ADVERTISEMENT

ಪಶ್ಚಿಮ ಘಟ್ಟ: 56,825 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ

ಮತ್ತೆ ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ

ಯತೀಶ್ ಕುಮಾರ್ ಜಿ.ಡಿ
Published 9 ಜುಲೈ 2022, 23:30 IST
Last Updated 9 ಜುಲೈ 2022, 23:30 IST
ಪಶ್ಚಿಮ ಘಟ್ಟ (ಸಂಗ್ರಹ ಚಿತ್ರ)
ಪಶ್ಚಿಮ ಘಟ್ಟ (ಸಂಗ್ರಹ ಚಿತ್ರ)   

ಬೆಂಗಳೂರು:ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದ 56,825 ಚದರ ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಮೂರು ಬಾರಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು.

ಅಳಿವಿನ ಅಂಚಿನಲ್ಲಿರುವ ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲ, ನದಿ ಮೂಲಗಳನ್ನುಹೊಂದಿರುವ ಪಶ್ಚಿಮ
ಘಟ್ಟದ ಕೆಲ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದ ಬಳಿಕವಷ್ಟೇ ಈ ಪ್ರದೇಶಕ್ಕೆ ಯುನೆಸ್ಕೊ ವಿಶ್ವಪಾರಂಪರಿಕ ತಾಣಗಳ ಮಾನ್ಯತೆ ದೊರಕುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದ ಪ್ರಯತ್ನ ಸಾಗಿದೆ. ಆದರೆ ಕೇಂದ್ರದ ಈ ಪ್ರಯತ್ನಕ್ಕೆ ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯಗಳು ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಲೇ ಇವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಜುಲೈ 6ರಂದು ಹೊಸದಾಗಿ ಕರಡು ಅಧಿಸೂಚನೆ ಹೊರಡಿಸಿದೆ.1986ರ ಪರಿಸರ ಸಂರಕ್ಷಣಾ ಕಾಯ್ದೆಯಡಿ ಈ ಅಧಿಸೂಚನೆ ಹೊರಡಿಸಿದ್ದು,ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ.

ಪಶ್ಚಿಮ ಘಟ್ಟದ ಜೀವ ವೈವಿಧ್ಯ ಉಳಿಸಲು ಘಟ್ಟದ 59,940 ಚ.ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಸಂರಕ್ಷಿಸಬೇಕು ಎಂದು ಕೇಂದ್ರ ಸರ್ಕಾರ ರಚಿಸಿದ್ದಉನ್ನತ ಮಟ್ಟದ ಸಮಿತಿಯು 2013ರಲ್ಲಿ ವರದಿ ಸಲ್ಲಿಸಿತ್ತು.

ADVERTISEMENT

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕೆಲ ಬಗೆಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

l ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಯನ್ನು ಪೂರ್ಣ ನಿಷೇಧಿಸಲಾಗಿದೆ. ಹಾಲಿ ನಡೆಯುತ್ತಿರುವ ಗಣಿಗಾರಿಕೆಗಳನ್ನು ಅಂತಿಮ ಅಧಿಸೂಚನೆ ಹೊರಬಿದ್ದ ದಿನದಿಂದ ಐದು ವರ್ಷದೊಳಗೆ ತೆರವುಗೊಳಿಸಲಾಗುತ್ತದೆ.

l ಹೊಸದಾಗಿ ಯಾವುದೇ ಉಷ್ಣ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಅಸ್ತಿತ್ವದಲ್ಲಿರುವ ಸ್ಥಾವರಗಳ ವಿಸ್ತರಣೆಗೂ ಅವಕಾಶವಿಲ್ಲ.

l ಕೇಂದ್ರ ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ‘ಕೆಂಪು’ ಪಟ್ಟಿಯಲ್ಲಿ ನಿಗದಿಪಡಿಸಿರುವ ಕೈಗಾರಿಕೆಗಳ ಸ್ಥಾಪನೆ ಮತ್ತು ವಿಸ್ತರಣೆಯನ್ನು ನಿಷೇಧಿಸಲಾಗಿದೆ. ಆರೋಗ್ಯ ರಕ್ಷಣಾ ಸಂಸ್ಥೆಗಳೂ ಸೇರಿದಂತೆ ಅಸ್ತಿತ್ವದಲ್ಲಿರುವ ‘ಕೆಂಪು’ ಪಟ್ಟಿಯ ಎಲ್ಲ ಕೈಗಾರಿಕೆಗಳ ಮುಂದುವರಿಕೆಗೆ ಅವಕಾಶ ಕಲ್ಪಿಸಲಾಗಿದೆ.

