ADVERTISEMENT

ಕರಾವಳಿಯಲ್ಲಿ ಭಾರಿ ಮಳೆ, ಭೂಕುಸಿತ ಸಾಧ್ಯತೆ: ಹವಾಮಾನ ಇಲಾಖೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 14:42 IST
Last Updated 20 ಜೂನ್ 2024, 14:42 IST
   

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಬಿರುಗಾಳಿಯ ಜತೆಗೆ ಭೂಕುಸಿತ ಕಾಣಿಸಿಕೊಳ್ಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಬಲವಾದ ಗಾಳಿಯ ಒಮ್ಮುಖದ ಕಾರಣದಿಂದಾಗಿ, ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಪಕ್ಕದ ಜಿಲ್ಲೆಗಳಲ್ಲಿ 23ರಂದು ವಿಪರೀತ ಮಳೆಯಾಗುವ ಸಾಧ್ಯತೆಯಿದೆ. ಬಲವಾದ ಗಾಳಿ ಮತ್ತು ಭೂಕುಸಿತದ ಸಂಭವಗಳೂ ಇವೆ. ಶುಕ್ರವಾರದಿಂದ ರಾಜ್ಯದ ವಿವಿಧೆಡೆ ಮಳೆಯ ತೀವ್ರತೆ ಹೆಚ್ಚಲಿದೆ ಎಂದು ತಿಳಿಸಿರುವ ಇಲಾಖೆ, ಕೆಲ ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಿದೆ.

ಕರಾವಳಿಯ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಶುಕ್ರವಾರ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ 30ರಿಂದ 40 ಕಿ.ಮೀ. ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಉದ್ದಕ್ಕೂ ಹಾಗೂ ಹೊರಗೆ ಚಂಡಮಾರುತದ ಹವಾಮಾನವು ಮೇಲುಗೈ ಸಾಧಿಸುವ ಸಂಭವವಿದೆ. ಗಾಳಿಯು ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ತಿಳಿಸಿದೆ. 

ADVERTISEMENT

ರಾಜ್ಯದ 10 ಜಿಲ್ಲೆಗಳಿಗೆ ಶನಿವಾರ ಭಾರಿ ಮಳೆಯ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿಯ ಮೂರು ಜಿಲ್ಲೆಗಳಿಗೆ ‘ರೆಡ್‌ ಅಲರ್ಟ್’ ನೀಡಲಾಗಿದೆ. ಭಾನುವಾರ 13 ಜಿಲ್ಲೆಗಳಿಗೆ ಭಾರಿ ಮಳೆಯ ಅಲರ್ಟ್ ಘೋಷಿಸಲಾಗಿದೆ. 

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಕೆಲವೊಮ್ಮೆ ಮೇಲ್ಮೈ ಗಾಳಿಯು ಪ್ರಬಲವಾಗುವ ಸಂಭವವಿದೆ ಎಂದು ಇಲಾಖೆ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.