ಬೆಳಗಾವಿ: ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೊಸದಾಗಿ ಬಜೆಟ್ ಮಂಡಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಹಿಂದಿನ ಕಾಂಗ್ರೆಸ್ ಸರ್ಕಾರವಿದ್ದಾಗ ನೀಡಿದ ಮಹತ್ವದ ಯೋಜನೆಗಳನ್ನು ನಿಲ್ಲಿಸಬಾರದು ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಬಜೆಟ್ ಕುರಿತ ಚರ್ಚೆ ನಡೆಯಲಿದೆ. ಅಲ್ಲಿ ಸಮಗ್ರವಾಗಿ ಚರ್ಚಿಸಲಾಗುವುದು. ಮುಖ್ಯಮಂತ್ರಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿದ್ದೇವೆ ಎಂದು ಹೇಳಿದರು.
ರೈತರ ಸಾಲ ಮನ್ನಾ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ರೈತರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲೆ ಜಾರಿ ನಿರ್ದೇಶನಾಲಯ ಹಾಗೂ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಯಾವಾಗಲೂ ಶಕ್ತಿವಂತರಿಗೆ ತೊಂದರೆಗಳು ಬರುತ್ತವೆ. ದುರ್ಬಲರಿಗೆ ಯಾರೂ ತೊಂದರೆ ಕೊಡುವುದಿಲ್ಲ. ರಾಜಕಾರಣಕ್ಕೆ ಬಂದ ಮೇಲೆ ಇಂತಹ ದಾಳಿಗೆಲ್ಲ ಹೆದರಲಾದೀತೇ? ಎಲ್ಲವನ್ನೂ ಸಮರ್ಥವಾಗಿ ಎದುರಿಸುತ್ತೇವೆ. ಐಟಿ, ಸಿಬಿಐ ಹಾಗೂ ಇಡಿ ಮೇಲೆ ಗೌರವ ಇದೆ. ಆದರೆ ಅವುಗಳನ್ನು ಬಳಸಿಕೊಂಡು ಸರ್ವಾಧಿಕಾರ ನಡೆಸುವುದು ಬಹಳ ದಿನ ನಡೆಯುವುದಿಲ್ಲ ಎಂದರು.
ಬಜೆಟ್ ಮಂಡಿಸುವುದು ಮುಖ್ಯಮಂತ್ರಿ ಹಕ್ಕು. ಅದನ್ನು ನಿರ್ವಹಿಸಲಿ. ಸರ್ಕಾರ ರಚನೆಗೆ ಬೆಂಬಲ ಕೊಟ್ಟಿದ್ದೇವೆ. ಬಜೆಟ್ ಮಂಡನೆಗೂ ಕೊಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರನ್ನು ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.