ತಮ್ಮ ಬಹುಕಾಲದ ಗೆಳೆಯ ಅನಂತಕುಮಾರ್ ಅವರನ್ನು ಶಾಸಕ ಸುರೇಶ್‌ಕುಮಾರ್ ಅಕ್ಷರಗಳಲ್ಲಿ ನೆನಪಿಸಿಕೊಂಡಿರುವ ಪರಿಯಿದು.
---
ನನ್ನ 32 ವರ್ಷದ ರಾಜಕೀಯ ಕ್ಷೇತ್ರದಲ್ಲಿನ ಗೆಳೆಯ ಅನಂತಕುಮಾರ್ ಇನ್ನಿಲ್ಲ ಎಂದು ತಿಳಿದು ಇಂದು ಮುಂಜಾನೆ ತೀವ್ರ ಆಘಾತವಾಯಿತು. ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ. ಕೇಂದ್ರ ಸರಕಾರದಲ್ಲಿ ಅನ್ಯಾನ್ಯ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಸಚಿವರಾಗಿದ್ದವರು ಅನಂತಕುಮಾರ್.
1986ರ ಸೆಪ್ಟೆಂಬರ್ ಇರಬೇಕು, ಸಂಘದ ಕಾರ್ಯಾಲಯ ಕೇಶವಕೃಪದಲ್ಲಿ ಭೇಟಿಯಾಗಿ ಅನಂತಕುಮಾರ್ ‘ಇನ್ನು ಮುಂದೆ ನಿಮ್ಮೊಡನೆ ಬಿಜೆಪಿಯಲ್ಲಿ ಕೆಲಸ ಮಾಡುತ್ತೇನೆ’ಎಂಬ ಸುದ್ದಿ ತಿಳಿಸಿದ್ದರು. ಅದಕ್ಕೆ ಮುನ್ನ ಅವರನ್ನು ವಿದ್ಯಾರ್ಥಿ ಪರಿಷತ್ತಿನ ನಾಯಕರನ್ನಾಗಿ ನೋಡಿದ್ದೆ.1988ರಲ್ಲಿ ನನ್ನ ಮದುವೆಯ ಪುಟ್ಟ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಪ್ರಮುಖರಲ್ಲಿ ಅನಂತ್ ಕುಮಾರ್ ಸಹ ಒಬ್ಬರು.
ಅಂದಿನಿಂದ ನಮ್ಮ ಒಡನಾಟ. ಎಷ್ಟೋ ವಿಚಾರಗಳನ್ನು ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತಲೇ ಚರ್ಚಿಸಿದ್ದೇವೆ. ಅನೇಕ ಕಾರ್ಯಕ್ರಮಗಳಲ್ಲಿ ಜೊತೆಗೂಡಿದ್ದೇವೆ. 1996ರಿಂದ 1998, 1999, 2004, 2009, 2014... ಹೀಗೆ 6 ಬಾರಿ ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಅನಂತ್ ಸೋಲಿಲ್ಲದ ಸರದಾರನೆಂದೇ ಪ್ರಸಿದ್ಧ.
ಅವರಿಗಿದ್ದ ಹಾಸ್ಯಪ್ರಜ್ಞೆ, ಸೂಕ್ಷ್ಮತೆ, ರಾಜಕೀಯ ಪ್ರೌಢಿಮೆ, ಭಾಷಣಕಲೆ... ಇನ್ನು ಕೇವಲ ನೆನಪಷ್ಟೇ! ಮೊನ್ನೆ ತಾನೇ ಪಬ್ಲಿಕ್ ಟಿವಿ ರಂಗ ಹೇಳುತ್ತಿದ್ದರು.
