ADVERTISEMENT

ಉತ್ತರ ಒಳನಾಡು, ಕರಾವಳಿಯಲ್ಲಿ ಬಿಸಿಗಾಳಿ ಬೀಸುವ ಆತಂಕ: ತಜ್ಞರ ಎಚ್ಚರಿಕೆ

ಹಲವು ರಾಜ್ಯಗಳಲ್ಲಿ ಉಷ್ಣ ಅಲೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 15:56 IST
Last Updated 4 ಮಾರ್ಚ್ 2024, 15:56 IST
ಎ.ಪ್ರಸಾದ್‌
ಎ.ಪ್ರಸಾದ್‌   

ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಧಗೆ ಹೆಚ್ಚುತ್ತಿದ್ದು, ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ಉತ್ತರ ಒಳನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಾರ್ಚ್‌ ಕೊನೆ ವಾರ, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬಿಸಿಗಾಳಿ ಬೀಸುವ ಆತಂಕ ಇದೆ ಎಂದು ಭಾರತೀಯ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

‘ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬೀದರ್, ಬಳ್ಳಾರಿ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿ ಬಿಸಿಗಾಳಿ ಬೀಸಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೂ ಉಷ್ಣ ಅಲೆಯ ಆತಂಕವಿದೆ’ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಎ.ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

‘ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್‌ ದಾಟಿ, ಇದೇ ತಾಪಮಾನ ಕೆಲವು ದಿನಗಳು ಮುಂದುವರೆಯುವ ಸಾಧ್ಯತೆ ಇರುತ್ತದೆ. ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಗರಿಷ್ಠ ಉಷ್ಣಾಂಶ ವಾಡಿಕೆಗಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ದಾಖಲಾಗುವ ಸಾಧ್ಯತೆಯಿದೆ. ಇದು ಬಿಸಿಗಾಳಿಗೆ ಕಾರಣವಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಉಷ್ಣ ಅಲೆ ವಾಡಿಕೆಗಿಂತ ಹೆಚ್ಚಿನ ದಿನಗಳು ಇರಲಿದೆ. ಇದರಿಂದ ಸ್ವಲ್ಪ ಸಮಸ್ಯೆ ಆಗಲಿದೆ’ ಎಂದು ಎಚ್ಚರಿಸಿದರು.

‘ದೇಶದ ಉತ್ತರ ಭಾಗದಲ್ಲಿ ಈಗ ಆಲಿಕಲ್ಲು ಸಹಿತ ಮಳೆಯಾಗುತ್ತಿದ್ದು, ಅಲ್ಲಿ ವಾತಾವರಣದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಉತ್ತರದಿಂದ ದಕ್ಷಿಣದತ್ತ ಗಾಳಿ ಬೀಸಿದ್ದರೆ ತಾಪಮಾನ ತಗ್ಗುವ ಸಾಧ್ಯತೆಯಿತ್ತು. ಆ ಭಾಗದಿಂದ ರಾಜ್ಯದ ಕಡೆಗೆ ಗಾಳಿ ಬೀಸುತ್ತಿಲ್ಲ. ಪೂರ್ವ ಹಾಗೂ ಆಗ್ನೇಯ ದಿಕ್ಕಿನಿಂದ ಗಾಳಿ ಬೀಸುತ್ತಿರುವ ಪರಿಣಾಮ ಬಿಸಿಗಾಳಿ ಇದೆ’ ಎಂದು ಹೇಳಿದರು.

‘ರಾಜ್ಯದ ಯಾವುದೇ ಭಾಗದಲ್ಲೂ ಫೆಬ್ರುವರಿ ತಿಂಗಳಲ್ಲಿ ಮಳೆಯೇ ಆಗಿಲ್ಲ. ಇದರಿಂದಲೂ ತಾಪಮಾನ ಏರಿಕೆಯಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದ ಕರಾವಳಿ, ಪಶ್ಚಿಮಘಟ್ಟ ವ್ಯಾಪ್ತಿಯ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಂಭವವಿದೆ. ಏಪ್ರಿಲ್‌, ಮೇ ತಿಂಗಳ ಕೆಲವು ದಿನ ಆಲಿಕಲ್ಲು ಸಹಿತ ಮಳೆ ಆಗಲಿದೆ’ ಎಂದು ಮಾಹಿತಿ ನೀಡಿದರು.

ಆಶಾದಾಯಕ ಮುಂಗಾರು

‘ಎಲ್‌ ನಿನೊ ವಿದ್ಯಮಾನದ ಪ್ರಭಾವ ನಿಧಾನವಾಗಿ ತಗ್ಗುತ್ತಿದೆ. ಹೀಗಾಗಿ ಈ ಬಾರಿ ಮುಂಗಾರು ಅವಧಿಯಲ್ಲಿ ಆಶಾದಾಯಕ ಮಳೆ ಆಗುವ ಸಾಧ್ಯತೆಯಿದೆ. ಆದರೆ ಈಗಲೇ ನಿಖರವಾಗಿ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಪ್ರಸಾದ್‌ ಹೇಳಿದರು. ‘ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳಲ್ಲಿ ಉಂಟಾಗುವ ಚಂಡಮಾರುತದಿಂದ ಹೆಚ್ಚಿನ ಮಳೆಯಾದರೆ ಮುಂದಿನ ಚಳಿಗಾಲದ ಅವಧಿಯಲ್ಲಿ ಚಳಿಯ ತೀವ್ರತೆ ಹೆಚ್ಚಿರಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.