲ್ಲಿ ಮೂರು ಜಲಪಾತಗಳಿದ್ದು ಮೊದಲ ಜಲಪಾತದ ನೀರು ಸುಮಾರು 100 ಅಡಿಗಳಷ್ಟು ಮೇಲಿಂದ ಬಿದ್ದು ಮುಂದೆ ಹರಿಯುವ ಜಾಗದಲ್ಲಿ ಕಾರು, ಮಕ್ಕಳ ಸೈಕಲ್, ಮನೆ ಸಾಮಗ್ರಿ, ಅನೇಕ ಗ್ಯಾಸ್ ಸಿಲಿಂಡರ್‌ಗಳು ಬಿದ್ದುಕೊಂಡಿವೆ.