l 20,000 ಚ.ಮೀಟರ್‌ ವಿಸ್ತೀರ್ಣಕ್ಕೂ ಹೆಚ್ಚಿನ ಕಟ್ಟಡ, ನಿರ್ಮಾಣಕ್ಕೆ ಸಂಬಂಧಿಸಿದ ಹೊಸ ಯೋಜನೆಗಳು, 50 ಹೆಕ್ಟೇರ್‌ ಅಥವಾ 1,50,000 ಚ.ಮೀಟರ್‌ಗಿಂತ ಹೆಚ್ಚಿನ ವಿಸ್ತೀರ್ಣದ ಟೌನ್‌ಶಿಪ್‌ ಮತ್ತು ಪ್ರದೇಶಾಭಿವೃದ್ಧಿ ಯೋಜನೆಗಳನ್ನು ನಿಷೇಧಿಸಲಾಗಿದೆ. ಆದರೆ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಈಗಾಗಲೇ ಇರುವ ವಸತಿಗಳ ದುರಸ್ತಿ, ವಿಸ್ತರಣೆ, ನವೀಕರಣಕ್ಕೆ ನಿರ್ಬಂಧವಿಲ್ಲ.

ಯೋಜನೆ, ಚಟುವಟಿಕೆಗಳ ನಿಯಂತ್ರಣ ಹೇಗೆ?

l ಪರಿಸರದ ಮೇಲೆ ಬೀರುವ ಪರಿಣಾಮವನ್ನು ಅವಲೋಕಿಸಿಹೊಸ ಜಲವಿದ್ಯುತ್ ಯೋಜನೆಗಳಿಗೆ ಅವಕಾಶ ನೀಡಬಹುದು. 2006ರ ಸೆಪ್ಟೆಂಬರ್ 14ರಂದು ಹೊರಡಿಸಲಾಗಿರುವ ಆದೇಶಕ್ಕೆ ಅನುಗುಣವಾಗಿ ಈ ಯೋಜನೆಯ ಮೌಲ್ಯಮಾಪನ ಆಗಬೇಕು.

l ಪಶ್ಚಿಮ ಘಟ್ಟಗಳ ಪ್ರದೇಶಕ್ಕೆ ಸಂಬಂಧಿಸಿದ ಈ ಅಧಿಸೂಚನೆಯ ನಿಯಮ ಜಾರಿ ಮತ್ತು ಮೇಲ್ವಿಚಾರಣೆ ಅಧಿಕಾರ ರಾಜ್ಯ ಸರ್ಕಾರದ್ದು.

l ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಮೇಲ್ವಿಚಾರಣಾ ಕೇಂದ್ರ ಸ್ಥಾಪಿಸುತ್ತದೆ.

ಗಾಡ್ಗೀಳ್‌, ಕಸ್ತೂರಿರಂಗನ್‌ ಸಮಿತಿ ಹೇಳಿದ್ದೇನು?

ಪಶ್ಚಿಮ ಘಟ್ಟದ ಜೀವ ವೈವಿಧ್ಯದ ಸಂರಕ್ಷಣೆಗೆ ಉದ್ದೇಶದಿಂದ ಹಿರಿಯ ವಿಜ್ಞಾನಿ ಮಾಧವ ಗಾಡ್ಗೀಳ್‌ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಈ ಹಿಂದೆ ಸಮಿತಿ ರಚಿಸಿತ್ತು. ಈ ಸಮಿತಿಯು ಆಗಸ್ಟ್‌ 31ರ 2011ರಲ್ಲಿ ಘಟ್ಟದ 1,29,037 ಚದರ ಕಿ.ಮೀ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಬಹುದು ಎನ್ನುವ ಶಿಫಾರಸು ಮಾಡಿತ್ತು.ಘಟ್ಟದ ಶೇ 64ರಷ್ಟು ಪ್ರದೇಶದಲ್ಲಿ ಅಭಿವೃದ್ಧಿಗೆ ಕೆಲ ನಿಯಂತ್ರಣ ಹೇರಬೇಕು ಎಂದು ಶಿಫಾರಸು ಮಾಡಿತ್ತು. ಇದಕ್ಕೆ ರಾಜಕೀಯವಾಗಿ ವಿರೋಧ ಎದುರಾದಾಗ ಕೇಂದ್ರ ಸರ್ಕಾರ ಗಾಡ್ಗೀಳ್‌ ವರದಿ ಪರಿಶೀಲನೆಗೆ 2013ರ ಏಪ್ರಿಲ್‌ 15ರಂದು ಡಾ.ಕೆ.ಕಸ್ತೂರಿ ರಂಗನ್‌ ಸಮಿತಿ ರಚಿಸಿತ್ತು. ಈ ಸಮಿತಿ ಅದೇ ವರ್ಷದ ನ. 13ರಂದು ವರದಿ ನೀಡಿ, ಘಟ್ಟದ ಶೇ 37ರಷ್ಟು ಅರಣ್ಯ ಪ್ರದೇಶವನ್ನು ಅಂದರೆ 59,940 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.