‘ದೆಹಲಿಯ ಅನಂತಕುಮಾರ್ ಮನೆ ಕರ್ನಾಟಕದವರಿಗೆಲ್ಲಾ ಒಂದು ಮನೆಯಾಗಿತ್ತು. ಕರ್ನಾಟಕದ ಯಾವುದೇ ಸಮಸ್ಯೆ ಪರಿಹಾರ, ಕಡತ ಪ್ರಗತಿ, ಕಾರ್ಯವಾಗಬೇಕಾದರೆ ಅನಂತ್ ಕಚೇರಿ ದೊಡ್ಡ ಸಾಧನವಾಗಿತ್ತು. ಅವರಿಗೆ ಹೇಳಿಬಿಟ್ಟರೆ ನಾವು ನಿಶ್ಚಿಂತೆಯಿಂದಯಿರಬಹುದಿತ್ತು’ಎಂದು.
ಬಡ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಅವರು ಒತ್ತುಕೊಟ್ಟ ಜನೌಷಧಿ ಕೇಂದ್ರಗಳು, ಅತ್ಯಂತ ಕಡಿಮೆ ದರದ ಹೃದಯ ರೋಗ ಸಂಬಂಧಿ ಸ್ಟಂಟ್‌ಗಳುಅನಂತ್ ಕುಮಾರ್ ಅವರ ದೊಡ್ಡ ಕೊಡುಗೆ. ದೆಹಲಿಯ ಕನ್ನಡ ಸಂಘಕ್ಕಂತೂ ಅನಂತ್ ಕುಮಾರ್ ಅವರ ಸಹಕಾರ ಅನನ್ಯ.
ಕರ್ನಾಟಕ ರಾಜ್ಯದ ಬಿಜೆಪಿ ಇಂದು ಅಗ್ರಗಣ್ಯ ನಾಯಕನನ್ನು ಕಳೆದುಕೊಂಡಿದೆ. ಕಳೆದ ಕೆಲವು ತಿಂಗಳಿಂದ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸುದ್ದಿ ಕೇಳಿಯೇ ಅನೇಕರು ಮಾನಸಿಕವಾಗಿ ಆಘಾತಗೊಂಡಿದ್ದರು. ವಿದೇಶದಿಂದ ವಾಪಸ್ಸು ಬಂದ ಮೇಲೆ ಅವರಿಗೆ ಯಾವುದೇ ಸೋಂಕು ತಗುಲದಿರಲು ನಮಗೆಲ್ಲಾ ಬಂದ ‘ಮನವಿ’ಯಂತೆ ನಾನು ಅವರನ್ನು ಹೋಗಿ ಕಂಡಿರಲಿಲ್ಲ. ಆದರೆ ಅವರು ಬೇಗ ಗುಣಮುಖರಾಗಿ ಬೇಗ ಸಂಸದೀಯ ಖಾತೆಯನ್ನು ಈ ಮುಂಚಿನ ರೀತಿಯಲ್ಲಿಯೇ ಯಶಸ್ವಿಯಾಗಿ ನಿರ್ವಹಿಸಲಿ ಎಂದು ಹಾರೈಸಿದ್ದೆ.
ನಿನ್ನೆ ರಾತ್ರಿ ನಿಶ್ಚಯಿಸಿದ್ದೆ, ಕೊನೆ ಪಕ್ಷ ಅವರ ಮನೆಯವರನ್ನಾದರೂ ಇಂದು ಹೋಗಿ ಮಾತನಾಡಿಸಲೇಬೇಕು ಎಂದು. ಅದಕ್ಕಾಗಿ ಗೆಳೆಯ ಸುಬ್ಬಣ್ಣನವರ ಜೊತೆ ಮಾತನಾಡಿಯೂ ಇದ್ದೆ. ಇಂದು 11 ಗಂಟೆಗೆ ಹೋಗಿ ಎಂದು ಅವರು ಸಲಹೆ ಮಾಡಿದ್ದರು.
ಆದರೆ...
ಅನಂತಕುಮಾರ್ ನಮ್ಮೆಲ್ಲರ ನೆನಪಿನಿಂದ ಎಂದೂ ಮಾಸುವುದಿಲ್ಲ. ಅವರ ಜೊತೆಗಿನ ನಮ್ಮಒಡನಾಟದ ನೆನಪು ನಮಗೆಲ್ಲಾ ಸ್ಫೂರ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.