ಚಿತ್ರದುರ್ಗ: ‘ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರಿಗೆ ಸಂಬಂಧಿಸಿದ ಪಾಠವನ್ನು ಕೈಬಿಡುವುದಿಲ್ಲ. ಅವರ ಪಾಠ ಇದ್ದರೆ ತಪ್ಪೇನು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಠ್ಯಪುಸ್ತಕ ಸಮಿತಿ ಕಾರ್ಯ ಮುಗಿದಿದೆ. ಹೀಗಾಗಿ ಅದನ್ನು ವಿಸರ್ಜನೆ ಮಾಡಲಾಗಿದೆಯೇ ಹೊರತು ರದ್ದು ಮಾಡಿಲ್ಲ. ಹೊಸ ಸಮಿತಿ ರಚನೆಯ ಅವಶ್ಯಕತೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಪಠ್ಯಪುಸ್ತಕ ವಿಚಾರದಲ್ಲಿ ಚರ್ಚೆ ನಡೆದ ಬಳಿಕ ಪರಿಶೀಲಿಸುವುದಾಗಿ ಆರಂಭದಲ್ಲೇ ಹೇಳಿದ್ದೆ. ವಾಸ್ತವಾಂಶದ ಆಧಾರದ ಮೇರೆಗೆ ಕೆಲ ಬದಲಾವಣೆ ಮಾಡಲಾಗುತ್ತಿದೆ. ಮಠಾಧೀಶರ ಒತ್ತಡಕ್ಕೆ ಮಣಿದು ಈ ತೀರ್ಮಾನ ಕೈಗೊಂಡಿಲ್ಲ’ ಎಂದು ಹೇಳಿದರು.
‘ಪಠ್ಯಪುಸ್ತಕವನ್ನು ನಾನೂ ಗಮನಿಸಿರಲಿಲ್ಲ. ಶುಕ್ರವಾರ ಪರಿಶೀಲಿಸಿದೆ. ಪ್ರೊ.ಬರಗೂರು ರಾಮಚಂದ್ರಪ್ಪ ಪರಿಷ್ಕರಣಾ ಸಮಿತಿ ಹಾಗೂ ಈಗಿನ ಸಮಿತಿ ರಚಿಸಿರುವ ಬಸವಣ್ಣ ಪಠ್ಯದಲ್ಲಿ ಒಂದು ವಾಕ್ಯದ ವ್ಯತ್ಯಾಸವಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅವರಿಗೆ ಇದನ್ನು ಮನವರಿಕೆ ಮಾಡಿಕೊಡಲಾಗಿದೆ’ ಎಂದರು.
‘ನಮ್ಮದು ಬಸವ ಪಥದ ಸರ್ಕಾರ ಎಂದು ಮೊದಲೇ ಹೇಳಿದ್ದೇನೆ. ಬಸವಣ್ಣ
ನವರ ಹಲವು ಅತ್ಯುತ್ತಮ ವಚನಗಳು ಪಠ್ಯದಲ್ಲಿವೆ. ನಾಡಿನ ಮಠಾಧೀಶರು, ಸ್ವಾಮೀಜಿಗಳ ಅಭಿಪ್ರಾಯ ಪಡೆದು ಬಸವಣ್ಣನ ನಿಜ ಇತಿಹಾಸವನ್ನು ಪಠ್ಯ ದಲ್ಲಿ ಸೇರಿಸಲಾಗುವುದು’ ಎಂದರು.
‘ಹೆಡಗೇವಾರ್ ಪಾಠ ಮಕ್ಕಳೇಕೆ ಓದಬೇಕು?’
ಚಿತ್ರದುರ್ಗ: ‘ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರ ಪಾಠವನ್ನು ಮಕ್ಕಳೇಕೆ ಓದಬೇಕು? ಅವರು ಸ್ವಾತಂತ್ರ್ಯ ಹೋರಾಟಗಾರರೇ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಡಗೇವಾರ್ ಪಾಠಕ್ಕೆ ಈಗಲೂ ವಿರೋಧವಿದೆ. ಆರ್‌ಎಸ್‌ಎಸ್ ಬಗ್ಗೆ ಅವರು ಮಾಡಿದ ಭಾಷಣವನ್ನು ಶಾಲಾ ಮಕ್ಕಳು ಓದಬೇಕು ಎಂಬುದು ಸರಿಯಲ್ಲ’ ಎಂದರು.
