ADVERTISEMENT

‘ಬಿಟ್ಟು ಹೋಗಿ ಎನ್ನುವ ಅಧಿಕಾರ ಯಾರಿಗೂ ಇಲ್ಲ’

ಅಣ್ತಮ್ಮಂದಿರಂತೆ ಸರ್ಕಾರ ನಡೆಸುತ್ತೇವೆ: ಸಚಿವ ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:45 IST
Last Updated 23 ಜೂನ್ 2019, 19:45 IST
   

ಮೈಸೂರು: ‘ಮೈತ್ರಿ ಸರ್ಕಾರಕ್ಕೆ ಜನಾದೇಶ ಸಿಕ್ಕಿದೆ. ಬಿಟ್ಟು ಹೋಗಿ ಎನ್ನುವ ಅಧಿಕಾರ ಯಾರಿಗೂ ಇಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭಾನುವಾರ ಇಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಂದಿನ ನಾಲ್ಕು ವರ್ಷ ಎಚ್‌.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಜನರು ನೀಡಿದ ತೀರ್ಪಿನನ್ವಯ ಅಣ್ತಮ್ಮಂದಿರಂತೆ ಸಮ್ಮಿಶ್ರ ಸರ್ಕಾರ ನಡೆಸುತ್ತೇವೆ’ ಎಂದರು.

ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆಯುವ ಬಯಕೆ ಕಾಂಗ್ರೆಸ್‌ನವರಿಗೆ ಇದ್ದರೆ ಹಾಗೇ ಮಾಡಲಿ ಎಂದು ಈಚೆಗೆ ವಿಶ್ವನಾಥ್‌ ಹೇಳಿದ್ದರು.‘ವಿವಾದಾತ್ಮಕ ಹೇಳಿಕೆ ನೀಡುವುದರಿಂದ ಎರಡೂ ಪಕ್ಷಗಳಿಗೆ ಹಾನಿಯಾಗಲಿದೆ. ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆ ನಡುವೆ ಬಗೆಹರಿಸಿಕೊಳ್ಳಬೇಕಿದೆ. ಲೋಕಸಭೆ ಚುನಾವಣೆ ಮುಗಿದ ಅಧ್ಯಾಯ. ಮೋದಿ ಮತ್ತೆ ಅಧಿಕಾರಕ್ಕೆ ಬಂದಾಗಿದೆ. ಅವರು ಕೂಡ ನಮ್ಮ ಸರ್ಕಾರ ಉರುಳಿಸಲು ಗಮನಕೊಟ್ಟಿಲ್ಲ’ ಎಂದು ಹೇಳಿದರು.

ADVERTISEMENT

ಬಾಡೂಟ; ಚರ್ಚೆಗೆ ಗ್ರಾಸ: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಸಮಾರಂಭಗಳಿಗೆ ಜಿ.ಟಿ.ದೇವೇಗೌಡ, ಬಿಜೆಪಿ ಸಂಸದ ಪ್ರತಾಪಸಿಂಹ ಭಾನುವಾರ ಒಂದೇ ಕಾರಿನಲ್ಲಿ ಸಂಚರಿಸಿದರು. ಅಲ್ಲದೇ; ತಾಲ್ಲೂಕು ಪಂಚಾಯಿತಿ ಸದಸ್ಯರೊಬ್ಬರ ಮನೆಯಲ್ಲಿ ಒಟ್ಟಿಗೆ ಬಾಡೂಟ ಸವಿದಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವೊದಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.