‘ಕುವೆಂಪು ರಚಿತ ನಾಡಗೀತೆಯನ್ನು ತಿರುಚಲಾಗಿದೆ. ಭಗತ್ ಸಿಂಗ್, ನಾರಾಯಣ ಗುರು ಪಾಠ ತೆಗೆದುಹಾಕಲಾಗಿದೆ. ಈ ಮೂಲಕ ಮಕ್ಕಳಿಗೆ ಏನು ಸಂದೇಶ ನೀಡುತ್ತಿದ್ದೀರಿ’ ಎಂದು ಕಿಡಿಕಾರಿದರು.
ಆಕ್ಷೇಪಣೆ ಸಲ್ಲಿಸಲು ಅವಕಾಶ
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಬಯಸುವವರು ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿಗೆ ಸಲ್ಲಿಸಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
‘ಸಮಿತಿ ಪರಿಷ್ಕರಿಸಿರುವ ಪಠ್ಯ ಪುಸ್ತಕದಲ್ಲಿ ಯಾವುದಾದರೂ ಆಕ್ಷೇಪಾರ್ಹ ವಿಷಯಗಳಿದ್ದರೆ ಅವುಗಳನ್ನು ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸನ್ನು ಸರ್ಕಾರ ಹೊಂದಿದೆ’ ಎಂದು ಮುಖ್ಯಮಂತ್ರಿ ಶುಕ್ರವಾರ ಹೇಳಿಕೆ ನೀಡಿದ ಬೆನ್ನಲ್ಲೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
‘ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಸಂಬಂಧಿಸಿದ ವಿಷಯ ತಜ್ಞರು ಪರಿಶೀಲಿಸಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದೂ ಇಲಾಖೆಯ ಮೂಲಗಳು ಹೇಳಿವೆ.
‘ಬಸವಣ್ಣ ಅವರ ಪಠ್ಯದ ಕುರಿತ ಆಕೇಪಣೆಗಳಿಗೆ ಸಂಬಂಧಿಸಿದಂತೆ ಲಿಂಗಾಯತ ಮಠಗಳ ಸ್ವಾಮೀಜಿಗಳ ಜೊತೆ ಶಿಕ್ಷಣ ಸಚಿವರು, ಇಲಾಖೆಯ ಅಧಿಕಾರಿಗಳು ಮತ್ತು ತಜ್ಞರ ಜೊತೆ ಸಭೆ ನಡೆಸಿದ ಬಳಿಕ ಯಾವ ವಿಷಯವನ್ನು ತೆಗೆಯಬೇಕು, ಯಾವ ವಿಷಯ ಸೇರಿಸಬೇಕು ಎಂದು ಸಲಹೆ ಪಡೆಯಲಿದ್ದಾರೆ. ಈಗಾಗಲೇ ವ್ಯಕ್ತವಾಗಿರುವ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಎಲ್ಲ ವಿಷಯಗಳಿಗೂ ಸ್ಪಷ್ಟನೆ ನೀಡಿ ಮುಖ್ಯಮಂತ್ರಿಗೆ ವರದಿ ಸಲ್ಲಿಸಲಾಗಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನು ವಾಪಸು ಪಡೆಯುವ ಪ್ರಶ್ನೆಯೇ ಇಲ್ಲ. ಪಠ್ಯಪುಸ್ತಕಗಳು ಶೇ 65ರಷ್ಟು ಮುದ್ರಣಗೊಂಡಿವೆ. ಈ ಹಂತದಲ್ಲಿ ಪಠ್ಯದ ಭಾಗವನ್ನು ತೆಗೆಯಲು ಸಾಧ್ಯವಿಲ್ಲ. ಅದರ ಬದಲು ಯಾವುದನ್ನು ಮಕ್ಕಳಿಗೆ ಬೋಧಿಸಬೇಕು, ಯಾವುದನ್ನು ಬಿಡಬೇಕು ಎಂಬ ಬಗ್ಗೆ ಶಿಕ್ಷಕರಿಗೆ ಸೂಚನೆ ನೀಡಲಾಗುವುದು’ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.